ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಾರಿಗೆ ನೌಕರರು ಗುರುವಾರ(ಫೆಬ್ರವರಿ 19) ‘ಬೆಂಗಳೂರು ಚಲೋ’ಗೆ ಕರೆ ನೀಡಿರುವುದರಿಂದ ಹಲವರು ಕರ್ತವ್ಯಕ್ಕೆ ಗೈರಾಗುವ ಸಾಧ್ಯತೆ ಇದೆ. ಪರಿಣಾಮವಾಗಿ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ(KSRTC) ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ, ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರಿಗೆ ಸೂಚನೆ ನೀಡಿದ್ದು, ಕರ್ತವ್ಯಕ್ಕೆ ಗೈರಾದಲ್ಲಿ ವೇತನ ಕಡಿತ ಸೇರಿದಂತೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರತಿಭಟನೆಯಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ.
ಗೈರಾಗುವ ನೌಕರರ ಪಟ್ಟಿಯನ್ನು ಘಟಕವಾರು ಸಿದ್ಧಪಡಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ‘ಕೆಲಸ ಮಾಡದಿದ್ದಾಗ ವೇತನವಿಲ್ಲ’ ಎಂಬ ತತ್ವದಡಿ ಕ್ರಮ ಜರುಗಿಸಲಾಗುತ್ತದೆ ಎಂದು ಎಂಡಿ ಸ್ಪಷ್ಟಪಡಿಸಿದ್ದಾರೆ.
ಪ್ರಯಾಣಿಕರು ಮುನ್ನೆಚ್ಚರಿಕೆ ವಹಿಸಲು ಮನವಿ
ಅನಧಿಕೃತವಾಗಿ ಕರ್ತವ್ಯಕ್ಕೆ ಗೈರಾಗುವ ನೌಕರರ ವಿರುದ್ಧ ಹೈಕೋರ್ಟ್ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಆದಾಗ್ಯೂ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾರಿಗೆ ಸೇವೆ ಭಾಗಶಃ ವ್ಯತ್ಯಯವಾಗುವ ಸಾಧ್ಯತೆ ಇದ್ದು, ಪ್ರಯಾಣಿಕರು ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.
ರಜೆ ನೀಡಬೇಡಿ: ಸಾರಿಗೆ ಅಧಿಕಾರಿಗಳಿಗೆ ಸೂಚನೆ
ಗುರುವಾರ ಬಸ್ ಸಂಚಾರದಲ್ಲಿ ವ್ಯತ್ಯಯವಾಗದಂತೆ ಕ್ರಮಕೈಗೊಳ್ಳಬೇಕೆಂದು ಸಾರಿಗೆ ಅಧಿಕಾರಿಗಳಿಗೆ ಕೆಎಸ್‌ಆರ್‌ಟಿಸಿ ಎಂಡಿ ಅಕ್ರಂ ಪಾಷಾ ಸೂಚನೆ ನೀಡಿದ್ದಾರೆ. ತುರ್ತು, ಅನಿವಾರ್ಯ ಸಂದರ್ಭ ಹೊರತುಪಡಿಸಿ ನೌಕರರಿಗೆ ಯಾವುದೇ ರಜೆ ನೀಡಬೇಡಿ. ಇದು ವಾರದ ರಜೆ ಅಥವಾ ದೀರ್ಘಾವಧಿ ರಜೆಯಲ್ಲಿರುವವರಿಗೆ ಅನ್ವಯಿಸುವುದಿಲ್ಲ. ಅಗತ್ಯವಿದ್ದರೆ ವಾರದ ರಜೆಯನ್ನು ರದ್ದುಪಡಿಸಿ ಕೆಲಸಕ್ಕೆ ನಿಯೋಜಿಸಬೇಕು ಎಂದು ಅಕ್ರಂ ಪಾಷಾ ನಿರ್ದೇಶನ ನೀಡಿದ್ದಾರೆ.
ಸಾರಿಗೆ ನೌಕರರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫ್ರೀಡಂಪಾರ್ಕ್ನಲ್ಲಿ ಜನವರಿ 29ರ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಪ್ರತಿಭಟನೆ ನಡೆಸಲು ಕರೆ ಕೊಡಲಾಗಿತ್ತು. ಆದರೆ, ಜನವರಿ 28ರಂದು ಕಾರ್ಮಿಕರ ಮುಖಂಡ ಅನಂತ್ ಸುಬ್ಬರಾವ್ ನಿಧನರಾದ ಹಿನ್ನೆಲೆ ಪ್ರತಿಭಟನೆಯ ಕಾವು ತಣ್ಣಗಾಗಿತ್ತು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಸ್, ಬೈಕ್ ಮುಖಾಮುಖಿ ಡಿಕ್ಕಿ; ಸವಾರ ಗಂಭೀರ ಗಾಯ
2020ರ ಜನವರಿ 1ರಿಂದ 2023ರ ಫಬ್ರವರಿ 28ರವರೆ ಒಟ್ಟು 38 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಹಾಗೂ 2024ರ ಜನವರಿ 01ರಿಂದ ನಾಲ್ಕು ವರ್ಷಗಳ ವೇತನ ಒಪ್ಪಂದ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಸಾರಿಗೆ ನೌಕರರು ಆಗ್ರಹಿಸುತ್ತಿದ್ದಾರೆ. ಈ ಹಿಂದೆ ಮುಷ್ಕರ ನಡೆಸಿದ್ದಾಗ ಮನವೊಲಿಸಿದ್ದ ಸರ್ಕಾರ, ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿತ್ತು. ಆದರೆ, ನಂತರ ಕ್ರಮ ಕೈಗೊಂಡಿರಲಿಲ್ಲ.





