ಜಿಲ್ಲಾದ್ಯಂತ ಕಳೆದ ನಾಲ್ಕು ದಿನಗಳಿಂದ ಮಳೆ ಆಗುತ್ತಿದ್ದು, ಆ.27 ಹಾಗೂ ಆ.28ರಂದು ಜಿಲ್ಲೆಯಾದ್ಯಂತ 59 ಎಂ.ಎಂ ಮಳೆಯಾಗಿದ್ದು, ಭಾರಿ ಮಳೆಯಿಂದ ಜಿಲ್ಲೆಯಲ್ಲಿ 66,906 ಹೆಕ್ಟೇರ್ ಬೆಳೆ ಹಾನಿಯಾಗಿದೆ.
ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ನೈಋತ್ಯ ಮುಂಗಾರು ಹಂಗಾಮಿನಲ್ಲಿ ವಾಡಿಕೆ 466 ಎಂಎಂ ಮಳೆಯಾಗಬೇಕಾಗಿದ್ದು, 467 ಎಂಎಂ ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ 59 ಎಂಎಂ ಮಳೆಯಾಗಿದೆ. ಇನ್ನು ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಔರಾದ್, ಕಮಲನಗರ ಹಾಗೂ ಭಾಲ್ಕಿ ತಾಲೂಕುಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿಯಿತು.
ಎರಡು ದಿನಗಳ ಸತತ ಸುರಿದ ಮಳೆಯಿಂದ ಜಿಲ್ಲೆಯಾದ್ಯಂತ 94 ಮನೆ, 70 ಕೀ.ಮೀ. ರಸ್ತೆ, 47 ಬ್ರಿಡ್ಜ್, 1,335 ಶಾಲಾ ಕೊಠಡಿಗಳಿಗೆ ಹಾನಿಯಾಗಿದೆ. ಇನ್ನು 138 ವಿದ್ಯುತ್ ಕಂಬ, 21 ಟ್ರಾನ್ಸ್‌ಫಾರ್ಮರ್, ವಿದ್ಯುತ್ ತಂತಿ ಸೇರಿಂದತೆ ಸಣ್ಣ ನೀರಾವರಿ ಇಲಾಖೆಯ 38 ಕೆರೆಗಳು ಹಾನಿಗೀಡಾಗಿದ್ದು, ಸಮೀಕ್ಷೆ ಕಾರ್ಯ ಮುಂದುವರೆದಿದೆʼ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಮೂರು ತಿಂಗಳಲ್ಲಿ 79 ಸಾವಿರ ಹೆಕ್ಟೇರ್ ಬೆಳೆ ಹಾನಿ :
ಬೀದರ್ ಜಿಲ್ಲೆಯಾದ್ಯಂತ ಪೂರ್ವ ಮುಂಗಾರು ಪೂರ್ವ ಹಾಗೂ ಮುಂಗಾರು ಆರಂಭವಾದ ಬಳಿಕ ಜೂನ್ ತಿಂಗಳಿಂದ ಆಗಸ್ಟ್ 28 ರವರೆಗೆ ಸುರಿದ ವ್ಯಾಪಕ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಇಲ್ಲಿಯವರೆಗೆ ಕೃಷಿ ಹಾಗೂ ತೋಟಗಾರಿಕೆ ಸೇರಿ ಒಟ್ಟು 79,443 ಹೆಕ್ಟೇರ್ ಬೆಳೆ ಹಾನಿಯಾಗಿದ್ದು ಸಮೀಕ್ಷೆಯಿಂದ ತಿಳಿದು ಬಂದಿದೆ. ಆದರೆ, ಪ್ರಾಥಮಿಕ ಮಾಹಿತಿ ಪ್ರಕಾರ ಸುಮಾರರು ಒಂದು ಲಕ್ಷ ಹೆಕ್ಟೇರ್‌ಗೂ ಅಧಿಕ ಬೆಳೆ ಹಾನಿಯಾಗಿರುವ ಸಾಧ್ಯತೆ ಇದೆ.
ಜಿಲ್ಲೆಯಲ್ಲಿ ಒಟ್ಟು 4.21 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಅದರಲ್ಲಿ ಉದ್ದು-15,850 ಹೆಕ್ಟೇರ್, ಹೆಸರು -21,850 ಹೆಕ್ಟೇರ್, ತೊಗರಿ-1,17,450 ಹೆಕ್ಟೇರ್ ಹಾಗೂ ಸೋಯಾಅವರೆ-1,99916 ಹೆಕ್ಟೇರ್ ಸೇರಿದಂತೆ ಇತರೆ ಬೆಳೆ ಬಿತ್ತನೆಯಾಗಿದೆ. ಅಧಿಕ ಮಳೆಯಿಂದ ಹೆಸರು, ಉದ್ದು ಹಾಗೂ ತೊಗರಿ ಬೆಳೆಗೆ ಹೆಚ್ಚು ಹಾನಿಯಾಗಿದೆ.

ಮುಂಗಾರು ಆರಂಭವಾದ ಬಳಿಕ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಆದರೆ, ಆಗಸ್ಟ್ 17 ರಿಂದ ಆ.20ರವರೆಗೆ ಸುರಿದ ಮಳೆ ಹಾಗೂ ಆ.27 ರಿಂದ ಆ.28ರಂದು ಆದ ನಿರಂತರ ಮಳೆಗೆ ಜಿಲ್ಲೆಯಲ್ಲಿ ಅತಿವೃಷ್ಟಿ ಸೃಷ್ಟಿಯಾಗಿ ಬೆಳೆ, ಮನೆ, ಜಾನುವಾರು ಹಾನಿ ಸೇರಿದಂತೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ.
ಜೂನ್ ತಿಂಗಳಿಂದ ಇಲ್ಲಿಯವರೆಗೆ ಸುರಿದ ಮಳೆಗೆ ಜಿಲ್ಲೆಯಲ್ಲಿ ಅತಿ ಹೆಚ್ಚು, ಬೀದರ್ ಔರಾದ್ ಹಾಗೂ ಕಮಲನಗರ ತಾಲೂಕಿನಲ್ಲಿ ಬೆಳೆ ಹಾನಿಯಾಗಿದೆ. ಆಗಸ್ಟ್ ಒಂದೇ ತಿಂಗಳಲ್ಲಿ ಸುರಿದ ಸತತ ಮಳೆಯಿಂದ ಹೆಚ್ಚು ಹಾನಿಯಾಗಿದೆ. ಇಲ್ಲಿಯವರೆಗೆ ಔರಾದ್ (7,574 ) ಕಮಲನಗರ (8,017), ಭಾಲ್ಕಿ (12,829 ), ಬಸವಕಲ್ಯಾಣ (13,065 ), ಹುಲಸೂರ (5,972 ), ಚಿಟಗುಪ್ಪ (5,760), ಹುಮನಾಬಾದ್ (10,424 ), ಬೀದರ್ (15,801) ಸೇರಿ ಒಟ್ಟು 79,443 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಗೀಡಾಗಿದೆ.
396 ಮನೆ ಹಾನಿ, 37 ಜಾನುವಾರು ಸಾವು :
ಜೂನ್-ಆಗಸ್ಟ್ 28ರ ತನಕ ಸುರಿದ ಮಳೆಯಿಂದ ಜಿಲ್ಲಾದ್ಯಂತ ಒಟ್ಟು 396 ಮನೆ, 133 ಅಂಗನವಾಡಿ, 1,335 ಶಾಲಾ ಕೊಠಡಿ, 289 ವಿದ್ಯುತ್ ಕಂಬಗಳು ಹಾನಿಯಾದರೆ, 2 ಮಾನವ ಜೀವ ಹಾನಿ ಹಾಗೂ 37 ಜಾನುವಾರು ಸಾವು ಸೇರಿದಂತೆ ರಸ್ತೆ, ಸೇತುವೆ, ಕೆರೆಗಳಿಗೆ ಹಾನಿಗೀಡಾದ ಬಗ್ಗೆ ಜಿಲ್ಲಾಡಳಿತ ಸಮೀಕ್ಷಾ ವರದಿ ನೀಡಿದೆ. ಇದರಲ್ಲಿ ಅತಿ ಹೆಚ್ಚು ಔರಾದ, ಕಮಲನಗರ ತಾಲೂಕಿನಲ್ಲೇ 133 ಮನೆಗಳಿಗೆ ಹಾನಿಯಾಗಿದೆ.
ಅತಿವೃಷ್ಟಿ ಪ್ರದೇಶಗಳಿಗೆ ಸಚಿವದ್ವಯರ ಭೇಟಿ, ಪರಿಶೀಲನೆ :
ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅವರು ಶುಕ್ರವಾರ ಕಾರಂಜಾ ಜಲಾಶಯ ಸುತ್ತಮುತ್ತಲಿನ ಕಣಜಿ, ಕಟ್ಟಿತೂಗಾಂವ್, ಬ್ಯಾಲಹಳ್ಳಿ, ಹಾಲಹಳ್ಳಿ(ಕೆ) ಗ್ರಾಮಗಳ ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಗೊಳಗಾದ ಪರಿಸ್ಥಿತಿಯನ್ನು ಪರಿಶೀಲಿಸಿದರು.
ʼಭಾರಿ ಮಳೆಯಿಂದಾಗಿ ಹೆಸರು, ಉದ್ದು, ತೊಗರಿ ಹಾಗೂ ಸೋಯಾಬೀನ್ ಬೆಳೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಹಲವೆಡೆ ಮನೆಗಳು ಕುಸಿತಗೊಂಡಿರುವುದರಿಂದ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರು ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ ಶೀಘ್ರದಲ್ಲೇ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ಒದಗಿಸಲಾಗುವುದುʼ ಎಂದು ಭರವಸೆ ನೀಡಿದರು.

ನಂತರ ಕಾರಂಜಾ ಜಲಾಶಯಕ್ಕೆ ಭೇಟಿ ನೀಡಿದ ಸಚಿವರು, ಜಲಾಶಯದ ಸ್ಥಿತಿಗತಿ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಪ್ರಸ್ತುತ 7 ಟಿಎಂಸಿ ಸಾಮರ್ಥ್ಯದ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, 10 ಸಾವಿರ ಕ್ಯೂಸೆಕ್ ನೀರು ಒಳಹರಿವು ಆಗುತ್ತಿದ್ದು 13 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಚಿವ ರಹೀಂ ಖಾನ್ ಬೆಳೆ ಹಾನಿ ವೀಕ್ಷಣೆ :
ಪೌರಾಡಳಿತ ಮತ್ತು ಹಜ್ ಖಾತೆ ಸಚಿವ, ಬೀದರ್ ಕ್ಷೇತ್ರದ ಶಾಸಕರೂ ಆದ ರಹೀಂ ಖಾನ್ ಅವರು ಶುಕ್ರವಾರ ಬೀದರ ತಾಲ್ಲೂಕಿನ ವಿಲಾಸಪುರ, ರಾಜನಾಳ, ಅಲಿಯಂಬರ್, ಜನವಾಡ, ಚಾಂಬೋಳ್ ಹಾಗೂ ಶ್ರೀಮಂಡಲ ಗ್ರಾಮಗಳ ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಭಾರಿ ಮಳೆಯಿಂದಾಗಿ ರೈತರ ಹೊಲಗಳಲ್ಲಿ ಬೆಳೆಯಲಾದ ಹೆಸರು, ಸೋಯಾಅವರೆ ಸೇರಿದಂತೆ ತೋಟಗಾರಿಕೆ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಹಲವೆಡೆ ಮನೆಗಳು ಕುಸಿದಿವೆ. ಪ್ರತಿಯೊಂದು ವಿಪತ್ತು ಮತ್ತು ಹಾನಿಯ ವರದಿ ಮಾಡಲು ಮತ್ತು ರೈತರಿಗೆ ಸಕಾಲದಲ್ಲಿ ಪರಿಹಾರ ನೀಡಲು ಅಂತರ ಇಲಾಖಾ ಸಮೀಕ್ಷೆಯನ್ನು ಮಾಡಲು ಅಧಿಕಾರಿಗಳಿಗೆ ನಿರ್ದೇಶಿಸಿದರು.
ನಂತರ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರೊಂದಿಗೆ ಕಾರಂಜಾ ಜಲಾಶಯಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಜಲಾಶಯದ ಸ್ಥಿತಿಯ ಬಗ್ಗೆ ಚರ್ಚಿಸಿದರು.
ಬೆಳೆ ಹಾನಿಗೆ ಸೂಕ್ತ ವಿಮೆ ಪರಿಹಾರ ಕೊಡಿಸಲು ಸೂಚನೆ :
ವಿಪರೀತ ಮಳೆಯಿಂದ ಜಿಲ್ಲೆಯಲ್ಲಿ ಆಗಿರುವ ಬೆಳೆ ಹಾನಿಯ ಬಗ್ಗೆ ಕೂಡಲೇ ಸಮೀಕ್ಷೆ ನಡೆಸಿ, ರೈತರಿಗೆ ಬೆಳೆ ವಿಮೆ ಕಂಪನಿಗಳಿಂದ ಸೂಕ್ತ ಪರಿಹಾರ ದೊರಕಿಸಲು ಕ್ರಮ ವಹಿಸುವಂತೆ ಜಿಲ್ಲಾಡಳಿತ ಮತ್ತು ಕೃಷಿ ಅಧಿಕಾರಿಗಳಿಗೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಪರಾಮರ್ಶೆ ನಡಸಿದ ಸಚಿವರು, ʼಕಳೆದ 15 ದಿನಗಳ ಹಿಂದೆ ಹಾಗೂ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಹಲವು ಗ್ರಾಮಗಳು ರಸ್ತೆ ಸಂಪರ್ಕ ಕಡಿತವಾಗಿದ್ದು, ಈ ಸಂಪರ್ಕಗಳ ಪುನರ್ ಸ್ಥಾಪನೆಗೆ ತಕ್ಷಣ ಕ್ರಮ ವಹಿಸಬೇಕು. ಕಾರ್ಯನಿರ್ವಾಹಕ ಇಂಜಿನಿಯರುಗಳು ವಾಟ್ಸಾಪ್‌ನಲ್ಲಿ ಮಾಹಿತಿ ತರಿಸಿಕೊಳ್ಳುವ ಪ್ರವೃತ್ತಿ ಬಿಟ್ಟು, ತಾವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.
ಮಳೆಯಿಂದ ರಸ್ತೆ ಸಂಪರ್ಕ ಕಡಿತವಾಗಿ ಹಲವು ಗ್ರಾಮಗಳಿಗೆ ಬಸ್ ಸಂಚಾರ ಸ್ಥಗಿತವಾಗಿದೆ. ಔರಾದ್, ಕಮಲನಗರ, ಭಾಲ್ಕಿ ತಾಲೂಕುಗಳ ಹೆಚ್ಚಿನ ಗ್ರಾಮಗಳಲ್ಲಿ ಬಸ್ ಸಂಚಾರ ಸ್ಥಗಿತವಾಗಿದ್ದು, ಕೂಡಲೇ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಗುಂಡಿ ಮುಚ್ಚಲು ಸೂಚನೆ: ಒಂದು ವಾರದಲ್ಲಿ ಬೀಳುವ ಮಳೆ ಒಂದೇ ದಿನದಲ್ಲಿ ಬಿದ್ದಿರುವ ಪರಿಣಾಮವಾಗಿ ಹಲವು ರಸ್ತೆಗಳು ಗುಂಡಿ ಬಿದ್ದಿದ್ದು, ದ್ವಿಚಕ್ರ ವಾಹನ ಚಾಲಕರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಕೂಡಲೇ ಈ ಎಲ್ಲ ಗುಂಡಿಗಳನ್ನು ಸಮರೋಪಾದಿಯಲ್ಲಿ ತಾತ್ಕಾಲಿಕವಾಗಿ ಮುಚ್ಚುವಂತೆ ಸೂಚಿಸಿದ ಈಶ್ವರ ಖಂಡ್ರೆ, ಮಳೆಗಾಲ ಮುಗಿದ ತರುವಾಯ ಅಕ್ಟೋಬರ್ ತಿಂಗಳಲ್ಲಿ ಶಾಶ್ವತವಾಗಿ ಈ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳುವಂತೆ ತಿಳಿಸಿದರು.

ಎಸ್.ಡಿ.ಆರ್.ಎಫ್. ಮತ್ತು ಎನ್.ಡಿ.ಆರ್.ಎಫ್. ಅಡಿ ಎಷ್ಟು ಹಣ ಲಭ್ಯವಾಗಲಿದೆ ಎಂಬ ಬಗ್ಗೆ ಅಂದಾಜು ಮಾಡಿ, ಮಳೆಯಿಂದ ಆಗಿರುವ ಹಾನಿಗೆ ಸೂಕ್ತ ಪರಿಹಾರ ದೊರಕಿಸುವಂತೆ ತಿಳಿಸಿದ ಸಚಿವರು, ತಾತ್ಕಾಲಿಕವಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ಯಾವುದೇ ವಿಳಂಬವಿಲ್ಲದೆ ಕೈಗೊಳ್ಳುವಂತೆ ಮತ್ತು ಶಾಶ್ವತ ಕಾಮಗಾರಿ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ನೀರು ತೆರವುಗೊಳಿಸಲು ಸೂಚನೆ: ಭಾಲ್ಕಿ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಶಾಲೆಗಳೂ ಜಲಾವೃತವಾಗಿವೆ. 2-3 ಅಡಿ ನೀರು ನಿಂತಿದ್ದು, ಮಕ್ಕಳು ಶಾಲೆಗೆ ಹೋಗಲಾಗದ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಈ ನೀರನ್ನು ತೆರವು ಮಾಡಲು ಮತ್ತು ಮುಂದಿನ ದಿನಗಳಲ್ಲಿ ಈ ರೀತಿ ಸಮಸ್ಯೆ ಎದುರಾಗದಂತೆ ಸೂಕ್ತ ಕ್ರಮ ವಹಿಸಲು ಹಾಗೂ ಅಗತ್ಯ ಇರುವ ಕಡೆ ಕಾಳಜಿ ಕೇಂದ್ರ ತೆರೆಯಲು ತಿಳಿಸಿದರು.
ಶಾಲೆ ದುರಸ್ತಿ, ಸಾಂಕ್ರಾಮಿಕ ರೋಗ ತಡೆಗೆ ಸೂಚನೆ:
ಬೀದರ್ ಜಿಲ್ಲೆಯಲ್ಲಿ ಇರುವ ಸರ್ಕಾರಿ ಶಾಲೆಗಳ ಕಟ್ಟಡದ ಸ್ಥಿತಿಗತಿಯ ಬಗ್ಗೆ ಕೂಡಲೇ ಅಧ್ಯಯನ ಆಗಬೇಕು. ಸೋರುತ್ತಿರುವ ಕಟ್ಟಡಗಳನ್ನು ತಕ್ಷಣವೇ ದುರಸ್ತಿ ಮಾಡಬೇಕು. ಶಿಥಿಲವಾಗಿದ್ದರೆ, ಆ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ಕಟ್ಟಬೇಕು. ಇದಕ್ಕೆ ಹಣದ ಕೊರತೆ ಇಲ್ಲ. ತುರ್ತು ಕ್ರಮ ವಹಿಸದೆ ಯಾವುದೇ ಸರ್ಕಾರಿ ಶಾಲಾ ಕಟ್ಟಡದಲ್ಲಿ ಅನಾಹುತ ಸಂಭವಿಸಿದರೆ ಸಂಬಂಧಿತ ಬಿಇಓ ಮತ್ತು ಡಿಡಿಪಿಐಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದ ಸಚಿವರು, ಅಂಗನವಾಡಿಗೂ ಇದೇ ನಿಯಮ ಅನ್ವಯಿಸುತ್ತದೆ. ಹೊಸ ಅಂಗನವಾಡಿ ಕಟ್ಟಡಗಳ ಗುಣಮಟ್ಟದ ಪರೀಕ್ಷೆ ಮಾಡುವಂತೆ ಮತ್ತು ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ತಿಳಿಸಿದರು.
ಮಳೆ ಬಂದು, ಮನೆಗೆ ನೀರು ನುಗ್ಗಿದ ಬಳಿಕ ತೇವಾಂಶದಿಂದ ನಾನಾ ರೀತಿಯ ಸೋಂಕು ಮತ್ತು ಸಾಂಕ್ರಾಮಿಕ ಕಾಯಿಲೆ ಹರಡುತ್ತದೆ. ವೈರಲ್ ಜ್ವರ ಹೆಚ್ಚುತ್ತದೆ ಜಿಲ್ಲಾಡಳಿತ ಹೆಚ್ಚು ಮಳೆಯಾಗಿರುವ ಪ್ರದೇಶಗಳಲ್ಲಿ ನೀರು ನಿಂತು ಸೊಳ್ಳೆಗಳಿಂದ ಸಮುದಾಯ ಆರೋಗ್ಯ ಕೆಡದಂತೆ ಎಚ್ಚರಿಕೆ ವಹಿಸಬೇಕು. ಸಾಂಕ್ರಾಮಿಕ ರೋಗ ಹಬ್ಬದಂತೆ ಎಚ್ಚರಿಕೆ ವಹಿಸಬೇಕು. ತಪಾಸಣೆ ಮಾಡಬೇಕು ಎಂದು ತಿಳಿಸಿದರು.

ʼಎಲ್ಲ ಪಿಡಿಓ, ಪಿಎಸ್ಐ ಹಾಗೂ ತಾಲೂಕು ಮತ್ತು ಪ್ರಾಥಮಿಕ ಆರೋಗ್ಯಾಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲೇ ರಾತ್ರಿ ವಾಸ್ತವ್ಯ ಮಾಡುವಂತೆ, ಒಂದೊಮ್ಮೆ ಒಬ್ಬ ಪಿಡಿಓಗೆ ಎರಡು ಮೂರು ಗ್ರಾಮ ಪಂಚಾಯ್ತಿ ಜವಾಬ್ದಾರಿ ನೀಡಿದ್ದರೆ ಹೆಚ್ಚು ಸಮಸ್ಯೆ ಇರುವ ಗ್ರಾಮದಲ್ಲಿ ಇರುವಂತೆ ತಿಳಿಸಿʼ ಎಂದರು.
ಈಗಾಗಲೇ ವರ್ಗಾವಣೆಗೊಂಡಿರುವ ಅಧಿಕಾರಿಗಳ ಜಾಗಕ್ಕೆ ನಿಯೋಜಿತರಾದ ಅಧಿಕಾರಿ ಬಂದು ಹೊಣೆ ವಹಿಸಿಕೊಳ್ಳುವವರೆಗೆ ಬಿಡುಗಡೆ ಮಾಡದಂತೆಯೂ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.ನೀರಾವರಿ ಯೋಜನೆಯ ಡಿಪಿಆರ್ ಮಾಡದ ಎಂಜಿನಿಯರುಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಸಭೆಯಲ್ಲಿ ಸೂಚಿಸಿದ ಕಾರ್ಯ ಮಾಡದಿದ್ದರೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ಬಗ್ಗೆ ನೀಡಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಕನ್ನಡ ನಾಡಿಗೆ ಗೌರವ ತಂದ ಬಾನು ಮುಷ್ತಾಕ್‌ಗೆ ಅಗೌರವ ಸರಿಯಲ್ಲ
ಸಭೆಯಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್, ಸಂಸದ ಸಾಗರ್ ಖಂಡ್ರೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಸಿಇಒ ಡಾ. ಗಿರೀಶ್ ಬ ದೋಲೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




