ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ನಾಗರಾಳ ಗ್ರಾಮದ ರೈತರೊಬ್ಬರ ಹೊಲದಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಕಬ್ಬಿನ ಹೊಲಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ 2 ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದೆ.
ನಾಗರಾಳ ಗ್ರಾಮದ ರೈತ ದಿಲೀಪ್ ಬಿರಾದರ್ ಎಂಬುವರರಿಗೆ ಸೇರಿದ 2.5 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಸುಟ್ಟು ಕರಕಲಾಗಿದ್ದು ರೈತ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಅಂದಾಜು ₹3 ರಿಂದ ₹4 ಲಕ್ಷ ಮೌಲ್ಯದ ಕಬ್ಬು ಬೆಳೆಯಲಾಗಿತ್ತು. ಶುಕ್ರವಾರ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಳೆ ಬೆಂಕಿಗೆ ಆಹುತಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ನಂದಿಸಿದ್ದಾರೆ. ಆದರೆ ಕಟಾವಿಗೆ ಬಂದಿದ್ದ ಬಹುತೇಕ ಕಬ್ಬು ಸುಟ್ಟು ಭಸ್ಮವಾಗಿದೆ ಎಂದು ರೈತ ತಿಳಿಸಿದ್ದಾರೆ.

ಬ್ಯಾಂಕ್ ಸಾಲ ಪಡೆದು ಕಬ್ಬು ಬೆಳೆದು, ಉತ್ತಮ ಆದಾಯ ನಿರೀಕ್ಷೆಯಲ್ಲಿದ್ದೆ. ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಬೆಳೆ ಸಂಪೂರ್ಣ ನಾಶವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ, ಪರಿಹಾರ ನೀಡಬೇಕೆಂದು ರೈತ ದಿಲೀಪ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಕನ್ನಡ ರಾಜೋತ್ಸವ | ಕರ್ನಾಟಕ ಸರ್ವಧರ್ಮ ಸಮನ್ವಯ ನಾಡು : ಸಚಿವ ಈಶ್ವರ ಖಂಡ್ರೆ





