ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮವು(ಕೆಎಸ್‌ಡಿಎಲ್) ತನ್ನ ಹಿಂದಿನ ದಾಖಲೆಗಳನ್ನು ಮುರಿದಿದ್ದು, ಜನವರಿ ತಿಂಗಳೊಂದರಲ್ಲೇ 4,894 ಟನ್ ಸಾಬೂನು ಮತ್ತು ಮಾರ್ಜಕಗಳನ್ನು ಉತ್ಪಾದಿಸಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಸಾಬೂನು ಮತ್ತು ಮಾರ್ಜಕಗಳ ಉತ್ಪಾದನೆ ಬಗ್ಗೆ ಬೆಂಗಳೂರು ನಗರದಲ್ಲಿ ಮಾಧ್ಯಮ ಪ್ರಕಟಣೆ ನೀಡಿರುವ ಅವರು, “ಕೆಎಸ್‌ಡಿಎಲ್ 2023ರ ನವೆಂಬರ್‌ನಲ್ಲಿ 4,144 ಟನ್, 2025ರ ಮಾರ್ಚ್‌ನಲ್ಲಿ 4,486 ಟನ್, 2025ರ ಡಿಸೆಂಬರ್‌ನಲ್ಲಿ 4,735 ಟನ್ ಸಾಬೂನು ಮತ್ತು ಮಾರ್ಜಕ ಉತ್ಪಾದಿಸಿದ್ದು ಈವರೆಗಿನ ಗರಿಷ್ಠವಾಗಿತ್ತು. ಆದರೆ 2026ರ ಜನವರಿಯಲ್ಲಿ 3,798 ಟನ್ ಸಾಬೂನು, 941 ಟನ್ ಮಾರ್ಜಕ ಮತ್ತು 155 ಟನ್‌ಗಳಷ್ಟು ಪ್ರಸಾದನ ಸಾಮಗ್ರಿಗಳನ್ನು ಉತ್ಪಾದಿಸಿದೆ” ಎಂದು ತಿಳಿಸಿದ್ದಾರೆ.
“ಉತ್ತರಭಾರತ ಮತ್ತು ವಿದೇಶಗಳಲ್ಲಿ ಮಾರುಕಟ್ಟೆ ವಿಸ್ತರಣೆ ಹಾಗೂ ಬ್ರ್ಯಾಂಡಿಂಗ್ ಬಲವರ್ಧನೆಗೆ ಕ್ರಮ ತೆಗೆದುಕೊಂಡ ಪರಿಣಾಮ ಕೆಎಸ್‌ಡಿಎಲ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದಲೇ ಉತ್ಪಾದನೆ ಏರಿಕೆಯಾಗುತ್ತಿದೆ” ಎಂದಿದ್ದಾರೆ.
ಕೆಎಸ್‌ಡಿಎಲ್ ಅಧ್ಯಕ್ಷ ಸಿ ಎಸ್ ನಾಡಗೌಡ ಮಾತನಾಡಿ, “ನಮ್ಮ ನಿಗಮದ 45ಕ್ಕೂ ಹೆಚ್ಚು ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಉತ್ಪನ್ನಗಳನ್ನು ಪರಿಚಯಿಸಲಾಗುವುದು. 2030ರ ವೇಳೆಗೆ ವಾರ್ಷಿಕ ವಹಿವಾಟನ್ನು ₹5,000 ಕೋಟಿಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕೇಂದ್ರ ಬಜೆಟ್ ನಲ್ಲಿ ಅಂಗನವಾಡಿ ನೌಕರರಿಗೆ ಅನ್ಯಾಯ; ಬಜೆಟ್ ಪ್ರತಿ ದಹಿಸಿ ಪ್ರತಿಭಟನೆ
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಪಿಕೆಎಂ ಮಾತನಾಡಿ, “ಹಳೆಯ ಯಂತ್ರಗಳನ್ನೇ ಗರಿಷ್ಠ ಮಟ್ಟದಲ್ಲಿ ಬಳಕೆ ಮಾಡಿಕೊಂಡು ದಾಖಲೆ ಪ್ರಮಾಣದ ಉತ್ಪಾದನೆ ಮಾಡಲಾಗಿದೆ” ಎಂದಿದ್ದಾರೆ.





