“ಸಂಪೂರ್ಣ ವ್ಯವಸ್ಥೆಯ ಬದಲಾವಣೆಗಾಗಿ ಬೀದಿಗೆ ಬರಲು ಸಿದ್ದ. ಮೋದಿಯವರೇ ಶಾಶ್ವತವಾಗಿ ನಮ್ಮನ್ನು ಜೈಲಿಗೆ ಹಾಕಿದರೂ ಹೋರಾಟ ನಿಲ್ಲುವುದಿಲ್ಲ. ನೀವು ಜೈಲುಗಳನ್ನು ತೆರೆದು ಸಾಕಾಗಬೇಕು. ನಿಮ್ಮಂತಹ ಫ್ಯಾಸಿಸ್ಟ್ ಶಕ್ತಿಗಳನ್ನು ಉರುಳಿಸುತ್ತೇವೆ” ಎಂದು ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರು ಎಚ್ಚರಿಕೆ ಕೊಟ್ಟರು.
ಬೆಂಗಳೂರು ನಗರದ ಟೌನ್ ಹಾಲ್‌ನಲ್ಲಿ ಜ.21 ರಂದು ಆಯೋಜಿಸಿದ್ದ ಕಾರ್ಮಿಕ, ರೈತ, ಕೂಲಿಕಾರರ ರಾಜ್ಯ ಸಮಾವೇಶದಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಾಗೂ ಮನರೇಗಾ ಬದಲಿಗೆ ವಿಬಿ ಜಿ ರಾಮ್ ಜಿ ತಿದ್ದುಪಡಿ ಮಸೂದೆ, ವಿಮಾ ಕಾಯ್ದೆ, ಬೀಜ ಮಸೂದೆಯನ್ನು ಹಿಂಪಡೆಯಬೇಕು ಎಂದು ಕಾರ್ಯಕ್ರಮದಲ್ಲಿ ಒಕ್ಕೊರಲಿನಿಂದ ಆಗ್ರಹಿಸಲಾಯಿತು. ಇದೇ ಫೆ.12ರಂದು ಅಖಿಲ ಭಾರತ ಮಟ್ಟದಲ್ಲಿ ಸಾರ್ವತ್ರಿಕ ಮುಷ್ಕರಕ್ಕೆ ರಾಜ್ಯದ ಎಲ್ಲಾ ಸಂಘಟಿತ, ಅಸಂಘಟಿತ ಕಾರ್ಮಿಕರು ಬರಬೇಕು ಎಂದು ಕರೆಕೊಡಲಾಯಿತು.
“ಫ್ಯಾಸಿಸ್ಟ್ ಶಕ್ತಿಗಳು ಮತ್ತು ಬಂಡವಾಳ ಶಾಹಿಗಳು ಒಂದೇ ತಾಯಿಯ ಮಕ್ಕಳು. ರೈತರು, ದಲಿತರು, ಕಾರ್ಮಿಕರು,
ವಿದ್ಯಾರ್ಥಿ ಯುವಜನರು, ಮಹಿಳೆಯರೆಲ್ಲ ಒಂದಾಗಿ 12ನೇ ತಾರೀಖು ನಡೆಯುವ ಚಳುವಳಿಯನ್ನು ಗೆಲ್ಲಿಸಬೇಕು. ದುಡಿಯುವ ವರ್ಗಕ್ಕೆ ನ್ಯಾಯ ಕೊಡಿಸಬೇಕು. ದೇವನಹಳ್ಳಿಯ ಹೋರಾಟ ಗೆದ್ದ ರೀತಿಯಲ್ಲಿಯೇ ಕಾರ್ಮಿಕರ ಹೋರಾಟ ಗೆಲ್ಲಬೇಕು. ಹೋರಾಟಗಳು ಮೂವ್ಮೆಂಟ್ ಆಗಬೇಕೇ ಹೊರತು ಕೇವಲ ಇವೆಂಟ್ ಆಗಬಾರದು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ AITUC ರಾಜ್ಯಾಧ್ಯಕ್ಷರಾದ ಸೋಮಶೇಖರ್ ಮಾತನಾಡಿ, “ನರೇಂದ್ರ ಮೋದಿ ಅಧಿಕಾರಕ್ಕೆ
ಬಂದಾಗಿನಿಂದಲೂ ಬಂಡವಾಳಶಾಹಿಗಳ ಪರವಾಗಿದ್ದವರು. ಇದರ ಮೂಲಕವೇ ಕಾರ್ಮಿಕ ವಿರೋಧಿ
ಕಾನೂನುಗಳನ್ನು ತಂದಿದ್ದಾರೆ. ಇಡೀ ದೇಶದಲ್ಲಿ ಕಾರ್ಮಿಕ ವರ್ಗ ಸಮಾಜವಾದಿ ವ್ಯವಸ್ಥೆ ನಿರ್ಮಿಸಲು
ಪ್ರಯತ್ನಿಸುತ್ತಿದ್ದರೆ, ಕೇಂದ್ರದಲ್ಲಿರುವ ಫ್ಯಾಸಿಸ್ಟ್ ಸರ್ಕಾರ, ಯಾರು ಪ್ರಶ್ನೆ ಮಾಡಬಾರದೆಂದು ಬಯಸುತ್ತಿದೆ” ಎಂದು
ಆರೋಪಿಸಿದರು.
CITU ಮುಖ್ಯಸ್ಥರಾದ ಮೀನಾಕ್ಷಿ ಸುಂದರಂ ಮಾತನಾಡಿ “ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಲುಲು ಮಾಲ್ ಸ್ಥಾಪನೆಗೆ 1 ಎಕರೆ ಭೂಮಿಯನ್ನು 99 ಪೈಸೆಗೆ ಮಾರಾಟ ಮಾಡಿದ್ದಾರೆ. ಬಡವರಿಗೆ, ದುಡಿಯುವ ವರ್ಗಗಳಿಗೆ ಭೂಮಿ ಕೊಡಿ ಎಂದರೇ ಕೊಡದ ಸರ್ಕಾರಗಳು, ಬಂಡವಾಳಶಾಹಿಗಳ ಬೆಳವಣಿಗೆಯನ್ನು ಬಯಸುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ಇದನ್ನು ಓದಿ : ಈ ದಿನ ಸಂಪಾದಕೀಯ | ಕೇಂದ್ರದ ತಾರತಮ್ಯ ನೀತಿಯನ್ನು ಪ್ರಶ್ನಿಸುವುದು ತಪ್ಪಲ್ಲ
“ಕೇಂದ್ರ ಸರ್ಕಾರ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳ ಪ್ರಕಾರ, ಬಂಡವಾಳಶಾಹಿಗಳ ವಿರುದ್ಧ ಧ್ವನಿ ಎತ್ತಿದರೆ ಅಪರಾಧವಾಗುತ್ತದೆ. ಅದೇ ರೀತಿ ಸಂಪೂರ್ಣ ದೇಶವನ್ನು ಬಂಡವಾಳಿಗರ ಗುಲಾಮನನ್ನಾಗಿಸುವ ಸಂಚು ರೂಪಿಸುತ್ತಿದೆ. ಕಾರ್ಮಿಕ ಸಂಹಿತೆಗಳು ಜಾರಿ ಮಾಡುವುದಿಲ್ಲ ಎಂದು ಕೇರಳ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಅದೇ ರೀತಿಯಲ್ಲಿ ಸಮಾಜವಾದಿ ನಾಯಕ ಸಿದ್ದರಾಮಯ್ಯನವರು ಕೇರಳ ಸರ್ಕಾರದ ರೀತಿಯ ಎದೆಗಾರಿಕೆಯನ್ನು ತೋರಬೇಕು. ಇಲ್ಲವಾದರೆ ಶೇ.84ರಷ್ಟು ಕನ್ನಡಿಗರು ಉದ್ಯೋಗ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾದರೂ ಅಚ್ಚರಿ ಇಲ್ಲ. ಮೋದಿ ಸರ್ಕಾರ ಕಾರ್ಮಿಕ ಕಾನೂನು ತಂದರೆ ಸೊಂಟ ಮುರೀತೀವಿ” ಎಂದು ಎಚ್ಚರಿಸಿದರು.

ವಕೀಲರು ಹಾಗೂ ಕಾರ್ಮಿಕ ಸಂಘಟನೆಯ ಮುಖಂಡರಾದ ಕ್ಲಿಫ್ಟನ್ ಡಿʼರೊಜಾರಿಯೋ ಮಾತನಾಡಿ “ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ದುಡಿಯುವ ವರ್ಗವನ್ನು ಗುಲಾಮರಂತೆ ನಡೆಸಿಕೊಳ್ಳಬಾರದು. ನಾವಿರುವಂತ ಮಹಾನಗರಗಳನ್ನು ಕಟ್ಟಿರುವುದು ಇದೇ ಕಾರ್ಮಿಕರು. ರಾಜ್ಯ ಸರ್ಕಾರ ಕೂಡಲೇ ಕೇಂದ್ರದ ಕಾರ್ಮಿಕ ಸಂಹಿತೆಗಳನ್ನು ವಾಪಸು ಕಳುಹಿಸಬೇಕು” ಎಂದು ಆಗ್ರಹಿಸಿದರು.
“ಶಾಶ್ವತವಾಗಿ ಕಾರ್ಮಿಕರನ್ನು ಗುಲಾಮರ ರೀತಿಯಲ್ಲಿ ನಡೆಸಿಕೊಳ್ಳುವುದೇ ಕಾರ್ಮಿಕ ಸಂಹಿತೆಗಳ ಉದ್ದೇಶ. ಕೇಂದ್ರ ಸರ್ಕಾರ ತಂದಿರುವ ಕಾರ್ಮಿಕ ಸಂಹಿತೆಗಳು ಹೋರಾಟದ ಅಸ್ತ್ರವನ್ನೇ ಕಿತ್ತುಕೊಳ್ಳುತ್ತವೆ. ಹೋರಾಟ ಎನ್ನುವುದು ನಮ್ಮ ರಕ್ತದಲ್ಲಿದೆ. ಆ ರಕ್ತವನ್ನು ತಣ್ಣಗಾಗಲೂ ಬಿಡಬಾರದು” ಎಂದು ಹೇಳಿದರು.
ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡರಾದ ನೂರ್ ಶ್ರೀಧರ್ ಮಾತನಾಡಿ “ಆಳುವ ಸರ್ಕಾರಗಳಿಗೆ ಹೋರಾಟಗಾರರ ಮೇಲಿನ ಭಯ ಹೋಗಿದೆ. ಆ ಭಯವನ್ನು ಮತ್ತೆ ಹುಟ್ಟು ಹಾಕಬೇಕು. ಸಂಯುಕ್ತ ಕಿಸಾನ್ ಮೋರ್ಚಾ ಮಾಡಿದ ಹೋರಾಟದ ರೀತಿಯಲ್ಲಿ ಕಾರ್ಮಿಕ ಸಂಘಟನೆಗಳು ಸೇರಿ ಹೋರಾಟ ಮಾಡಬೇಕಿದೆ. ನಾವೆಲ್ಲರೂ ನಿಮ್ಮ ಜೊತೆಯಲ್ಲಿ ಇರುತ್ತೇವೆ” ಎಂದು ಭರವಸೆ ನೀಡಿದರು.
“ಮೋದಿಗಿಂತ ಹೆಚ್ಚು ಮೆರೆದ ಇಂದಿರಾ ಗಾಂಧಿಯವರನ್ನೇ ನಮ್ಮ ಜನರು ಸೋಲಿಸಿದ್ದಾರೆ. ಇವರನ್ನು ಸೋಲಿಸುವ ಕಾಲ ಬಂದಾಯ್ತು. ಈಗಾಗಲೇ ಚುನಾವಣಾ ವ್ಯವಸ್ಥೆಯನ್ನೇ ಕದ್ದಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳು ಒಂದೇ ಮನಸ್ಥಿತಿಯಲ್ಲಿವೆ. ನಮ್ಮಂತಹ ಜನ ಶಕ್ತಿಗಳು ಒಂದಾಗಿ ವಿರೋಧ ಪಕ್ಷದ ರೀತಿಯಲ್ಲಿ ಸರ್ಕಾರವನ್ನು ಎದುರಿಸಲು ಮುಂದೆ ಬರಬೇಕು” ಎಂದು ಕರೆಕೊಟ್ಟರು.
ಸಾಮಾಜಿಕ ಹೋರಾಟಗಾರರಾದ ಸಿದ್ದನಗೌಡ ಪಾಟೀಲ್ ಮಾತನಾಡಿ, “ಈಗಾಗಲೇ ಎಲ್ಲಾ ವಲಯದ ಜನ ಮೋದಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿಯುತ್ತಿದ್ದಾರೆ. ದೇಶದಲ್ಲಿರುವ ಸುಮಾರು 95ಕೋಟಿ ಕಾರ್ಮಿಕರನ್ನು ಕೇಂದ್ರ ಸುಲಿಗೆ ಮಾಡುತ್ತಿದೆ. ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಜೆಸಿಟಿಯು (ಕಾರ್ಮಿಕ ಸಂಘಗಳ ಜಂಟಿ ಸಮಿತಿ) ಒಗ್ಗೂಡಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಒದ್ದೋಡಿಸಬೇಕು. ಅಂಬೇಡ್ಕರ್ ಅವರು ʼಮುಷ್ಕರ ಕಾರ್ಮಿಕರ ಜನ್ಮ ಸಿದ್ದ ಹಕ್ಕುʼ ಎಂದಿದ್ದರು. ಆದರೆ, ಕೇಂದ್ರ ಸರ್ಕಾರ ಹೋರಾಟದ ಹಕ್ಕನ್ನೇ ಕಿತ್ತುಕೊಳ್ಳುತ್ತಿದೆ” ಎಂದು ಆರೋಪಿಸಿದರು.
ವೇದಿಕೆಯ ಮೇಲೆ, ಕಾರ್ಮಿಕ ಮುಖಂಡರಾದ ನಾಗಲಕ್ಷ್ಮಿ, ವರಲಕ್ಷ್ಮಿ, ಯಶವಂತ್, AITUCಯ ಅಪ್ಪಣ್ಣ,
JCTU ಮುಖ್ಯಸ್ಥರಾದ ಮಹಾತೇಂಶ್, TUCC ರಾಷ್ಟ್ರೀಯ ಅಧ್ಯಕ್ಷರಾದ ಶಿವಶಂಕರ್, ಹೋರಾಟಗಾರರಾದ ಅನಿಲ್ ಹೊಸಮನಿ ಇನ್ನು ಇತರರು ಉಪಸ್ಥಿತರಿದ್ದರು.





