ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನವೆಂಬರ್ 29, 30ರಂದು ನಡೆಯುವ 46ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ–2025ರಲ್ಲಿ ಅನುಭವ ಮಂಟಪದಿಂದ ನೀಡುವ ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾಗಿರುವವರ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
ಬೀದರ್ ನಗರದ ನಿವೃತ್ತ ಶಿಕ್ಷಕ, ಚಿತ್ರಕಲಾವಿದ ಸಿ.ಬಿ.ಸೋಮಶೆಟ್ಟಿ ಅವರು ತಮ್ಮ ಸಂಪೂರ್ಣ ಆಯುಷ್ಯವನ್ನು ಚಿತ್ರಕಲೆಗಾಗಿ ಸಮರ್ಪಿಸಿದವರು. ವಿಶೇಷವಾಗಿ ಬಸವಾದಿ ಶರಣರ ಚಿತ್ರಗಳು ಬಿಡಿಸುವಲ್ಲಿ ಎತ್ತಿದ ಕೈ. ಬಸವಣ್ಣನವರ ಜೀವನಕ್ಕೆ ಸಂಬಂಧಿಸಿದ 115 ಕ್ಕೂ ಹೆಚ್ಚು ವರ್ಣಚಿತ್ರಗಳು ಬಿಡಿಸಿದ ಹೆಗ್ಗಳಿಗೆ ಇವರದ್ದಾಗಿದೆ. ಇವರನ್ನು ಡಾ.ಚನ್ನಬಸವ ಪಟ್ಟದ್ದೇವರು ಅನುಭವಮಂಟಪ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಘೋಷಿಸಿದ್ದಾರೆ.

ಬಸವಭಾಸ್ಕರ್ ರಾಷ್ಟ್ರೀಯ ಪ್ರಶಸ್ತಿಗೆ ಶಿರೂರಿನ ನಾಟಕಕಾರ ಬಸವರಾಜ ಬೇಂಗೇರಿ, ಅನುಭವಮಂಟಪ ರಾಷ್ಟ್ರೀಯ ಪ್ರಶಸ್ತಿಗೆ ಬೆಂಗಳೂರಿನ ಸುಮಂಗಲಿ ಸೇವಾ ಆಶ್ರಮದ ಅಧ್ಯಕ್ಷೆ ಎಸ್.ಜಿ.ಸುಶೀಲಮ್ಮ ಆಯ್ಕೆಯಾಗಿದ್ದಾರೆ. ಈ ಮೂರೂ ಪ್ರಶಸ್ತಿಯು ತಲಾ ₹1ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿವೆ.
ಹೊಸಪೇಟೆಯ ಚಿಂತಕ ಕೆ.ರವೀಂದ್ರನಾಥ ಅವರಿಗೆ ಡಾ.ಎಂ.ಎಂ.ಕಲಬುರಗಿ ಸಾಹಿತ್ಯ ಸಂಶೋಧನಾ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹50 ಸಾವಿರ ಹಾಗೂ ಫಲಕ ಹೊಂದಿದೆ.

ಶರಣ ವೈದ್ಯ ಸಂಗಣ್ಣ ಪ್ರಶಸ್ತಿಗೆ ಮಹಾರಾಷ್ಟ್ರದ ದೇಗಲೂರಿನ ಪ್ರಸಿದ್ಧ ವೈದ್ಯ ಮಲ್ಲಿಕಾರ್ಜುನ ರಗಟೆ, ಶರಣ ಒಕ್ಕಲಿಗ ಮುದ್ದಣ್ಣ ಪ್ರಶಸ್ತಿ (2024)ಗೆ ಖಾನಾಪೂರದ ಸಾವಯವ ಕೃಷಿಕ ರಮೇಶ ಮೋರ್ಗೆ, ಶರಣ ಒಕ್ಕಲಿಗ ಮುದ್ದಣ್ಣ ಪ್ರಶಸ್ತಿ (2025)ಯನ್ನು ಹುಡಗಿಯ ಸಾವಯವ ಕೃಷಿಕ ಸೋಮಶಂಕರ ಅವರಿಗೆ ನೀಡಲಾಗುತ್ತಿದೆ. ಈ ಪ್ರಶಸ್ತಿಗಳು ತಲಾ ₹10 ಸಾವಿರ ನಗದು ಹಾಗೂ ಫಲಕ ಒಳಗೊಂಡಿವೆ.
ಇದನ್ನೂ ಓದಿ : ಬೀದರ್ | ಟನ್ ಕಬ್ಬಿಗೆ ₹3,100 ಬೆಲೆ ಕೊಡಲೇಬೇಕು : ಪಟ್ಟು ಹಿಡಿದ ರೈತರು, ಧರಣಿ ಆರಂಭ
ಎಲ್ಲ ಪ್ರಶಸ್ತಿಗಳು ಅನುಭವಮಂಟಪ ಉತ್ಸವದಲ್ಲಿ ಪೂಜ್ಯರ ಹಾಗೂ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.





