ಭಟ್ಕಳ: ವಿವಾದಿತ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ವೈದ್ಯ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ಈ ಯೋಜನೆ ಜಾರಿಗೆ ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರೇ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು” ಎಂಬ ಸತ್ಯವನ್ನು ಬಿಚ್ಚಿಡುವ ಮೂಲಕ ಬಿಜೆಪಿಯ ಇಂದಿನ ಹೋರಾಟವನ್ನು ಅವರು ಪ್ರಶ್ನಿಸಿದ್ದಾರೆ.
ಭಟ್ಕಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಹಳೆಯ ದಾಖಲೆಗಳನ್ನು ಉಲ್ಲೇಖಿಸಿ ಬಿಜೆಪಿಯ ಇಬ್ಬಗೆಯ ನೀತಿಯನ್ನು ಟೀಕಿಸಿದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಈ ಯೋಜನೆಗೆ ಅಡಿಪಾಯ ಬಿದ್ದಿತ್ತು ಎಂದು ಪುನರುಚ್ಚರಿಸಿದ ಸಚಿವರು, “ಅಂದಿನ ಬಜೆಟ್‌ನ 21ನೇ ಪುಟದ 89ನೇ ಪ್ಯಾರಾವನ್ನು ಗಮನಿಸಿದರೆ ಸತ್ಯ ತಿಳಿಯಲಿದೆ.
ಅಂದು ಜಿಲ್ಲೆಯ ಐವರು ಶಾಸಕರು ಬಿಜೆಪಿಯವರೇ ಆಗಿದ್ದರು, ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸ್ಪೀಕರ್ ಆಗಿದ್ದರು. ಆಗ ಸುಮ್ಮನಿದ್ದವರು ಈಗ ವಿರೋಧ ವ್ಯಕ್ತಪಡಿಸುತ್ತಿರುವುದು ಹಾಸ್ಯಾಸ್ಪದ” ಎಂದರು. ಈ ಯೋಜನೆಯ ಒಟ್ಟು 23 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಶೇ. 90ರಷ್ಟು ಪಾಲು ಕೇಂದ್ರ ಸರ್ಕಾರದ್ದಾಗಿದೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಸಬ್ ರಿಜಿಸ್ಟ್ರಾರ್ ಆಫೀಸ್ ನಲ್ಲಿ ಡಿಜಿಟಲ್ ಇ-ಸ್ಟ್ಯಾಂಪ್ ಕುರಿತು ತರಬೇತಿ ಕಾರ್ಯಾಗಾರ ಆಯೋಜನೆ
ಒಂದೆಡೆ ಕೇಂದ್ರ ಸರ್ಕಾರ ಯೋಜನೆ ಜಾರಿಗೆ ಮುಂದಾಗಿದೆ, ಮತ್ತೊಂದೆಡೆ ಅದೇ ಪಕ್ಷದ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಈ ಯೋಜನೆ ಬೇಕಿದೆ. ಆದರೆ ಜಿಲ್ಲೆಯ ನಾಯಕರು ವಿರೋಧಿಸುತ್ತಿದ್ದಾರೆ. ಮೊದಲು ಬಿಜೆಪಿ ತನ್ನೊಳಗಿನ ಗೊಂದಲವನ್ನು ಬಗೆಹರಿಸಿಕೊಳ್ಳಲಿ ಎಂದು ಮಂಕಾಳ ವೈದ್ಯ ಸಲಹೆ ನೀಡಿದರು.
ಕೇಂದ್ರ ಬಜೆಟ್‌ನಿಂದ ಕರ್ನಾಟಕಕ್ಕೆ ಅಥವಾ ಉತ್ತರ ಕನ್ನಡ ಜಿಲ್ಲೆಗೆ ಯಾವುದೇ ವಿಶೇಷ ನಿರೀಕ್ಷೆಗಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಸಚಿವರು, ರಾಜ್ಯದ ಬಿಜೆಪಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ನಿಂತು ರಾಜ್ಯದ ಪರವಾಗಿ ಧ್ವನಿ ಎತ್ತುವ ತಾಕತ್ತಿಲ್ಲ ಎಂದು ಲೇವಡಿ ಮಾಡಿದರು.





