ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಸಂಕೇತವಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಮಾಹಿತಿ ಆಯೋಗ(KIC) ಇದೀಗ ಸ್ವತಃ ಪಾರದರ್ಶಕತೆ ಕೊರತೆಯ ಆರೋಪಕ್ಕೆ ಗುರಿಯಾಗಿದೆ. ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕರಣ ಸಂಖ್ಯೆ ಇದ್ದರೂ ಕೂಡ ಅನೇಕ ಪ್ರಕರಣಗಳ ವಿವರಗಳು ಲಭ್ಯವಾಗದಿರುವುದು ಹಾಗೂ ನಿಗದಿತ ಸಮಯದ ಹೊರತಾಗಿ ವೆಬ್‌ಸೈಟ್ ಬಳಕೆಗೆ ಅಡ್ಡಿ ಉಂಟಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮಾಹಿತಿ ಆಯೋಗದ ವೆಬ್‌ಸೈಟ್‌ನಲ್ಲಿ ಅನೇಕ ಮೇಲ್ಮನವಿಗಳು ಮತ್ತು ದೂರುಗಳ ವಿವರಗಳನ್ನು ಪರಿಶೀಲಿಸಲು ಪ್ರಯತ್ನಿಸಿದಾಗ, ʼDetails are not availableʼ ಎಂಬ ಒಂದೇ ಸಾಲಿನ ಉತ್ತರ ಕಾಣಿಸಿಕೊಳ್ಳುತ್ತಿದೆ. ಕೇಸ್ ನಂಬರ್ ಇದ್ದರೂ ಆದೇಶದ ವಿವರ, ವಿಚಾರಣೆಯ ಸ್ಥಿತಿ ಅಥವಾ ಫಲಿತಾಂಶ ಯಾವುದೂ ಲಭ್ಯವಾಗದಿರುವುದು ಮೇಲ್ಮನವಿದಾರರನ್ನೇ ಗೊಂದಲಕ್ಕೆ ದೂಡಿದೆ.
ಮಾಹಿತಿ ಹಕ್ಕು ಹೋರಾಟಗಾರ ಸಿ ಪಿ ತಿಪ್ಪೇಸ್ವಾಮಿ ಈ ಕುರಿತು ಆಯೋಗದ ಅಧೀನ ಕಾರ್ಯದರ್ಶಿಗಳಿಗೆ ಜನವರಿ 16ರಂದು ಅಧಿಕೃತ ದೂರು ಸಲ್ಲಿಸಿದ್ದಾರೆ. ಅವರ ಪ್ರಕಾರ, ವೆಬ್‌ಸೈಟ್ ಬೆಳಿಗ್ಗೆ ಸುಮಾರು 11ರ ಬಳಿಕ ಕಾರ್ಯನಿರ್ವಹಿಸುತ್ತಿದೆ.
ಸಂಜೆ 5:30ರ ನಂತರ ಪ್ರಕರಣಗಳ ವೀಕ್ಷಣೆಗೆ ಸಾಧ್ಯವಾಗುತ್ತಿಲ್ಲ. ಇದು ಯಾವುದೇ ಸರ್ಕಾರಿ ನಿಯಮಾವಳಿಗೂ ಹೊಂದಿಕೆಯಾಗುವುದಿಲ್ಲ. ʼಸಾರ್ವಜನಿಕ ಮಾಹಿತಿ ವ್ಯವಸ್ಥೆ ದಿನದ 24 ಗಂಟೆಯೂ ಲಭ್ಯವಿರಬೇಕುʼ ಎಂಬ ಮೂಲ ತತ್ವವನ್ನೇ ಇದು ಉಲ್ಲಂಘಿಸುತ್ತದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಾಹಿತಿ ಹಕ್ಕು ಕಾಯಿದೆ 2005 ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಾರ್ವಜನಿಕ ನಿಗಾವನ್ನು ಗುರಿಯಾಗಿಟ್ಟುಕೊಂಡಿದೆ. ಆದರೆ, ಮಾಹಿತಿಯನ್ನು ಜಾರಿಗೆ ತರಬೇಕಾದ ಆಯೋಗವೇ ತನ್ನ ಡಿಜಿಟಲ್ ವೇದಿಕೆಯಲ್ಲಿ ಮಾಹಿತಿಯನ್ನು ಭಾಗಶಃ ಅಥವಾ ಸಮಯಾಧಾರಿತವಾಗಿ ‘ಲಾಕ್’ ಮಾಡುತ್ತಿರುವುದು ಕಾಯಿದೆಯ ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ಇದು ಕೇವಲ ತಾಂತ್ರಿಕ ದೋಷವೇ ಅಥವಾ ಕೆಲವು ಪ್ರಕರಣಗಳ ವಿವರಗಳು ಸಾರ್ವಜನಿಕರಿಗೆ ತಲುಪದಂತೆ ಮಾಡುವ ಉದ್ದೇಶಿತ ಕ್ರಮವೇ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ. ಭ್ರಷ್ಟ ಅಧಿಕಾರಿಗಳಿಗೆ ಅನುಕೂಲವಾಗುವಂತೆ ಮಾಹಿತಿಯನ್ನು ಮರೆಮಾಚಲಾಗುತ್ತಿದೆಯೇ ಎಂಬ ಸಂಶಯವೂ ವ್ಯಕ್ತವಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಶ್ರೀರಂಗಪಟ್ಟಣ | ಉಚಿತ ಕೌಶಲ್ಯ ತರಬೇತಿ: ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ
ಈ ವಿಷಯದಲ್ಲಿ ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರು ಹಾಗೂ ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು. ವೆಬ್‌ಸೈಟ್‌ನ ತಾಂತ್ರಿಕ ದೋಷಗಳನ್ನು ಸರಿಪಡಿಸಿ, ಎಲ್ಲ ಪ್ರಕರಣಗಳ ವಿವರಗಳನ್ನು ಸಂಪೂರ್ಣವಾಗಿ ಅಪ್‌ಲೋಡ್ ಮಾಡಬೇಕು. ದಿನದ 24 ಗಂಟೆಯೂ ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಮಾಹಿತಿ ಹಕ್ಕು ಹೋರಾಟಗಾರರು ಒತ್ತಾಯಿಸಿದ್ದಾರೆ.





