ಬಸವಾದಿ ಶರಣರು ಸಕಲ ಜೀವಾತ್ಮರ ಕಲ್ಯಾಣ ಬಯಸಿದ ಮಹಾನುಭಾವರು ಎಂದು ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಬಸವಕಲ್ಯಾಣ ನಗರದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ವಿಶ್ವ ಬಸವಧರ್ಮ ಟ್ರಸ್ಟ್ ವತಿಯಿಂದ 46ನೆಯ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ-2025 ನಿಮಿತ್ತ ಆಯೋಜಿಸಿದ್ದ ಕಲ್ಯಾಣ ದರ್ಶನ ಪ್ರವಚನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
12ನೇ ಶತಮಾನದ ಕಲ್ಯಾಣ ಸರ್ವ ಸಮಾನತೆಯ ಕಲ್ಯಾಣವಾಗಿತ್ತು. ದೇಶದ ಎಲ್ಲ ದಾರಿಗಳು ಕಲ್ಯಾಣದ ಕಡೆ ಬರುತ್ತಿದ್ದವು. ಬಸವಣ್ಣನವರ ಸಮಗ್ರ ಕ್ರಾಂತಿಯನ್ನು ನೋಡಲು ಜಗತ್ತಿನ ಎಲ್ಲ ಭಾಗಗಳಿಂದ ಶರಣರು ಕಲ್ಯಾಣಕ್ಕೆ ಆಗಮಿಸಿದರು. ಕಲ್ಯಾಣ ನೆಲದಲ್ಲಿ ಜಗತ್ತಿನ ಮೊದಲನೆಯ ಸಂಸತ್ತು ಎಂದು ಖ್ಯಾತಿ ಪಡೆದ ಅನುಭವಮಂಟಪ ರೂಪ ತಾಳಿತ್ತುʼ ಎಂದರು.
ʼಅರಿವು, ಆಚಾರ, ಅನುಭಾವ, ಕಾಯಕ, ದಾಸೋಹ ಮುಂತಾದ ಮೌಲ್ಯಗಳ ನಿಜಾಚರಣೆಯಿಂದ ಕಲ್ಯಾಣ ಕೈಲಾಸವಾಗಿ ಕಂಗೋಳಿಸಿತ್ತು. ಈ ವೈಭವ ಮತ್ತೊಮ್ಮೆ ಕಾಣುವ ಉದ್ದೇಶದಿಂದ ಕಲ್ಯಾಣ ದರ್ಶನ ಪ್ರವಚನ ಏರ್ಪಡಿಸಲಾಗಿದ್ದು, ಬಸವ ಭಕ್ತರು ಸದುಪಯೋಗ ಪಡೆದು ಕೊಳ್ಳಬೇಕುʼ ಎಂದು ತಿಳಿಸಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವುರ, ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಡಾ.ಶಿವಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಅತ್ತಿವೇರಿಯ ಬಸವೇಶ್ವರಿ ಮಾತಾಡಿ ಪ್ರವಚನ ನಡೆಸಿ
ಕೊಟ್ಟರು.
ಇದನ್ನೂ ಓದಿ : ಬೀದರ್ | ರೈತರ ತಾಳ್ಮೆ ಪರೀಕ್ಷಿಸಬೇಡಿ, ಕಬ್ಬಿಗೆ ₹3,100 ಬೆಲೆ ಕೊಡಿ : ಅರವಿಂದಕುಮಾರ್ ಅರಳಿ
ಬಸವಕಲ್ಯಾಣದ ನಿವೃತ್ತ ನ್ಯಾಯಾಧೀಶ ಸುಭಾಶಚಂದ್ರ ನಾಗರಾಳೆ ಅವರು ಕಲ್ಯಾಣ ದರ್ಶನ ಪ್ರವಚನ ಉದ್ಘಾಟಿಸಿದರು. ಮಲ್ಲಿಕಾರ್ಜುನ ಚಿರಡೆ ಬಸವ ಗುರುವಿನ ಪೂಜೆ ನೆರವೇರಿ ಕೊಟ್ಟರು. ಪ್ರಮುಖರಾದ ಸುಧೀರ ಕಾಡಾದಿ, ಗುರುನಾಥ ಗಡ್ಡೆ ಸೇರಿದಂತೆವಹಲವರು ಇದ್ದರು. ಪ್ರವಚನ ಸೇವಾ ಸಮಿತಿಯ ಅಧ್ಯಕ್ಷ ಜಗನ್ನಾಥ ಪತಂಗೆ ಸ್ವಾಗತಿಸಿದರು. ಅಂಬರೀಷ್ ಭಿಮಾಣಿ ನಿರೂಪಿಸಿದರು. ಚಂದ್ರಕಾಂತ ಅಕ್ಕಣ್ಣ ವಂದಿಸಿದರು. ರಾಜಕುಮಾರ ಹೂಗಾರ ಅವರಿಂದ ವಚನ ಸಂಗೀತ ಜರುಗಿತು.





