ತನ್ನ ಸಾವಿನ ನಂತರ ಪತ್ನಿಯ ಭವಿಷ್ಯವೇನಾಗಬಹುದು ಎಂಬ ಆತಂಕದಿಂದ ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಮಾಜಿ ಉದ್ಯೋಗಿಯೊಬ್ಬರು ತಮ್ಮ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಆರೋಪದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ನಾಗೇಶ್ ಈಶ್ವರ ರಾವ್ ಎಂದು ಗುರುತಿಸಲಾಗಿದೆ. ವೈಟ್‌ಫೀಲ್ಡ್‌ನ ಬೊಮ್ಮನಹಳ್ಳಿ ಪ್ರದೇಶದಲ್ಲಿರುವ ‘ವರ್ಚುವೊಸೊ’ ಎಂಬ ಅಪಾರ್ಟ್‌ಮೆಂಟ್‌ನಲ್ಲಿ ನಾಗೇಶ್ ಅವರ ಪತ್ನಿ ಸಂಧ್ಯಾ ಶ್ರೀ ಅವರ ಮೃತದೇಹ ಪತ್ತೆಯಾದ ಬೆನ್ನಲ್ಲೇ, ಬುಧವಾರ ಬೆಳಿಗ್ಗೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ನಾಗೇಶ್ ರಾವ್ ಖಿನ್ನತೆಯಿಂದ ಬಳಲುತ್ತಿದ್ದು, ತೀವ್ರ ಹತಾಶೆಗೆ ಒಳಗಾಗಿದ್ದರು. ಇದಕ್ಕಾಗಿ ಆತ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಭ್ರಷ್ಟಾಚಾರವೆಂಬ ಸ್ನಾನದ ಕೋಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಬೆತ್ತಲೆಯೇ…
ಪ್ರಾಥಮಿಕ ತನಿಖೆಯ ವೇಳೆ ಪೊಲೀಸರ ಮುಂದೆ ಹೇಳಿಕೆ ನೀಡಿರುವ ಆರೋಪಿ, ‘ನನ್ನ ಸಾವಿನ ನಂತರ ಪತ್ನಿಯ ಭವಿಷ್ಯವೇನು ಎಂಬ ಆತಂಕ ನನ್ನನ್ನು ಕಾಡುತ್ತಿತ್ತು. ಅದೇ ಕಾರಣಕ್ಕಾಗಿ ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದೆ’ ಎಂದು ತಿಳಿಸಿದ್ದಾರೆ.
”ಆರೋಪಿಯು ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ. ಪತ್ನಿಯ ಹತ್ಯೆಯ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶವನ್ನು ಆತ ಹೊಂದಿದ್ದರು. ಹೀಗಾಗಿಯೇ ಆತ ಪತ್ನಿಯ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾರೆ. ಘಟನೆಗೆ ಬೇರೆ ಯಾವುದೇ ಪ್ರಮುಖ ಕಾರಣಗಳಿರುವಂತೆ ಕಂಡುಬರುತ್ತಿಲ್ಲ” ಎಂದು ವೈಟ್‌ಫೀಲ್ಡ್ ವಿಭಾಗದ ಪೊಲೀಸ್ ಉಪ ಆಯುಕ್ತ (ಡಿಸಿಪಿ) ಸೈದುಲು ಅದಾವತ್ ತಿಳಿಸಿದ್ದಾರೆ.
ದಂಪತಿಯ ಏಕೈಕ ಪುತ್ರಿ ಅಮೆರಿಕದಲ್ಲಿ ನೆಲೆಸಿದ್ದು, ಘಟನೆಯ ಬಗ್ಗೆ ಆಕೆಗೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





