ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಯ ಒಟ್ಟು 2,051 ಪೈಕಿ 486 ಬಾಲವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಮಕ್ಕಳ ಅಪೌಷ್ಟಿಕತೆ ನಿವಾರಣೆಯಲ್ಲಿ ಅಂಗನವಾಡಿ ಕೇಂದ್ರಗಳು ಮಹತ್ವದ ಪಾತ್ರ ವಹಿಸುತ್ತವೆ. ಆದರೆ, ಕೂರಲು ಜಾಗ ಕೊರತೆ, ಶುದ್ಧ ಕುಡಿಯುವ ನೀರು, ಆಟದ ಮೈದಾನ, ಶೌಚಾಲಯ, ವಿದ್ಯುತ್ ಸಮಸ್ಯೆ, ಕುರ್ಚಿ ಇಲ್ಲದೆ ನೆಲದ ಮೇಲೆ ಕೂರುವ ಮಕ್ಕಳು, ತಡೆಗೋಡೆ ಇಲ್ಲದೆ ಅಸುರಕ್ಷತೆ. ಹೀಗೆ ಇಲ್ಲಗಳ ಮಧ್ಯೆ ಅನೇಕ ಕಡೆ ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ.
ಮಕ್ಕಳ ಶೈಕ್ಷಣಿಕ ಕಲಿಕೆಗೆ ಭದ್ರ ಬುನಾದಿ ಹಾಕುತ್ತಿರುವ ಜಿಲ್ಲೆಯ 2,051 ಅಂಗನವಾಡಿ ಕೇಂದ್ರಗಳ ಪೈಕಿ 1,421 ಕೇಂದ್ರಗಳು ಸ್ವಂತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 486 ಬಾಲವಾಡಿಗಳು ಗ್ರಾಪಂ ಸಮುದಾಯ ಭವನ, ಸರ್ಕಾರಿ ಶಾಲೆ ಕಟ್ಟಡ ಸೇರಿ ಇತರೆ ಸರಕಾರಿ ಕಟ್ಟಡ ಹಾಗೂ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯಭಾರ ಮಾಡುತ್ತಿವೆ. ಇದು ಮಕ್ಕಳ ಬಾಲ್ಯದ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬುದು ಪೋಷಕರ ಆಕ್ರೋಶವಾಗಿದೆ.
ಆರು ತಿಂಗಳಿಂದ 6 ವರ್ಷದವರೆಗಿನ 1,18,130 ಮಕ್ಕಳಿಗೆ, 14,489 ಗರ್ಭಿಣಿಯರಿಗೆ, 12,580 ಬಾಣಂತಿಯರಿಗೆ ಜಿಲ್ಲೆಯ ಅಂಗನವಾಡಿ ಕೇಂದ್ರಗಳು ಪೌಷ್ಟಿಕ ಆಹಾರ ಸೇರಿದಂತೆ ಇತರೆ ಸೇವೆ ಒದಗಿಸುತ್ತಿವೆ. ಆದರೆ, ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ 486 ಕೇಂದ್ರಗಳಿಗೆ ಸ್ವಂತ ಕಟ್ಟಡವೇ ಇಲ್ಲದಿರುವುದು ವಿಪರ್ಯಾಸದ ಸಂಗತಿ. ಇದು ಜನಪ್ರತಿನಿಧಿಗಳು, ಅಧಿಕಾರಿಗಳು ಆತ್ಮವಲೋಕನ ಮಾಡಿಕೊಳ್ಳಬೇಕಾದ ದರ್ದು ಕೂಡ ಹೌದು.
ಬೀದರ್ ನಗರದಲ್ಲಿವೆ ಹೆಚ್ಚು ಸೂರಿಲ್ಲದ ಬಾಲವಾಡಿ :
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಐದು ತಾಲೂಕು ವ್ಯಾಪ್ತಿಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗಳಿವೆ. ಬೀದರ್ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 507 ಅಂಗನವಾಡಿಗಳಿದ್ದು, ಈ ಪೈಕಿ ಬೀದರ್ ನಗರದಲ್ಲಿರುವ 174 ಅಂಗನವಾಡಿಗಳಲ್ಲಿ 15 ಕೇಂದ್ರಗಳು ಮಾತ್ರ ಸ್ವಂತ ಕಟ್ಟಡದಲ್ಲಿವೆ. ನಗರ, ಗ್ರಾಮೀಣ ಸೇರಿ ಒಟ್ಟು 193 ಅಂಗನವಾಡಿಗಳು ಬಾಡಿಗೆಯಲ್ಲಿ ನಡೆಯುತ್ತಿವೆ. ಬೀದರ್ ನಗರದಲ್ಲೇ 147 ಕೇಂದ್ರಗಳಿಗೆ ಸ್ವಂತ ಸೂರಿಲ್ಲ. ಬೀದರ್ ತಾಲೂಕಿನ ಗ್ರಾಮೀಣ ಭಾಗದಲ್ಲಿ 333 ಅಂಗನವಾಡಿಗಳಲ್ಲಿ 270 ಸ್ವಂತ ಕಟ್ಟಡ ಹೊಂದಿವೆ.
ಇನ್ನು ಜಿಲ್ಲೆಯಲ್ಲಿ ಔರಾದ್, ಕಮಲನಗರ (ನಗರ-23, ಗ್ರಾಮೀಣ-367), ಭಾಲ್ಕಿ (ನಗರ-43, ಗ್ರಾಮೀಣ-317), ಬಸವಕಲ್ಯಾಣ, ಹುಲಸೂರ (ನಗರ-65, ಗ್ರಾಮೀಣ-368), ಹುಮನಾಬಾದ್, ಚಿಟಗುಪ್ಪ (ನಗರ-78, ಗ್ರಾಮೀಣ-283) ಹಾಗೂ ಬೀದರ್ (ನಗರ-174, ಗ್ರಾಮೀಣ-333 ಅಂಗನವಾಡಿಗಳಿವೆ. ಈ ಪೈಕಿ ನಗರ ಪ್ರದೇಶದಲ್ಲಿ 298 ಹಾಗೂ ಗ್ರಾಮೀಣದಲ್ಲಿ 188 ಸೇರಿ ಒಟ್ಟು 486 ಕೇಂದ್ರಗಳಿಗೆ ಸೂರಿಲ್ಲದೆ ಬಾಡಿಗೆಯಲ್ಲಿವೆ. ಔರಾದ್, ಕಮಲನಗರ ಅವಳಿ ತಾಲೂಕಿನಲ್ಲಿ ಇರುವ 390 ಅಂಗನವಾಡಿಗಳಲ್ಲಿ 109 ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಭಾಗ್ಯ ಇಲ್ಲ. ಅಂದರೆ ಶೇ.25ರಷ್ಟು ಅಂಗನವಾಡಿಗಳು ಬಾಡಿಗೆಯಲ್ಲಿ ಕಾರ್ಯಭಾರ ನಡೆಸುತ್ತಿವೆ.
ಜಿಲ್ಲೆಯ ನಗರ ಪ್ರದೇಶದಲ್ಲಿ ಒಟ್ಟು 383 ಅಂಗನವಾಡಿಗಳ ಪೈಕಿ ಸ್ವಂತ ಕಟ್ಟಡ ಇದ್ದಿದ್ದು ಕೇವಲ 69 ಕೇಂದ್ರಗಳು. ಉಳಿದ 298 ಬಾಡಿಗೆಯಲ್ಲಿ ನಡೆಯುತ್ತಿವೆ. ಗ್ರಾಮೀಣ ಭಾಗದಲ್ಲಿರುವ ಒಟ್ಟು 1,668ರ ಪೈಕಿ 188 ಕೇಂದ್ರಗಳಿಗೆ ಸ್ವಂತ ಕಟ್ಟಡಕ್ಕಾಗಿ ಕಾಯುತ್ತಿವೆ. ಸ್ವಂತ ಸೂರು ಇಲ್ಲದೆ ಬಾಡಿಗೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರಗಳಿಗೆ ಪ್ರತಿ ತಿಂಗಳು ಇಲಾಖೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಆದರೂ, ಸೂಕ್ತ ಸೌಕರ್ಯ ಇಲ್ಲದೆ ಹಲವೆಡೆ ಇದ್ದೂ ಇಲ್ಲದಂತಹ ಸ್ಥಿತಿಯಲ್ಲಿವೆ.
ಅಂಗನವಾಡಿಗಳಿಗೆ ಬಾಡಿಗೆ ಹಣ ಪಾವತಿಸುವುದರಿಂದ ಇಲಾಖೆಗೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಈ ಖರ್ಚು ತಗ್ಗಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಒಟ್ಟು 88 ಕಡೆ ಸರ್ಕಾರಿ ಶಾಲೆಯ ಕೋಣೆ, 56 ಕಡೆ ಗ್ರಾಮ ಪಂಚಾಯತ್ ಕಟ್ಟಡ ಸೇರಿ ನಾನಾ ಕಡೆ ತಾತ್ಕಾಲಿಕವಾಗಿ ಅಂಗನವಾಡಿ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಯಾವುದೇ ಕೊರತೆಯಿಲ್ಲ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಈಗಲೂ ನೂರಾರು ಕೇಂದ್ರಗಳು ಬಾಡಿಗೆಯಲ್ಲಿ ಇರುವುದಕ್ಕೆ ಕಾರಣವೇವೆಂಬುದು ಪ್ರಜ್ಞಾವಂತರ ಪ್ರಶ್ನೆ.
ನಿವೇಶನ ಕೊರತೆ :
ಬಾಡಿಗೆ ಮತ್ತು ಸರಕಾರಿ ಕಚೇರಿಗಳ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಒದಗಿಸಲು ನಿವೇಶನ ಹುಡುಕುವುದೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಗ್ರಾಮೀಣಕ್ಕಿಂತ ನಗರ ಪ್ರದೇಶಗಳಲ್ಲೇ ಹೆಚ್ಚು ಬಾಡಿಗೆಯಲ್ಲಿವೆ ಎಂಬುದು ಇಲಾಖೆ ನೀಡಿದ ಮಾಹಿತಿ ಹೇಳುತ್ತಿದೆ. ಅದರಲ್ಲೂ ಬೀದರ್ ಮಹಾನಗರದಲ್ಲಿಯೇ ಹೆಚ್ಚು ಬಾಡಿಗೆಯಲ್ಲಿ ಇರುವುದು ಯೋಚಿಸಬೇಕಾದ ಸಂಗತಿ. ಹಲವು ಕೇಂದ್ರಗಳಲ್ಲಿ ಪ್ರತ್ಯೇಕ ಅಡುಗೆ ಕೋಣೆಗಳಿಲ್ಲ. ಮಕ್ಕಳನ್ನು ಕೂರಿಸಿ ಪಾಠ ಮಾಡುವ ಕೊಠಡಿಯಲ್ಲೇ ಅಡುಗೆ ತಯಾರಿಸುವುದು ಕಾಣಬಹುದು.
ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಖಾಲಿ ನಿವೇಶನ ಕೊರತೆ ಎದುರಾಗಿದೆ. ನಿವೇಶನ ಸಿಗದಿರುವ ಕಾರಣಕ್ಕೆ ಬಾಡಿಗೆಯಲ್ಲಿ ನಡೆಸಲಾಗುತ್ತಿದೆ. ಇಂತಹ ಸವಾಲಿನ ಮಧ್ಯೆಯೂ ಜಿಲ್ಲಾದ್ಯಂತ 128 ನಿವೇಶಗಳನ್ನು ಹುಡುಕಲಾಗಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
283 ಅಂಗನವಾಡಿ ಕಟ್ಟಡ ಮಂಜೂರು:
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ, ಎಸ್‌ಡಿಪಿ, ಕೆಕೆಆರ್‌ಡಿಬಿಇ ಸೇರಿ ನಾನಾ ಯೋಜನೆಗಳಡಿ ಇಲ್ಲಿಯವರೆಗೆ 283 ಅಂಗನವಾಡಿ ಕೇಂದ್ರಗಳಿಗೆ ಕಟ್ಟಡ ಮಂಜೂರಾಗಿದ್ದು, ಅವುಗಳಲ್ಲಿ ಗ್ರಾಪಂ, ಪಿಆರ್‌ಇಡಿ, ಕೆಆರ್‌ಐಡಿಎಲ್ ವತಿಯಿಂದ 175 ಕಾಮಗಾರಿ ಪೂರ್ಣಗೊಂಡಿದ್ದು, ಅದರಲ್ಲಿ 38 ಕಾಮಗಾರಿ ಪ್ರಗತಿಯಲ್ಲಿದ್ದು, 69 ಕಡೆ ಕಾಮಗಾರಿ ಇನ್ನೂ ಆರಂಭಿಸಿಲ್ಲ. ಈ ಕಟ್ಟಡಗಳು ಪೂರ್ಣಗೊಂಡರೆ ಸರಕಾರಿ ಕಟ್ಟಡ ಹಾಗೂ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಹಲವು ಬಾಲವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ದೊರೆಯುವಂತಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್ ʼಈದಿನʼಕ್ಕೆ ಮಾಹಿತಿ ನೀಡಿದರು.
201 ಅಂಗನವಾಡಿ ಹುದ್ದೆ ಖಾಲಿ :
ಗ್ರಾಮೀಣ ಭಾಗದಲ್ಲಿ ತಾಯಿ ಗರ್ಭಧಾರಣೆಯಿಂದ ಮಕ್ಕಳ ಪಾಲನೆ ಪೋಷಣೆಗೆ ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ಜರೂರಿ ಇದೆ. ಸರ್ಕಾರದ ವಿವಿಧ ಸೌಲಭ್ಯಗಳನ್ನು ಮನೆ-ಮನೆಗೆ ತಲುಪಿಸುವಲ್ಲಿ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ ಜಿಲ್ಲೆಯ ವಿವಿಧೆಡೆ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳು ಖಾಲಿಯಿಂದ ಮಕ್ಕಳ ಕಲಿಕೆಗೆ ತೊಡಕಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 2,051 ಅಂಗನವಾಡಿ ಕೇಂದ್ರಗಳಿದ್ದು, ಮಂಜೂರಾದ 2,051 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಲ್ಲಿ 1,990 ಕಾರ್ಯಕರ್ತೆಯರ ಹುದ್ದೆ ಭರ್ತಿಯಾಗಿದೆ, 1,910 ಸಹಾಯಕಿಯರ ಹುದ್ದೆ ಭರ್ತಿಯಾಗಿದೆ. ಉಳಿದ 61 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 140 ಸಹಾಯಕಿಯರ ಹುದ್ದೆ ಸೇರಿ ಒಟ್ಟು 201 ಹುದ್ದೆಗಳು ಖಾಲಿ ಇವೆ.
ʼಅಂಗನವಾಡಿ ಸಹಾಯಕಿಯರ ಹುದ್ದೆ ಖಾಲಿ ಇರುವ ಕಡೆ ಅಂಗನವಾಡಿ ಕಾರ್ಯಕರ್ತೆಯರು ಅಡುಗೆ ತಯಾರಿಸುವ ಜೊತೆಗೆ ಕಲಿಕೆಯ ಜವಾಬ್ದಾರಿಯೂ ಅವರ ಮೇಲಿದೆ. ಇನ್ನು ಕಾರ್ಯಕರ್ತೆಯರಿಲ್ಲದ ಕಡೆ ಸಹಾಯಕಿಯರೇ ಅಡುಗೆ ಕೆಲಸ ಜೊತೆಗೆ ಮಕ್ಕಳನ್ನು ಸಂಭಾಳಿಸುವ ಕೆಲಸ ಹೊರೆಯಾದರೂ ಮಜ್‌ಬೂರ್ ದಿಂದ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ದಾಖಲಾತಿ ಇದ್ದರೂ ಬಹುತೇಕ ಕಡೆ ಹಾಜರಾತಿ ಇರುವುದಿಲ್ಲ. ಆರು ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, ಬಾಣಂತಿಯರ ಆರೋಗ್ಯ, ಪೌಷ್ಟಿಕ ಮಟ್ಟ ವೃದ್ಧಿಸುವುದು ಈ ಕೇಂದ್ರಗಳ ಉದ್ದೇಶ. ಆದರೆ, ನಗರ ಹಾಗೂ ಗ್ರಾಮೀಣ ಭಾಗದ ಹಲವಾರು ಪೋಷಕರು ಅಂಗನವಾಡಿ ಅವ್ಯವಸ್ಥೆ ಕಂಡು ತಮ್ಮ ಮಕ್ಕಳನ್ನು ಬಾಲವಾಡಿ ಬದಲು ನರ್ಸರಿ ಶಾಲೆಗಳಿಗೆ ಕಳುಹಿಸುತ್ತಾರೆ.
ʼಅಂಗನವಾಡಿ ಕೇಂದ್ರದಲ್ಲಿ ಅಡುಗೆ ಕೋಣೆ, ದಾಸ್ತಾನು, ಮಕ್ಕಳ ಆಟ–ಪಾಠದ ಕೋಣೆ ಮತ್ತು ಶೌಚಾಲಯದ ವ್ಯವಸ್ಥೆ ಇರಬೇಕು. ಆದರೆ, ಬಾಡಿಗೆ ಕಟ್ಟಡಗಳಲ್ಲಿ ಇದು ಸಾಧ್ಯವಿಲ್ಲ. ಮಕ್ಕಳ ಸರ್ವಾಂಗೀಣ ಪ್ರಗತಿಗೆ ಗುಣಮಟ್ಟದ ಸರ್ಕಾರಿ ಕಟ್ಟಡಗಳು ಅಗತ್ಯವಾಗಿವೆʼ ಎಂದು ಹೆಸರೇಳಲು ಇಚ್ಚಿಸದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಹೇಳುತ್ತಾರೆ.
ಇದನ್ನೂ ಓದಿ : ಬೀದರ್ | ಡಿಜಿಟಲ್ ಗ್ರಂಥಾಲಯದಲ್ಲಿ ಓದಿ ವಿದೇಶದಲ್ಲಿ ನೌಕರಿ : ಹಳ್ಳಿ ಹುಡುಗನ ಸಾಧನೆಗೆ ಎಲ್ಲರೂ ದಿಲ್ ಖುಷ್!
ಅಂಗನವಾಡಿ ಕೇಂದ್ರಗಳಿಗೆ ಕೂಲಿ-ಕಾರ್ಮಿಕರು, ಬಡವರು ಮತ್ತು ಜನಸಾಮಾನ್ಯರ ಮಕ್ಕಳು ಹೆಚ್ಚು ಹೋಗುತ್ತಾರೆ. ಈ ಕೇಂದ್ರಗಳಲ್ಲೇ ಬಡಮಕ್ಕಳ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯ ಆಗುತ್ತದೆ. ಗುಣಮಟ್ಟದ ಕಟ್ಟಡಗಳೂ ಮುಖ್ಯ. ಸರ್ಕಾರವು ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳ ಜೊತೆಗೆ ಸೌಲಭ್ಯ ಒದಗಿಸಬೇಕು’ ಎಂದು ಸಿಐಟಿಯು ರಾಜ್ಯ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




