ಭಾಲ್ಕಿ ತಾಲೂಕಿನ ವಿವಿಧ ಶಾಲೆಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಭೇಟಿ ನೀಡಿ ಪರಿಶೀಲಿಸಿದರು. ಆಳಂದಿ, ಡೋಣಗಾಪೂರ ಗ್ರಾಮದ ಸರಕಾರಿ ಶಾಲೆಗಳಿಗೆ ಅವರು ಶನಿವಾರ ಭೇಟಿ ನೀಡಿ ಮಕ್ಕಳ ದಾಖಲಾತಿ, ಹಾಜರಾತಿ, ಬಿಸಿಯೂಟ, ಕುಡಿಯುವ ನೀರು, ಶಾಲಾ ಆವರಣ ಸ್ವಚ್ಛತೆ ಸೇರಿ ಮತ್ತಿತರ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದು ಕೊಂಡರು.
ಮೊದಲಿಗೆ ಆಳಂದಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು ಮಕ್ಕಳ ಹಾಜರಾತಿ ಮತ್ತು ದಾಖಲಾತಿ ಪುಸ್ತಕ ಪರಿಶೀಲಿಸಿದರು. ಈ ವೇಳೆ ಶಾಲೆಯಲ್ಲಿ ಒಟ್ಟು 48 ವಿದ್ಯಾರ್ಥಿಗಳು ದಾಖಲಾತಿ ಹೊಂದಿದರೇ, ತರಗತಿಯಲ್ಲಿ ಕೇವಲ 19 ಮಕ್ಕಳು ಇದ್ದದ್ದು ಕಂಡು ಉಳಿದ 29 ಮಕ್ಕಳು ಏಕೆ ಶಾಲೆಯಿಂದ ಹೊರಗುಳಿದ್ದಾರೆ ಎಂದು ಪ್ರಶ್ನಿಸಿದರು.
ದಾಖಲಾತಿ ಪ್ರಕಾರ ಮಕ್ಕಳನ್ನು ಹಾಜರಾತಿಯಲ್ಲಿ ತೋರಿಸಲಾಗುತ್ತಿದೆ. ಆದರೆ ತರಗತಿಯಲ್ಲಿ ಪ್ರಸ್ತುತ ೧೮-೨೦ಮಕ್ಕಳು ಮಾತ್ರ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಉಳಿದ 29 ಮಕ್ಕಳು ಒಂದೇ ದಿನ ಶಾಲೆಯಿಂದ ಹೊರಗೆ ಉಳಿಯಲು ಹೇಗೆ ಸಾಧ್ಯ, ಗೈರಾದ ಮಕ್ಕಳು ಬೇರೆಡೆ ಶಿಕ್ಷಣ ಪಡೆಯುತ್ತಿದ್ದಾರೆಯೇ? ಮಧ್ಯಾಹ್ನದ ಬಿಸಿಯೂಟ, ಹಾಲು, ಮೊಟ್ಟೆ, ಬಾಳೆಹಣ್ಣು ಪೂರ್ಣ ಪ್ರಮಾಣದಲ್ಲಿ ಹೇಗೆ ಬಳಕೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಮೇಲ್ನೋಟಕ್ಕೆ ಸರಕಾರದ ಸೌಲಭ್ಯಗಳನ್ನು ಶಾಲೆಯಿಂದ ಹೊರಗುಳಿದ ಮಕ್ಕಳ ಹೆಸರಿನಲ್ಲಿ ಬಳಕೆ ಮಾಡಿಕೊಂಡAತೆ ಕಾಣುತ್ತಿದೆ. ಕೂಡಲೇ ಎರಡ್ಮೂರು ದಿನಗಳಲ್ಲಿ ಸಮಗ್ರ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ಸಿಆರ್‌ಪಿಗೆ ಸೂಚನೆ ನೀಡಿದರು.
ಕುಡಿಯುವ ನೀರಿನ ಸಮಸ್ಯೆ :
ಇದೇ ವೇಳೆ ಡೋಣಗಾಪೂರ ಗ್ರಾಮದ ಸರಕಾರಿ ಪ್ರೌಢ ಶಾಲೆಗೆ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಭೇಟಿ ನೀಡಿದ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ಕಂಡು ಬಂತು. ಎಲ್ಲ ಅಂಗನವಾಡಿ, ಶಾಲೆಗಳಿಗೆ ಜಲಜೀವನ
ಮಿಷನ್ ಯೋಜನೆಯಡಿ ನಲ್ಲಿ ಸಂಪರ್ಕ ಕಲ್ಪಿಸಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ಶಾಲೆಯಲ್ಲಿ ಏಕೆ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಕುಡಿಯಲು ಮತ್ತು ಶೌಚ ಬಳಕೆ ನೀರು ಇಲ್ಲದಿದ್ದರೇ ಮಕ್ಕಳ ಕಲಿಕೆ ಹೇಗೆ ಪ್ರಗತಿ ಹೊಂದಲು ಸಾಧ್ಯ ಮುಂದಿನ ಮೂರು ದಿನಗೊಳಗೆ ವ್ಯವಸ್ಥೆ ಸರಿಪಡಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.
ಇದನ್ನೂ ಓದಿ : ರಾಜ್ಯದಲ್ಲಿ ಹೆಚ್ಚಿದ ಚಳಿಯ ಅಬ್ಬರ; ಬೀದರ್‌ನಲ್ಲಿ 9 ಡಿಗ್ರಿ ಸೆಲ್ಸಿಯಸ್, ಬೆಂಗಳೂರಿಗರಿಗೆ ಶುರುವಾದ ನಡುಕ
ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸರಕಾರ ಸಾಕಷ್ಟು ಯೋಜನೆ ರೂಪಿಸುತ್ತಿದೆ. ಎಲ್ಲ ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದರ ಜತೆಗೆ ಅಗತ್ಯ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೇ ಆಯೋಗ ಮಧ್ಯೆ ಪ್ರವೇಶಿಸಿ ಸಂಬAಧಿತರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಿದೆʼ ಎಂದರು.





