ಜೊಮಾಟೊ ತನ್ನ ಪ್ಲಾಟ್‌ಫಾರ್ಮ್ ಬೆಲೆಯನ್ನು 19% ಹಚ್ಚಿಸಿದೆ. ಈ ಮೂಲಕ ಪ್ರತಿ ಆರ್ಡರ್‌ಗೆ ಗ್ರಾಹಕರು 14.90 ರೂ. ಹೆಚ್ಚು ಪಾವತಿಸಬೇಕಾಗಿದೆ. ಹೆಚ್ಚುತ್ತಿರುವ ತೈಲ ಬೆಲೆ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಜೊಮೊಟೊ ಪ್ರತಿಸ್ಪರ್ಧಿ ಸ್ವಿಗ್ಗಿ ಕೂಡ ತನ್ನ ಪ್ಲಾಟ್‌ಫಾರ್ಮ್ ದರವನ್ನು 14.99 ರೂ. ನಿಗದಿಸಿದೆ.
ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಬಹುಪಾಲು ಮಂದಿ ಆನ್ಲೈನ್ ಡೆಲಿವರಿ ಆಪ್ ಮೂಲಕ ಫುಡ್ ಡೆಲಿವರಿ ಮಾಡಿ ತಿನ್ನುವ ರೂಢಿಗೆ ಬಿದ್ದು ಇಂತಹ ಆಪ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಈ ಹೊಸ ದರ ಇಂತಹ ರೆಗ್ಯುಲರ್ ಗ್ರಾಹಕರಿಗೆ ಹೊರೆಯಾಗಬಹುದು.
ಇತ್ತೀಚಿಗಷ್ಟೆ ರೈಡ್ ಬುಕಿಂಗ್ ಜೊತೆಗೆ ಬೆಂಗಳೂರಿನ ಗ್ರಾಹಕರಿಗೆ ಮಾತ್ರ ಫುಡ್ ಡೆಲಿವರಿ ಆಯ್ಕೆಯನ್ನು ಒದಗಿಸುತ್ತಿರುವ ರ್ಯಾಪಿಡೊ ತನ್ನ ಪ್ಲಾಟ್‌ಫಾರ್ಮ್ ದರಗಳಲ್ಲಿ ಯಾವುದೇ ಪರಿಷ್ಕರಣೆ ಮಾಡುವುದಿಲ್ಲ ಎಂಬ ಸಮಾಧಾನದ ಸುದ್ದಿ ನೀಡಿದೆ.ಗ್ರಾಹಕರು ಅಥವಾ ರೆಸ್ಟೊರೆಂಟ್‌ಗಳಿಗೆ ಯಾವ ತೆರನಾದ ಹೆಚ್ಚುವರಿ ಶುಲ್ಕಗಳನ್ನು ವಿಧಿಸುವುದಿಲ್ಲ, ಕೇವಲ ಡೆಲಿವರಿ ಚಾರ್ಜ್ ಮಾತ್ರವೇ ಸ್ವೀಕರಿಸುತ್ತೇವೆ ಎಂದು ಕಂಪನಿ ಹೇಳಿಕೆ ನೀಡಿದೆ.

ಎಲ್‌ಪಿಜಿ ಹಾಗೂ ತೈಲ ಬೆಲೆಗಳ ಏರಿಕೆಯಿಂದ ಈ ದರ ಬದಲಾವಣೆ ಜಾರಿಗೆ ಬಂದಿದೆ. ಪೆಟ್ರೋಲ್ ಬೆಲೆಯ ಜಿಗಿತ ಸಾಮಾನ್ಯವಾಗಿ ಸಾಗಾಣೆ ವೆಚ್ಚವನ್ನು ಅಧಿಕವಾಗಿಸುತ್ತದೆ ಆದರಿಂದ ಪ್ಲಾಟ್‌ಫಾರ್ಮ್ ದರದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ದರ ಪರಿಷ್ಕರಿಸಿದ ಕಂಪನಿಗಳು ಸ್ಪಷ್ಟನೆ ನೀಡಿವೆ.ಬಳಕೆದಾರರ ಮೇಲೆ ಡೆಲಿವರಿ ವೆಚ್ಚ ಜಾಸ್ತಿ ಪಾವತಿಸಬೇಕಾದ ಜೊತೆಗೆ ಜಿಎಸ್‌ಟಿ ಒಳಗೊಂಡ ಪ್ಲಾಟಫಾರ್ಮ್ ವೆಚ್ಚದ ಬಿಸಿಯೂ ತಗುಲಬಹುದು.
ಒತ್ತಡದ ಜೀವನ ಶೈಲಿ, ಅಡುಗೆ ಮಾಡಲು ಸಮಯವಿಲ್ಲ, ವಿಶೇಷವಾಗಿ ಏನಾದರು ತಿನ್ನಬೇಕು ಎಂದು ಸ್ವಿಗ್ಗಿ ಜೊಮಾಟೊ ಮೂಲಕ ಫುಡ್ ಆರ್ಡರ್ ಮಾಡುವವರಿಗೆ ಈ ಕಂಪನಿಗಳು ಪರಸ್ಪರ ಸ್ಪರ್ಧೆಗೆ ಬಿದ್ದರೆ ಈಗ ನಿಗದಿಯಾದ ಬೆಲೆ ಇನ್ನೂ ಏರಿಕೆ ಕಾಣುವ ಸಂಭವ ಒದಗಬಹುದು. ಪ್ರಸ್ತುತ ಇರಾಕ್ ಮತ್ತು ಕೊಲ್ಲಿ ದೇಶಗಳ ಅನಿಲ ಮತ್ತು ತೈಲ ಘಟಕಗಳ ಮೇಲೆ ಆಗುತ್ತಿರುವ ಬಾಂಬ್ ದಾಳಿ ಎಲ್ಲಾ ವಾಣಿಜ್ಯ ವಹಿವಾಟುಗಳ ಮೇಲೆ ಪರಿಣಾಮ ಬೀರಲಿದೆ.





