ರಾಜ್ಯದಲ್ಲಿ ನವೆಂಬರ್ ಕ್ರಾಂತಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ ಕುರ್ಚಿ ಬಿಟ್ಟು ಕೊಟ್ಟು ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೋ? ಅಥವಾ ಕಾಂಗ್ರೆಸ್ ಸರ್ಕಾರ ಬಿದ್ದು ಬಿಜೆಪಿ ಅಧಿಕಾರಕ್ಕೆ ಬರುತ್ತೋ ಎಂಬುದು ನವೆಂಬರ್ ಕ್ರಾಂತಿಯಲ್ಲ. ನವೆಂಬರ್ 1ರಿಂದ ಜಾರಿಗೆ ಬಂದಿರುವ ಕಾರ್ಮಿಕ ನೀತಿ(ಕಾರ್ಮಿಕ ಸಂಹಿತೆ)ಗಳನ್ನು ಕೇರಳದ ಮಾದರಿಯಲ್ಲಿ ಕಸದ ಬುಟ್ಟಿಗೆ ಎಸೆಯುವ ಕ್ರಾಂತಿ ನಡೆಯಬೇಕಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ, ಕಾರ್ಮಿಕ ಮುಖಂಡ ಮೀನಾಕ್ಷಿ ಸುಂದರಂ ಹೇಳಿದರು.
ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಸಿಪಿಐಎಂ ವತಿಯಿಂದ ಹಮ್ಮಿಕೊಂಡಿದ್ದ ʼಜನದನಿ ಜಾಥಾʼದಲ್ಲಿ ಮಾತನಾಡಿದರು.
“ಭಾರತ ಸರ್ಕಾರವು ‘ಶಾಂತಿ ಕಾಯ್ದೆ’ಯನ್ನು ತಂದಿದೆ. ಶಾಂತಿ ಕಾಯ್ದೆ ಪರಮಾಣು ಶಕ್ತಿ ಕ್ಷೇತ್ರದ ಖಾಸಗೀಕರಣವನ್ನು ಬೆಂಬಲಿಸುತ್ತದೆ. ಈ ಮೂಲಕ ಪರಮಾಣು ಶಕ್ತಿ ಕ್ಷೇತ್ರದಲ್ಲಿ ಖಾಸಗಿ ವಲಯದ ಪಾತ್ರವನ್ನು ವಿಸ್ತರಿಸುವ ಉದ್ದೇಶವಿದೆ. ಈ ಕ್ಷೇತ್ರದ ಸ್ವಭಾವವೇ ಅತಿ ಸಂವೇದನಾಶೀಲವಾದುದರಿಂದ ಹಲವು ಗಂಭೀರ ಅಪಾಯಗಳು ಎದುರಾಗಬಹುದು. ಪರಮಾಣು ಸ್ಥಾವರಗಳ ಅಪಘಾತಗಳ ಹೊಣೆಗಾರಿಕೆ ಪ್ರಶ್ನೆಗೆ ಸರ್ಕಾರ ಉತ್ತರ ನೀಡಬೇಕಿದೆ. ಪರಮಾಣು ಅಪಘಾತಗಳ ಪರಿಣಾಮಗಳು ದೀರ್ಘಕಾಲಿಕ ಮತ್ತು ಭೀಕರ ಅಪಘಾತವಾದರೆ ಯಾರು ಹೊಣೆ? ಉದ್ಯೋಗದ ಖಾತರಿಯೂ ಇರುವುದಿಲ್ಲ, ಖಾಸಗೀಕರಣದಿಂದಾಗಿ ಕಂಪೆನಿಗಳು ಎಲ್ಲ ಹೊಣೆಗಳಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಅಂತಿಮವಾಗಿ ಸರ್ಕಾರ ಮತ್ತು ಜನರ ಮೇಲೇ ಹೊರೆ ಬೀಳುವ ಅಪಾಯವಿದೆ” ಎಂದರು.
“ಕೇಂದ್ರ ಸರ್ಕಾರ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ. ಆ ಮೂಲಕ ಕಾರ್ಮಿಕರಿಗೆ ಅನ್ಯಾಯವಾದರೆ ಅದರ ವಿರುದ್ದ ದ್ವನಿಗೂಡಿಸುವ ಅವಕಾಶ ಇಲ್ಲ. ಮುಷ್ಕರ ಹೂಡುವ ಅವಕಾಶವೂ ಇಲ್ಲ. ಎಷ್ಟು ಬೇಕಾದರೂ ಶೋಷಣೆ ಮಾಡಬಹುದು ಎನ್ನುದನ್ನು ಈ ಕಾರ್ಮಿಕ ಸಂಹಿತೆ ಹೇಳುತ್ತದೆ. ಕಾರ್ಮಿಕರಿಗೆ ರಕ್ಷಣೆ ಕೊಡದೇ ಇರುವ ಸಂಹಿತೆಗೆ ಕಾರ್ಮಿಕ ಸಂಹಿತೆ ಎಂಬ ಹೆಸರು ಹೆಸರು ನೀಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕಾರ್ಮಿಕ ಸಂಹಿತೆಯನ್ನು ಜಾರಿ ಮಾಡದಿರಲು ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ ಘೋಷಿಸಿದ್ದು, ʼಕಾರ್ಮಿಕ ಹಕ್ಕು ಎನ್ನುವುದು ಭಿಕ್ಷೆಯಲ್ಲ, ಕಾರ್ಮಿಕರು ಹೋರಾಟದ ಮೂಲಕ ಪಡೆದುಕೊಂಡ ಹಕ್ಕುʼ ಎಂದು ಕೇರಳ ಸರ್ಕಾರ ಹೇಳಿದೆ. ಕರ್ನಾಟಕ ರಾಜ್ಯ ಸರ್ಕಾರ ಯಾಕೆ ಕೇರಳ ಮಾದರಿಯಲ್ಲಿ ಕಾರ್ಮಿಕ ಸಂಹಿತೆ ವಿರುದ್ದ ನಿಲುವು ತೆಗೆದುಕೊಳ್ಳುವುದಿಲ್ಲ? ಕರ್ನಾಟಕ ರಾಜ್ಯದ ವಿಧಾನಸಭೆಯಲ್ಲಿ ಕಾರ್ಮಿಕ ಸಂಹಿತೆಯ ಬಗ್ಗೆ ಚರ್ಚೆಯೇ ಆಗಿಲ್ಲ. ಕಾರ್ಮಿಕ ಮತ್ತು ಆರ್ಥಿಕ ನೀತಿಗಳಲ್ಲಿ ಕಾಂಗ್ರೆಸ್‌ಗೂ ಬಿಜೆಪಿಗೂ ಯಾವುದೇ ವ್ಯತ್ಯಾಸವಿಲ್ಲ ಎಂಬುದು ಖಾತ್ರಿ” ಎಂದು ಹೇಳಿದರು.
“ಆರ್ಥಿಕ ನೀತಿಗಳ ವಿಷಯದಲ್ಲಿ ಕಾಂಗ್ರೆಸ್‌ಗೆ ಬಿಜೆಪಿ ಪರ್ಯಾಯವಲ್ಲ. ಬಿಜಪಿಗೆ ಕಾಂಗ್ರೆಸ್ ಪರ್ಯಾಯವಲ್ಲ. ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಜೆಡಿಎಸ್ ಪರ್ಯಾಯ ಅಲ್ಲವೇ ಅಲ್ಲ. ಪರ್ಯಾಯವಾಗಬೇಕಿರುವುದು ಎಡಪ್ರಜಾಸತ್ತಾತ್ಮಾಕ ಪರ್ಯಾಯ ರಾಜಕಾರಣ ಮಾತ್ರ. ರೈತರ ಭೂಸ್ವಾಧೀನದ ಪ್ರಶ್ನೆ, ಅಂಗನವಾಡಿ, ಬಿಸಿಯೂಟ, ಪಂಚಾಯತ್ ನೌಕರರು, ಅಸಂಘಟಿತ ಕಾರ್ಮಿಕರು, ಹಮಾಲಿ ಕಾರ್ಮಿಕರ ಶೋಷಣೆ ತಡೆಯಲು ಆಗದ ಸರ್ಕಾರ ರಾಜ್ಯದಲ್ಲಿದೆ” ಎಂದು ಕಿಡಿ ಕಾರಿದರು.
ಈ ಸುದ್ದಿ ಓದಿದ್ದೀರಾ? ಪರ್ಯಾಯ ರಾಜಕಾರಣಕ್ಕೆ ನೀತಿಗಳು ಬದಲಾಗಬೇಕೇ ಹೊರತು ಸರ್ಕಾರ ಬದಲಾವಣೆಯಲ್ಲ: ಸಿಪಿಐಎಂ ಕೆ ಪ್ರಕಾಶ್
“ನವೆಂಬರ್ ಕ್ರಾಂತಿಯೆಂದರೆ ಡಿಕೆಶಿ ಸಿಎಂ ಆಗುವುದೋ, ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳುವುದೊ ಅಲ್ಲ. ಒಂದು ಮುಕ್ಕಾಲು ಕೋಟಿ ಜನರಿಗೆ ಕನಿಷ್ಠ ಕೂಲಿ ಸಿಗುವುದೇ ನಿಜವಾದ ಕ್ರಾಂತಿ. ಇದನ್ನೇ ಪರ್ಯಾಯ ರಾಜಕಾರಣ ಎನ್ನುತ್ತೇವೆ” ಎಂದು ಕಾರ್ಮಿಕ ಮುಖಂಡ ಮೀನಾಕ್ಷಿ ಸುಂದರಂ ಹೇಳಿದರು.





