ಕರ್ನಾಟಕದ ನಾಲ್ಕು ರಾಜ್ಯ ಸಾರಿಗೆ ನಿಗಮಗಳ (ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ)ದ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಂದು ‘ಬೆಂಗಳೂರು ಚಲೋ’ ಪ್ರತಿಭಟನೆ ನಡೆಸಿದ್ದರು. ಆದರೆ, ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದ ಸಾರಿಗೆ ನೌಕರರು ಸರ್ಕಾರಕ್ಕೆ ಮಾರ್ಚ್ 2ರವರೆಗೆ ಗಡುವು ನೀಡಿದ್ದಾರೆ.
ಕರ್ನಾಟಕ ಸಾರಿಗೆ ನಿಗಮಗಳ ನೌಕರರು 2020 ಜನವರಿ 1ರಿಂದ 2023 ಫೆಬ್ರವರಿ 28ರವರೆಗಿನ 38 ತಿಂಗಳ ವೇತನ ಹಿಂಬಾಕಿ ನೀಡುವಂತಹ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದರು. ಇದು ಬಡ್ತಿ, DA, HRA ಮತ್ತು ಇತರ ಪ್ರಯೋಜನಗಳೊಂದಿಗೆ ಸುಮಾರು ₹1,785 ಕೋಟಿ ಆಗುತ್ತದೆ. ಸರ್ಕಾರ ಇತ್ತೀಚೆಗೆ 26 ತಿಂಗಳ ಹಿಂಬಾಕಿ(ಸುಮಾರು ₹1,239 ಕೋಟಿ ರೂ. ವೆಚ್ಚ) ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಆದರೆ ನೌಕರರು ಪೂರ್ಣ 38 ತಿಂಗಳ ಹಿಂಬಾಕಿಯನ್ನು ಒಂದೇ ಹಂತದಲ್ಲಿ ನೀಡಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
“2024 ಜನವರಿ 1ರಿಂದ ವೇತನ ಪರಿಷ್ಕರಣೆ(ಹೊಸ ವೇತನ ಶ್ರೇಣಿ, 4 ವರ್ಷದ ವೇತನ ಒಪ್ಪಂದ) ಮಾಡಬೇಕು. ರಾಜ್ಯ ಸರ್ಕಾರಿ ನೌಕರರಂತೆಯೇ ಸಾರಿಗೆ ನೌಕರರಿಗೂ ಸಮಾನ ವೇತನ ನೀಡಬೇಕು. ‘ನೋ ವರ್ಕ್ ನೋ ಪೇ’ ನಿಯಮ ಹಿಂಪಡೆಯಬೇಕು. ESMA (Essential Services Maintenance Act) ಅಡಿ ಕ್ರಮ ತೆಗೆದುಕೊಳ್ಳಬಾರದು. ವಜಾ/ಸಸ್ಪೆಂಡ್ ಆದ ನೌಕರರನ್ನು ಮರುನೇಮಕಾತಿ ಮಾಡಿಕೊಳ್ಳಬೇಕು. ವಿಶ್ರಾಂತಿ ವೇತನ, ಪಿಂಚಣಿ ಪ್ರಯೋಜನಗಳ ಕುರಿತು ಸುಧಾರಣೆ ತರಬೇಕು. ಡಿಪೋಗಳಲ್ಲಿ ಸಿಬ್ಬಂದಿಗಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು” ಎಂಬ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು.
“ಈ ಬೇಡಿಕೆಗಳು ಕಳೆದ 4-5 ವರ್ಷಗಳಿಂದಲೂ ಬಾಕಿ ಉಳಿದಿದ್ದು, ಹಲವು ಬಾರಿ ಸಭೆಗಳು, ಪ್ರತಿಭಟನೆಗಳು ನಡೆದಿವೆ. 2023ರಲ್ಲಿ ಇದೇ ಬಗೆಯ ಹೋರಾಟದಲ್ಲಿ ಶೇ.15% ವೇತನ ಹೆಚ್ಚಳ ಒಪ್ಪಂದವಾಗಿತ್ತು. ಆದರೆ ಅದು ಪೂರ್ಣ ಜಾರಿಯಾಗಿಲ್ಲ”ವೆಂದು ನೌಕರರು ಆರೋಪಿಸಿದರು.
ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಹಿಂದಿನ ಸಭೆಗಳಲ್ಲಿ 26 ತಿಂಗಳ ಹಿಂಬಾಕಿ + 2025ರ ಏಪ್ರಿಲ್‌ನಿಂದ ವೇತನ ಪರಿಷ್ಕರಣೆ ಘೋಷಣೆಯಾದರೂ ನೌಕರರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯ ನಂತರ ಸಂಜೆ 4 ಗಂಟೆಯ ನಂತರ ಜಂಟಿ ಸಮಿತಿ ಸಭೆ ನಡೆಸಿ ಪ್ರತಿಭಟನಾಕಾರರು ನಿರ್ಧಾರ ಕೈಗೊಂಡಿದ್ದು, ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ಫೆಬ್ರವರಿ 20ರಿಂದ ಆರಂಭವಾಗುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತಡೆ ನೀಡಲಾಗಿದೆ. ಆದರೆ ಸರ್ಕಾರ ಮಾರ್ಚ್ 2ರೊಳಗೆ ಪೂರ್ಣ 38 ತಿಂಗಳ ಹಿಂಬಾಕಿ + ಜನವರಿ 2024ರಿಂದ ವೇತನ ಪರಿಷ್ಕರಣೆ ಆದೇಶ ಹೊರಡಿಸದಿದ್ದರೆ ಮಾರ್ಚ್ 2ರಿಂದ ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಲು ತೀರ್ಮಾನಿಸಿದ್ದಾರೆ.
ಸರ್ಕಾರದ ಸ್ಪಂದನೆ ಮತ್ತು ವೆಚ್ಚ
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸಭೆಯಲ್ಲಿ 26 ತಿಂಗಳ ಹಿಂಬಾಕಿ ₹1,239.5 ಕೋಟಿ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ.
2025ರ ಏಪ್ರಿಲ್ 1ರಿಂದ ವೇತನ ಪರಿಷ್ಕರಣೆಗೆ ಚರ್ಚೆ ನಡೆಸಲಾಗುತ್ತಿದೆ. 2023ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ವೇತನ ಪರಿಷ್ಕರಣೆ ಮಾಡುವುದಾಗಿ ಹೇಳಲಾಗಿತ್ತು. ಅಂತಯೇ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಎಂದುಕೊಂಡರೂ 2027ಕ್ಕೆ ವೇತನ ಪರಿಷ್ಕರಣೆ ಮಾಡಬೇಕಾಗುತ್ತದೆ. ಆದರೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, 2025ರ ಏಪ್ರಿಲ್‌ನಿಂದ ಪರಿಷ್ಕರಣೆ ಮಾಡುವುದಾಗಿ ಭರವಸೆ ನೀಡಲಾಗಿದೆ. ಈ ಹಿಂದೆಯೇ ₹224 ಕೋಟಿ ವಿಶ್ರಾಂತಿ ವೇತನ ಬಿಡುಗಡೆ ಮಾಡಲಾಗಿದೆ. ನಿಗಮಗಳು ಒಟ್ಟು ₹4,900 ಕೋಟಿ ನಷ್ಟದಲ್ಲಿರುವುದರಿಂದ ಸರ್ಕಾರದ ಆರ್ಥಿಕ ಒತ್ತಡವನ್ನು ಹೆಚ್ಚಿಸಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ತಿಳಿಸಿದ್ದಾರೆ.
“ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, “ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ಸಾರಿಗೆ ನೌಕರರು 38 ತಿಂಗಳ ಹಿಂಬಾಕಿ ವೇತನಕ್ಕಾಗಿ ಮುಷ್ಕರಕ್ಕೆ ತಯಾರಾಗುತ್ತಿರುವುದು ರಾಜ್ಯದ ಆರ್ಥಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ” ಎಂದು ಆರೋಪಿಸಿದ್ದಾರೆ.
“ಹಣ ಇಲ್ಲವಾದರೆ ಪಾಪರ್ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಘೋಷಣೆ ಮಾಡಿಕೊಳ್ಳಲಿ ಎನ್ನುವ ಆರ್ ಅಶೋಕ್ ನಾನು ರಾಜ್ಯದ ಸಾರಿಗೆ ಸಚಿವನಾಗಿದ್ದಾಗ ನಷ್ಟವಿತ್ತೋ, ಲಾಭವಿತ್ತೋ ಎಂಬ ಮಾಹಿತಿ ಬಿಡುಗಡೆ ಮಾಡಲಿ” ಎಂದು ಸಮರ್ಥಿಸಿಕೊಂಡರು.
ಬಸ್ ಸೇವೆ ಪರಿಣಾಮ
ಸಾರಿಗೆ ನೌಕರರ ಮುಷ್ಕರಕ್ಕೆ ಗೈರುಹಾಜರಾದವರಿಗೆ ಸಂಬಳ ಕಡಿತದೊಂದಿಗೆ, ‘ಕೆಲಸವಿಲ್ಲ, ವೇತನವಿಲ್ಲ’ ಎಂಬ ನಿಯಮವನ್ನು ಜಾರಿಗೊಳಿಸಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಎಚ್ಚರಿಸಿತ್ತು. ಈ ಹಿನ್ನೆಲೆಯಲ್ಲಿ ಕರ್ತವ್ಯದಿಂದ ಹೊರಗಿರುವ ಕಾರ್ಮಿಕರು ಮಾತ್ರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.





