ಪಿಟಿಸಿಎಲ್ (PTCL) ಕಾಯ್ದೆ ತಿದ್ದುಪಡಿಯ ನಂತರವೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಅನ್ಯಾಯವಾಗುತ್ತಿದ್ದು, ರಾಜ್ಯ ಸರ್ಕಾರ 10 ದಿನಗಳೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ‘ಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ’ ಎಚ್ಚರಿಕೆ ನೀಡಿದೆ.
ಕಾಯ್ದೆ ತಿದ್ದುಪಡಿಯಾದರೂ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ, ಕಾನೂನುಬಾಹಿರವಾಗಿ ದಲಿತರ ಮಂಜೂರಾದ ಜಮೀನುಗಳನ್ನು ಕಬಳಿಸಲಾಗುತ್ತಿದೆ. ಕಂದಾಯ ಇಲಾಖೆ ಅಧಿಕಾರಿಗಳು (ಎಸಿ, ಡಿಸಿ) ಹಾಗೂ ನ್ಯಾಯಾಲಯಗಳಿಂದಲೂ ತಮಗೆ ಅನ್ಯಾಯವಾಗುತ್ತಿದ್ದು, ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾದರೂ ಭೂಮಿ ಕಳೆದುಕೊಂಡವರ ಸಮಸ್ಯೆ ಬಗೆಹರಿಸಿಲ್ಲ. ಹೀಗಾಗಿ, ಹಿರಿಯ ಹೋರಾಟಗಾರರ ಮಾರ್ಗದರ್ಶನದಂತೆ, ಮುಂದಿನ 10 ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಸಮಿತಿ ಎಚ್ಚರಿಸಿದೆ.
ಸಮಿತಿಯ ಪ್ರಮುಖ ಬೇಡಿಕೆಗಳು:
ಕಲಂ 5(1)D ರದ್ದತಿಗೆ ಆಗ್ರಹ: 2023ರ ತಿದ್ದುಪಡಿಯಲ್ಲಿ ಸೇರಿಸಲಾಗಿರುವ ಕಲಂ 5(1)D ಯನ್ನು ಕೈಬಿಡಬೇಕು.
ಎಲ್ಲಾ ಮಂಜೂರಾತಿ ಭೂಮಿಗಳ ಸೇರ್ಪಡೆ: ಪಿಟಿಸಿಎಲ್ ಕಾಯ್ದೆ ಕಲಂ 3(1) B ಅಡಿಯಲ್ಲಿ ಬರುವ ತೋಟಿ, ನಿರಗಂಟಿ, ತಳವಾರಿ, ಕುಲವಾಡಿಕೆ ಇನಾಂ ಭೂಮಿಗಳು, ಕಿಮ್ಮತ್ತು, ಜಿಎಂಎಫ್, ಭೂ ಸುಧಾರಣೆ ಕಾಯ್ದೆ ಅಡಿಯಲ್ಲಿ ಮಂಜೂರಾದ ಭೂಮಿ ಹಾಗೂ ಸರ್ಕಾರದಿಂದ ಮಂಜೂರಾದ ಎಲ್ಲ ಬಗೆಯ ಜಮೀನುಗಳು ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಬರುತ್ತವೆ ಎಂದು ಸ್ಪಷ್ಟಪಡಿಸಬೇಕು.
ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ: 2023ರ ತಿದ್ದುಪಡಿ ಕಾಯ್ದೆಯನ್ನು ಉಲ್ಲಂಘಿಸುತ್ತಿರುವ ಕಂದಾಯ ಇಲಾಖೆಯ ಡಿಸಿ, ಎಸಿ, ತಹಶೀಲ್ದಾರ್, ಆರ್‌ಐ, ವಿಎ ಮತ್ತಿತರ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು.
ಇದನ್ನು ಓದಿದ್ದೀರಾ? ಫಿಫಾ ವಿಶ್ವಕಪ್ 2026 | ಯುದ್ಧಗಳ ಕಾರ್ಮೋಡದ ನಡುವೆ ಫುಟ್‌ಬಾಲ್ ಹಬ್ಬಕ್ಕೆ 100 ದಿನಗಳ ಕ್ಷಣಗಣನೆ
ಸರ್ಕಾರಿ ವಕೀಲರ ವಜಾಗೆ ಒತ್ತಾಯ: ನ್ಯಾಯಾಲಯಗಳಲ್ಲಿ ಕಾಯ್ದೆ ಹಾಗೂ ಸಂವಿಧಾನದ ಆಶಯಕ್ಕೆ ವಿರುದ್ಧವಾದ ಆದೇಶಗಳು ಬರಲು ಕಾರಣರಾದ, ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ ಸರ್ಕಾರದ ಪರ ವಕೀಲರನ್ನು (ಅಭಿಯೋಜಕರು) ಹುದ್ದೆಯಿಂದ ತೆಗೆದುಹಾಕಬೇಕು.
ವಿಶೇಷ ನ್ಯಾಯಾಲಯ ಸ್ಥಾಪನೆ: ಎಸ್‌ಸಿ/ಎಸ್‌ಟಿ ಸಮುದಾಯವನ್ನು ರಕ್ಷಿಸುವ ಹೊಣೆ ಹೊತ್ತಿರುವ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದಲೇ ವಿಶೇಷ ನ್ಯಾಯಾಲಯ ಸ್ಥಾಪಿಸಿ, ಮೇಲುಸ್ತುವಾರಿ ಮೂಲಕ ನ್ಯಾಯ ಒದಗಿಸಬೇಕು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ಮಂಜುನಾಥ್ ಗೌರವಾಧ್ಯಕ್ಷ ಬಿ.ಎಂ. ವೆಂಕಟೇಶ್, ಉಪಾಧ್ಯಕ್ಷ ಸಿ. ಶಾಂತಕುಮಾರ್, ಕಾರ್ಯದರ್ಶಿ ಪಿ. ವೆಂಕಟೇಶ್, ಹಾಗೂ ಪದಾಧಿಕಾರಿಗಳಾದ ಮಂಜುನಾಥ್ ಶಿರಾ, ರಮೇಶ್ ಎಂ. ನಾಗವಾರ, ನಾರಾಯಣಸ್ವಾಮಿ, ಈಶ್ವರಪ್ಪ, ಚಂದ್ರು ಬಂಗ್ಲೆ ಮತ್ತಿತರರು ಉಪಸ್ಥಿತರಿದ್ದರು





