ಬೀದರ್–ಬೆಂಗಳೂರು ನಡುವೆ ನಾಗರಿಕ ವಿಮಾನಯಾನ ಸೇವೆ ಪುನ: ಆರಂಭಿಸುವ ಕುರಿತಂತೆ ವಿವಿಧ ವಿಮಾನಯಾನ ಕಂಪನಿಗಳೊಂದಿಗೆ ಚರ್ಚಿಸಿ ಎರಡು ವಾರಗಳ ಒಳಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಬೆಂಗಳೂರಿನ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಬೀದರ್ ಉಸ್ತುವಾರಿ ಮತ್ತು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಮತ್ತು ಪೌರಾಡಳಿತ ಸಚಿವ ರಹೀಂ ಖಾನ್ ಅವರೊಂದಿಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಚಿವರು ಮೇಲಿನಂತೆ ಸೂಚಿಸಿದರು.
ಬೀದರ್ ಮತ್ತು ಬೆಂಗಳೂರು ನಡುವೆ ವಿಮಾನಯಾನ ಸೇವೆ ಪುನಾರಂಭಿಸುವ ಕುರಿತಂತೆ 72 ಆಸನಗಳ ಚಿಕ್ಕ ವಿಮಾನಯಾನ ಸೇವೆ ಒದಗಿಸುವ ವಿವಿಧ ಕಂಪನಿಗಳ ಜೊತೆಯಲ್ಲಿ ಮಾತುಕತೆ ನಡೆಸಿ 2 ವಾರಗಳ ಒಳಗಾಗಿ ಪ್ರಸ್ತಾವನೆ ಸಲ್ಲಿಸಲು ಸಚಿವ ಎಂ.ಬಿ.ಪಾಟೀಲ್ ಸೂಚಿಸಿದರು.
ಸಚಿವ ಈಶ್ವರ ಖಂಡ್ರೆ ಮಾತನಾಡಿ, ʼಹಿಂದುಳಿದ ಕಲ್ಯಾಣ ಕರ್ನಾಟಕಕ್ಕೆ ಸೇರಿದ ಗಡಿ ಜಿಲ್ಲೆ ಬೀದರ್‌ಗೆ ವಿಮಾನಯಾನ ಸೇವೆ ಕಲ್ಪಿಸಬೇಕೆಂಬ ಜನರ ಹೋರಾಟಕ್ಕೆ ಮಣಿದು 2020ರಲ್ಲಿ ಭಾರತೀಯ ವಾಯುಪಡೆಗೆ ಸೇರಿದ ವಿಮಾನ ನಿಲ್ದಾಣದಲ್ಲಿಯೇ ನಾಗರಿಕ ವಿಮಾನಯಾನ ಸೇವೆ ಆರಂಭಿಸಲಾಗಿತ್ತು. ಸ್ಥಗಿತಗೊಂಡಿದ್ದ ವಿಮಾನಯಾನ ಮತ್ತೆ 2022ರಲ್ಲಿ ಪುನಾರಂಭವಾಗಿತ್ತು. ಈಗ ಮತ್ತೆ ಕಳೆದ ಡಿಸೆಂಬರ್‌ನಿಂದ ಸಂಪೂರ್ಣ ಸ್ಥಗಿತಗೊಂಡಿದೆʼ ಎಂದು ಮಾಹಿತಿ ನೀಡಿದರು.
ʼಉಡಾನ್ ಸಬ್ಸಿಡಿ ನಿಲ್ಲಿಸಿರುವ ಕಾರಣ ವಿಮಾನ ಸೇವೆ ಒದಗಿಸಲು ಸಾಧ್ಯವಿಲ್ಲ. ಮತ್ತೆ ಸಬ್ಸಿಡಿ ನೀಡುವುದಾದರೆ ಸೇವೆ ಒದಗಿಸಲು ಸಿದ್ಧ ಎಂದು ಸೇವಾ ಪೂರೈಕೆದಾರ ಸಂಸ್ಥೆಗಳು ಹೇಳುತ್ತಿವೆ. ರಾಜ್ಯ ಸರ್ಕಾರದಿಂದಲೇ ಸಬ್ಸಿಡಿ ಹಣ ಭರಿಸುವ ಕುರಿತಂತೆ ವಿಮಾನಯಾನ ಸೇವಾ ಪೂರೈಕೆದಾರರೊಂದಿಗೆ ಮಾತುಕತೆ ನಡೆಸಿ, ಜಿಲ್ಲೆಯ ಜನರಿಗೆ ಅಗ್ಗದ ದರದಲ್ಲಿ ನಾಗರಿಕ ವಿಮಾನಯಾನ ಸೇವೆ ಪುನಾರಂಭಿಸಬೇಕುʼ ಎಂದು ಸಚಿವ ಖಂಡ್ರೆ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಪತ್ನಿ ಕೊಲೆಗೆ ಯತ್ನಿಸಿದ ಪತಿಗೆ 2 ವರ್ಷ ಜೈಲು, ದಂಡ
ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ ಮತ್ತಿತರರು ಪಾಲ್ಗೊಂಡಿದ್ದರು.





