ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಗೌಡರ ಹಳ್ಳಿಯಲ್ಲಿ ಭಾರತ್ ಸೋಷಿಯಲ್ ಆಂಡ್ ವೆಲ್ಫೇರ್ ಟ್ರಸ್ಟ್ ಇದರ ದಶಮಾನೋತ್ಸವದ ಪ್ರಯುಕ್ತ ‘ಜಲಭಾಗ್ಯ’ ಯೋಜನೆಯ ಅಡಿಯಲ್ಲಿ ಸಾರ್ವಜನಿಕರಿಗಾಗಿ ಕೊಳವೆ ಬಾವಿಯನ್ನು ನಿರ್ಮಿಸಿ ಕೊಡಲಾಯಿತು.
ಭಾರತ್ ಸೋಷಿಯಲ್ ಆಂಡ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷರಾದ ನೂರುಲ್ ಅಮೀನ್ ಅವರು ನೂತನ ಕೊಳವೆ ಬಾವಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಜಲ ಜೀವಾಮೃತ, ಅದನ್ನು ಸರಿಯಾಗಿ ಬಳಸಿದರೆ ಪುಣ್ಯವಿದೆ ಪೋಲು ಮಾಡುವುದು ಪಾಪ ಕಾರ್ಯವಾಗಿದೆ. ದಾನಗಳಲ್ಲಿ ಜಲದಾನಕ್ಕೂ ಪ್ರಮುಖ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಭಾರತ್ ಸೋಷಿಯಲ್ ಮತ್ತು ವೆಲ್ಫೇರ್ ಟ್ರಸ್ಟ್ ದಶಮಾನೋತ್ಸವದ ಸಂಭ್ರಮದಲ್ಲಿ ಮಹತ್ವಾಕಾಂಕ್ಷೆಯ ಜಲ ಭಾಗ್ಯ ಯೋಜನೆ ಹಮ್ಮಿಕೊಂಡಿದೆ. ಅದರ ಭಾಗವಾಗಿ ಗೌಡರ ಹಳ್ಳಿಯಲ್ಲಿ ಸಾರ್ವಜನಿಕರಿಗಾಗಿ ಕೊಳವೆ ಬಾವಿಯನ್ನು ನಿರ್ಮಿಸಿ ಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ನೀರಿನ ಇಂಗುವಿಕೆಯ ಬಗ್ಗೆ ಜನಜಾಗೃತಿ ಹಮ್ಮಿಕೊಳ್ಳುತ್ತೇವೆ” ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಖ್ಯಾತ ಪರಿಸರವಾದಿ, ರಂಗಕರ್ಮಿ ಹಾಗೂ ಚಿತ್ರ ನಿರ್ದೇಶಕರಾದ ಪರಸರ ಶಿವರಾಂ ಅವರು ಮಾತನಾಡುತ್ತಾ, “ನೀರು ಪ್ರಕೃತಿಯ ಅಮೂಲ್ಯ ಕೊಡುಗೆ. ಇಂದು ನಾವು ಕೊಳವೆ ಬಾವಿಯನ್ನು ಉದ್ಘಾಟಿಸುತ್ತಿದ್ದೇವೆ. ಬಹಳ ಸಂತೋಷದ ವಿಚಾರ. ನೀರನ್ನು ಮಿತವಾಗಿ ಬಳಸುವ ಮೂಲಕ ಭೂಮಿಯ ಭವಿಷ್ಯವನ್ನು ಕಾಪಾಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಭೂಗರ್ಭ ಜಲ ಸಂರಕ್ಷಣೆ ಇಲ್ಲದೆ ಅಭಿವೃದ್ಧಿ ಸಾಧ್ಯವಿಲ್ಲ. ಈ ಕೊಳವೆ ಬಾವಿಯ ನೀರು ನಮ್ಮ ಅಗತ್ಯಕ್ಕೆ ಮಾತ್ರವಲ್ಲ, ಜವಾಬ್ದಾರಿಯ ಬಳಕೆಯ ಸಂಕೇತವಾಗಬೇಕು. ಪ್ರಕೃತಿಯನ್ನು ಶೋಷಿಸುವುದಲ್ಲ, ಸಂರಕ್ಷಿಸುವುದೇ ನಿಜವಾದ ಪ್ರಗತಿ ಎಂದು ತಿಳಿಸಿದರು.
“ನೀರನ್ನು ಉಳಿಸಿದರೆ ನಾಳೆಯನ್ನು ಉಳಿಸಿದಂತಾಗುತ್ತದೆ. ಭಾರತ್ ಸೋಷಿಯಲ್ ಆಂಡ್ ವೆಲ್ಫೇರ್ ಟ್ರಸ್ಟ್‌ನ ಈ ಸೇವೆ ಶ್ಲಾಘನೀಯ. ನೀರು ಸಂರಕ್ಷಣೆ ಮತ್ತು ಪೂರೈಕೆಗಾಗಿ ಅವರ ಮುಂದಿನ ಯೋಜನೆಗಳು ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ.” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಈ ವರ್ಷವೇ ಜಿಬಿಎ ಪಾಲಿಕೆಗಳು ಸೇರಿ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆ: ಡಿಸಿಎಂ ಡಿ.ಕೆ.ಶಿವಕುಮಾರ್
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸರಕಾರಿ ಮಹಿಳಾ ಪಾಲಿಟೆಕ್ನಿಕ್‌ನ ವಿಭಾಗ ಮುಖ್ಯಸ್ಥರಾಗಿರುವ ಝುಲ್ಫಿಕರ್ ಅಲಿ, ಖದೀಜ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಉಪಾಧ್ಯಕ್ಷರಾದ ನಿಯಾಝುರ್ಹ್ಮಾನ್ ಪೆರ್ಲ ಉಪಸ್ಥಿತರಿದ್ದರು. ಮುನೀರ್ ಪದ್ರೆಂಗಿ ಕಾರ್ಯಕ್ರಮ ನಿರೂಪಿಸಿದರು.






