ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇಡೀ ಜಗತ್ತಿಗೆ ಮಾದರಿಯಾದ ಸಂವಿಧಾನ ನೀಡಿ ಪ್ರಜಾಪ್ರಭುತ್ವ, ಸಮ ಸಮಾಜಕ್ಕೆ ಭದ್ರ ಬುನಾದಿ ಹಾಕಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.
ಶನಿವಾರ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನ ಅಂಗವಾಗಿ ಬೀದರ್ ನಗರದ ಅಂಬೇಡ್ಕರ್ ವೃತ್ತದಲ್ಲಿ ಡಾ.ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿ ಮಾತನಾಡಿದರು.
ʼಸಾಮಾಜಿಕ ನ್ಯಾಯ, ಸಮಾನತೆ ಸ್ಥಾಪನೆಗೆ ಜೀವನವಿಡೀ ಹೋರಾಡಿದರು. ಸಮಾಜದ ಪರಿವರ್ತನೆ, ಅನಿಷ್ಟ ಪದ್ಧತಿಗಳ ನಿರ್ಮೂಲನೆ, ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಹೋರಾಟ ಮಾಡುವುದರ ಮೂಲಕ ಪ್ರಜಾಸತ್ತಾತ್ಮಕ ಭಾರತದ ನಿರ್ಮಾಣ ಮಾಡಿದ್ದಾರೆ. ಅವರು ಇಂದು ಭೌತಿಕವಾಗಿ ನಮ್ಮ ಮಧ್ಯೆ ಇಲ್ಲದಿದ್ದರೂ, ಅವರ ಆದರ್ಶ ಮತ್ತು ಚಿಂತನೆಗಳು ಯಾವಾಗಲೂ ನಮ್ಮಲ್ಲಿ ಇರುತ್ತವೆʼ ಎಂದು ನುಡಿದರು.
ʼಜಗತ್ತಿನಲ್ಲೇ ಅತ್ಯಂತ ದೊಡ್ಡ ಲಿಖಿತ ಸಂವಿಧಾನವನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ಕೊಟ್ಟಿದ್ದಾರೆ. ಸ್ವಾತಂತ್ರ‍್ಯ ಸಿಕ್ಕಿ, ಸಂವಿಧಾನ ಅಳವಡಿಸಿಕೊಂಡು 75 ವರ್ಷಗಳಾಗಿವೆ. ಈ 75 ವರ್ಷಗಳಲ್ಲಿ ನಮ್ಮ ದೇಶದಲ್ಲಿ ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ, ವೈಜ್ಞಾನಿಕವಾಗಿ ನಾವು ಪ್ರಗತಿ ಕಂಡಿದ್ದೇವೆ. ನಮ್ಮ ಸಂವಿಧಾನದಿಂದ ಪ್ರತಿಯೊಬ್ಬ ಪ್ರಜೆಗೂ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ವಾತಂತ್ರ‍್ಯ, ಮೂಲಭೂತ ಹಕ್ಕುಗಳು, ವ್ಯಕ್ತಿ ಗೌರವ, ನ್ಯಾಯ ದೊರೆಯುವಂತಾಗಿದೆʼ ಎಂದರು.
ʼನಾವೆಲ್ಲರೂ ಸಂವಿಧಾನದ ಆಶಯಗಳು, ಮೌಲ್ಯಗಳು ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾನವೀಯ ಸಂದೇಶಗಳು ಮತ್ತು ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಅವರು ʼಬುದ್ಧ, ಬಸವ, ಅಂಬೇಡ್ಕರ್ ಅವರ ಆದರ್ಶಗಳಂತೆ ಕಾಂಗ್ರೆಸ್ ನೇತ್ರತ್ವದ ರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಣೆಗೆ ನಮ್ಮ ಸರ್ಕಾರ ಕಟಿಬದ್ಧವಾಗಿದೆʼ ಎಂದರು.
ಇದನ್ನೂ ಓದಿ : ಬಾಬಾಸಾಹೇಬರ ಸಂಧ್ಯಾರಾಗ; ಕೊನೆಯ ರಾತ್ರಿಯ ಕಾಯಕ
ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಮಾಜಿ ಸಚಿವ ಬಂಡೆಪ್ಪ ಖಾಶಂಪುರ, ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಗಿರೀಶ್ ಬದೋಲೆ, ಬೀದರ ಸಹಾಯಕ ಆಯುಕ್ತ ಮೊಹಮದ್ ಶಕೀಲ್, ಮಾಜಿ ಎಂಎಲ್ಸಿ ಅರವಿಂದಕುಮಾರ್ ಅರಳಿ ಹಾಗೂ ಮುಖಂಡರಾದ ಸೂರ್ಯಕಾಂತ ನಾಗಮಾರಪಳ್ಳಿ, ಅನೀಲಕುಮಾರ ಬೆಲ್ದಾರ, ಬಾಬಾ ಪಾಸ್ವಾನ್, ಈಶ್ವರ ಸಿಂಗ್ ಠಾಕೂರ್, ಪಂಡಿತ್ ಚಿದ್ರಿ, ಹಣಮಂತ ಮಲ್ಕಾಪುರೆ, ಎಂ.ಡಿ. ಆಸೀಫುದ್ದೀನ್ ಸೇರಿದಂತೆ ಮುಖಂಡರ, ಗಣ್ಯರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.





