ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನವನ್ನು ಬೀದರ್ ಜಿಲ್ಲೆಯ ವಿವಿಧೆಡೆ ವಿಶೇಷವಾಗಿ ಆಚರಿಸಲಾಯಿತು.
ಬೀದರ್ ನಗರದಲ್ಲಿ ದಲಿತ ಯೂನಿಟಿ ಮ್ಯೂಮೆಂಟ್ ಸಂಘಟನೆಯ ಪದಾಧಿಕಾರಿಗಳು ನಗರದ ನೌಬಾದ್‌ದಿಂದ ಮುಖಾಂತರ ನಗರದ ಹೃದಯಭಾಗದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಪಾದಯಾತ್ರೆ ಕೈಗೊಂಡು ಬಾಬಾ ಸಾಹೇಬರ ಆದರ್ಶಗಳ ಕುರಿತು ಜಾಗೃತಿ ಮೂಡಿಸಿದರು.
ದಲಿತ ಯೂನಿಟಿ ಮ್ಯೂಮೆಂಟ್ ಸಂಸ್ಥಾಪಕರಾದ ವಿನೋದ ರತ್ನಾಕರ ಮಾತನಾಡಿ, ʼಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತ ಅಷ್ಟೇ ಅಲ್ಲದೆ, ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ. ಅನೇಕ ನೋವು, ಅಪಮಾನ, ಯಾತನೆಗಳ ಮಧ್ಯೆಯೂ ಅಪಾರವಾದ ಜ್ಞಾನ ಸಂಪಾದಿಸಿದರು. ಜಗತ್ತಿಗೆ ಮಾದರಿಯಾದ ಶ್ರೇಷ್ಠ ಸಂವಿಧಾನ ರಚಿಸಿ ದೇಶದ ಜನರಿಗೆ ಸಮಾನತೆ ತತ್ವ ನೀಡಿದರು. ಅಂಬೇಡ್ಕರ್ ಅವರ ಸಂವಿಧಾನಬದ್ಧ ಆಶಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಸಮಾಜ ರೂಪುಗೊಳ್ಳಲು ಸಾಧ್ಯʼ ಎಂದು ಹೇಳಿದರು.

ಸಂಘಟನೆಯ ರಾಜ್ಯಾಧ್ಯಕ್ಷ ಪ್ರಕಾಶ ರಾವಣ ಮಾತನಾಡಿ, ʼಬಾಬಾ ಸಾಹೇಬರ ಪರಿನಿರ್ವಾಣ ನಿಮಿತ್ತ ಪ್ರತಿವರ್ಷ ನಮ್ಮ ಸಂಘಟನೆ ವತಿಯಿಂದ ಪಾದಯಾತ್ರೆ ನಡೆಸಲಾಗುತ್ತಿದೆ. ಅಂಬೇಡ್ಕರ್ ಅವರು ತತ್ವಾದರ್ಶಗಳನ್ನು ಯುವ ಸಮೂಹಕ್ಕೆ ತಲುಪಿಸುವ ಗುರಿ ಮತ್ತು ಉದ್ದೇಶ ನಮ್ಮದಾಗಿದೆ. ನಾವೆಲ್ಲರೂ ಸಂವಿಧಾನ ತತ್ವಗಳನ್ನು ಪಾಲಿಸೋಣʼ ಎಂದರು.
ಈ ಸಂದರ್ಭದಲ್ಲಿ ದಮ್ ಸಂಘಟನೆಯ ಪ್ರಮುಖರಾದ ವಿನೀತ ಗಿರಿ, ಗೌತಮ್ ದೊಡ್ಡಿ, ಮಹಾಂತೇಶ ಹಳ್ಳಿಖೇಡ, ಯಾದುಲ ವಲ್ಲೆಪುರೆ, ಗೌತಮ ಕೆಂಪೆ, ಸಂತೋಷ ದೊಡ್ಡಿ ಹಾಗೂ ಮಹಾನಗರ ಪಾಲಿಕೆ ಸದಸ್ಯ ಸೂರ್ಯಕಾಂತ ಸಾಧುರೆ, ಕೃಷ್ಣ ಭುತಾಳೆ, ಪ್ರಜ್ವಲ್, ರೋಹನ್ ಅಲ್ಲಾಪುರೆ, ಲಿಖಿತ್ ನಿಂಬೂರೆ ಮತ್ತಿತರರಿದ್ದರು.
ಔರಾದ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಂಬೇಡ್ಕರ್ ಪರಿನಿಬ್ಬಾಣ ದಿನ ಆಚರಣೆ :
ಮಹಾ ಮಾನವತಾವಾದಿ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ದಿನವನ್ನು ಔರಾದ್ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಆಚರಿಸಲಾಯಿತು.
ಬಹುಜನ ಜನಸಂಪರ್ಕ ಕಾರ್ಯಾಲಯದ ವ್ಯವಸ್ಥಾಪಕ ರಾಹುಲ್ ಖಂದಾರೆ ಮಾತನಾಡಿ, ʼಡಾ.ಬಿ.ಆರ್. ಅಂಬೇಡ್ಕರ್ ಅವರ ಬದುಕು-ಹೋರಾಟ ದೇಶಕ್ಕೆ ಮಾದರಿ. ಅವರ ನಡೆದು ಬಂದ ಹಾದಿಯಲ್ಲಿ ನಾವೆಲ್ಲರೂ ಸಾಗುವುದು ಅಗತ್ಯವಿದೆ. ಸಂವಿಧಾನದ ತತ್ವಾದರ್ಶಗಳನ್ನು ಯುವ ಜನಾಂಗಕ್ಕೆ ತಿಳಿಸಿ ಜಾಗೃತಿ ಮೂಡಿಸಬೇಕಿದೆʼ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಸುಭಾಷ್ ಲಾಧಾ, ಸಿದ್ದಾರ್ಥ್ ಭೊಸ್ಲೆ, ಸಂತೋಷ್ ಶಿಂಧೆ, ಪ್ರವೀಣ್ ಕಾರಂಜಿ, ಬಸವರಾಜ್ ಕಾಂಬಳೆ, ದಿನೇಶ್ ಶಿಂದೆ, ಸುಂದರ್ ಮೇತ್ರೆ, ಸಂತೋಷ ಸೂರ್ಯವಂಶಿ, ಸೂಪರ್ ಡೂಂಗ್ರೆ, ಅನಿಲ್ ಭುಜಂಗ, ಚಂದ್ರಕಾಂತ್ ಕಾಂಬ್ಳೆ, ವಿವಿಧ ಸಂಘಟನೆ ಮುಖಂಡರು, ಪ್ರಗತಿಪರ ಚಿಂತಕರು, ಯುವ ಹೋರಾಟಗಾರರು, ಸಮಾಜದ ಮುಖಂಡರು ಹಾಗೂ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.
ಬಳಿಕ ಆಸ್ಪತ್ರೆಯಲ್ಲಿ ಎಲ್ಲ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಇದನ್ನೂ ಓದಿ : ಬೀದರ್ | ಜಿಲ್ಲಾದ್ಯಂತ ಅಂಬೇಡ್ಕರವರ 69ನೇ ಮಹಾಪರಿನಿರ್ವಾಣ ದಿನ ಆಚರಣೆ





