ಭಟ್ಕಳ ಪಟ್ಟಣದಲ್ಲಿ “ಗ್ಲೋಬಲ್ ಎಂಟರ್ಪ್ರೈಸಸ್” ಹೆಸರಿನಲ್ಲಿ ಅಂಗಡಿ ತೆರೆದು, ಗೃಹೋಪಯೋಗಿ ವಸ್ತುಗಳ ಮೇಲೆ ಶೇಕಡಾ 40ರಷ್ಟು ರಿಯಾಯಿತಿ ನೀಡುವುದಾಗಿ ನಂಬಿಸಿ ನೂರಾರು ಜನರಿಂದ ಲಕ್ಷಾಂತರ ರೂಪಾಯಿ ಮುಂಗಡ ಹಣ ಪಡೆದು ಪರಾರಿಯಾಗಿದ್ದ ವಂಚಕರನ್ನು ಭಟ್ಕಳ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಕೇರಳ ಹಾಗೂ ತಮಿಳುನಾಡು ಮೂಲದ ಎಂ. ಗಣೇಶನ್, ತ್ಯಾಗರಾಜನ್, ಮತ್ತು ಮಿಯಾನಾದನ್ಯಾನೆ ರಾಜೇಶ್ ಎಂದು ಗುರುತಿಸಲಾಗಿದೆ. ಸುಮಾರು ಎರಡು ತಿಂಗಳ ಹಿಂದೆ ಆರೋಪಿಗಳು ಭಟ್ಕಳದ ಕಾರ್ಟ್ ರಸ್ತೆಯಲ್ಲಿ ಮಳಿಗೆ ಆರಂಭಿಸಿದ್ದರು. ಜನರನ್ನು ನಂಬಿಸಲು ಸ್ಥಳೀಯ ಬ್ಯಾಂಕ್ ಖಾತೆ ತೆರೆಯುವುದು, ಜಿಎಸ್ಟಿ ನೋಂದಣಿ ಮಾಡಿಸುವುದು ಹಾಗೂ ಸ್ಥಳೀಯ ಯುವಕರನ್ನೇ ಕೆಲಸಕ್ಕೆ ನೇಮಿಸುವ ಮೂಲಕ ವಿಶ್ವಾಸ ಗಳಿಸಿದ್ದರು. ಆರಂಭದಲ್ಲಿ ಕೆಲವರಿಗೆ ಕಡಿಮೆ ಬೆಲೆಗೆ ವಸ್ತುಗಳನ್ನು ಪೂರೈಕೆ ಮಾಡಿದ್ದರು. ಇದರಿಂದ ನೂರಾರು ಗ್ರಾಹಕರು ಇವರನ್ನು ನಂಬಿ ಮುಂಗಡ ಹಣ ಪಾವತಿಸಿ ದ್ದಾರೆ.

ವಂಚನೆಗೆ ಒಳಗಾದ ಮೊಹಮ್ಮದ್ ಸವೂದ್ ಎಂಬುವವರು ಠಾಣೆಯಲ್ಲಿ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಮೋಸಗೊಂಡ ನೂರಾರು ಸಂತ್ರಸ್ತರು ಅಂಗಡಿಯ ಮುಂದೆ ಜಮಾಯಿಸಿದ್ದಾರೆ. ಈ ನಡುವೆ ಆರೋಪಿಗಳು ಅಂಗಡಿಗೆ ಬೀಗ ಹಾಕಿ ಪರಾರಿಯಾಗಿದ್ದರು.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಸ್ಥಳೀಯ ಸಂಸ್ಥೆಗಳ ವಾರ್ಡ್ವಾರು ಮೀಸಲಾತಿ ಪ್ರಕಟ; ಆಕ್ಷೇಪಣೆ ಸಲ್ಲಿಸಲು 7 ದಿನಗಳ ಕಾಲಾವಕಾಶ
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. (ಐಪಿಎಸ್), ಭಟ್ಕಳ ಉಪವಿಭಾಗದ ಡಿವೈಎಸ್ಪಿ ಮಹೇಶ್ ಎಂ.ಕೆ. ಹಾಗೂ ನಗರ ಠಾಣೆಯ ಇನ್ಸ್ಪೆಕ್ಟರ್ ದಿವಾಕರ ಪಿ.ಎಮ್. ಅವರ ಮಾರ್ಗದರ್ಶನದಲ್ಲಿ, ಪಿಎಸ್ಐಗಳಾದ ನವೀನ ಎಸ್. ನಾಯ್ಕ ಮತ್ತು ತಿಮ್ಮಪ್ಪ ಎಸ್. ಅವರ ನೇತೃತ್ವದಲ್ಲಿ ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ವಿನಾಯಕ ಪಾಟೀಲ್, ದೀಪಕ ನಾಯ್ಕ, ದಿನೇಶ್ ನಾಯಕ, ದೇವು ನಾಯ್ಕ, ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗೊಣಸಿ, ಸುರೇಶ ಮರಾಠಿ, ರೇವಣಸಿದ್ದಪ್ಪ ಮಾಗಿ, ಕಿರಣ ಪಾಟೀಲ್, ಹಾಗೂ ಸಚಿನ್ ಪವಾರ ಭಾಗವಹಿಸಿದ್ದರು. ಬಂಧಿತರ ವಿರುದ್ಧ ತನಿಖೆ ಮುಂದುವರಿದಿದ್ದು, ಆರೋಪಿಗಳು ಸಂಗ್ರಹಿಸಿಟ್ಟಿದ್ದ 6 ರಿಂದ 7 ಲಕ್ಷ ರೂ. ಮೊತ್ತದ ವಸ್ತುಗಳನ್ನು ವಶಕ್ಕೆ ಪಡೆದು ಉಳಿದ ವಸ್ತುಗಳು ದೊರೆತ ಬಳಿಕ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಹರಾಜು ಹಾಕಿ ವಂಚನೆಗೆ ಒಳಗಾದ ನಾಗರಿಕರಿಗೆ ಹಣ ಮರಳಿಸಲಾಗುವುದು ಎಂದು ಮಾಹಿತಿಯಿಂದ ತಿಳಿದುಬಂದಿದೆ.





