ಭಾಲ್ಕಿ ತಾಲ್ಲೂಕಿನ ಬೊಳೇಗಾಂವ ಗ್ರಾಮದಲ್ಲಿ ಈಚೆಗೆ ನಡೆದ ಧಡ್ಡೇಶ್ವರರ ಜಾತ್ರಾ ಮಹೋತ್ಸವದಲ್ಲಿ ಗೋರ್ಟಾ ಮಠದ ರಾಜಶೇಖರ ಶಿವಾಚಾರ್ಯರು ಇಷ್ಟಲಿಂಗಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ ಎಂಬ ಹೇಳಿಕೆ ನೀಡಿದ್ದು, ಅದು ಸತ್ಯಕ್ಕೆ ದೂರವಾದದ್ದು ಎಂದು ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
’12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ದೇವಾಲಯ ಸಂಸ್ಕೃತಿಯನ್ನು ಬಹಿಷ್ಕರಿಸಿ, ವಿನೂತನವಾಗಿರತಕ್ಕಂತಹ ಇಷ್ಟಲಿಂಗವನ್ನು ಎಲ್ಲರ ಕರಸ್ಥಲಕ್ಕೆ ನೀಡಿದರು. ಅದಕ್ಕಾಗಿ ಬಸವಣ್ಣನವರನ್ನು ಇಷ್ಟಲಿಂಗದ ಜನಕ ಎಂದು ಕರೆಯುತ್ತಾರೆ’ ಎಂದು ತಿಳಿಸಿದರು.
ʼಭಾರತೀಯ ಸಂಸ್ಕೃತಿಯಲ್ಲಿ ಶಿವಲಿಂಗ ಆರಾಧನೆ ಪುರಾತನವಾದದ್ದು. ಪೌರಾಣಿಕ ಶಿವನ ಪ್ರತೀಕವಾಗಿ ಶಿವಾಲಯಗಳಲ್ಲಿ ಸ್ಥಾವರ ಲಿಂಗದ ಸ್ಥಾಪನೆ ಮಾಡಲಾಗುತ್ತದೆ. ಭಾರತ ದೇಶದಲ್ಲಿ ಪ್ರಾಚೀನ ಶಿವಾಲಯಗಳಿವೆ. ಅವೆಲ್ಲ ಶಿವಾಲಯಗಳಲ್ಲಿ ಸ್ಥಾವರಲಿಂಗ ಸ್ಥಾಪಿಸಲಾಗಿದೆ. ಸ್ಥಾವರ ಲಿಂಗ ಪೂಜೆ ಮಾಡುವ ಪರಂಪರೆ ನಡೆದು ಬಂದಿದೆ. ಪ್ರವಾಸದಲ್ಲಿ ಪೂಜೆಗಾಗಿ ಸ್ಥಾವರಲಿಂಗದ ಸಣ್ಣ ರೂಪವನ್ನು ಜೊತೆಗೆ ಇಟ್ಟುಕೊಂಡು ಪೂಜಿಸುವ ಪರಂಪರೆ ಇದೆʼ ಎಂದು ಹೇಳಿದರು.
ಶಿವಾಲಯಗಳಲ್ಲಿ ಶೂದ್ರರಿಗೆ, ಅಸ್ಪೃಶ್ಯರಿಗೆ, ಮಹಿಳೆಯರಿಗೆ ಅವಕಾಶ ಇರಲಿಲ್ಲ. ಅದಕ್ಕಾಗಿ 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಇಷ್ಟಲಿಂಗವನ್ನು ಎಲ್ಲರ ಕರಸ್ಥಲಕ್ಕೆ ನೀಡಿದರು. ಬಸವಯುಗದ ಹಾಗೂ ಬಸವೋತ್ತರ ಯುಗದ ಅನೇಕ ಶರಣರ ನೂರಾರು ವಚನಗಳಲ್ಲಿ ಇದಕ್ಕೆ ಆಧಾರವಿದೆ. ಷಟಸ್ಥಲ ಜ್ಞಾನಿ ಚನ್ನಬಸವಣ್ಣನವರು ತಮ್ಮ ಒಂದು ವಚನದಲ್ಲಿ ʼಇಷ್ಟಲಿಂಗ ಬಸವಣ್ಣನವರಿಂದಲೇ ನಿರ್ಮಾಣವಾದದ್ದುʼ ಎಂದು ಸ್ಪಷ್ಟಪಡಿಸಿದ್ದಾರೆ.
“ʼಆದಿ ಬಸವಣ್ಣ, ಅನಾದಿ ಲಿಂಗವೆಂದೆಂಬರು ಹುಸಿ ಹುಸಿ, ಈ ನುಡಿಯ ಕೇಳಲಾಗದು, ಆದಿ ಲಿಂಗ, ಅನಾದಿ ಬಸವಣ್ಣನು. ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು, ಜಂಗಮವು ಬಸವಣ್ಣ ಉದರದಲ್ಲಿ ಹುಟ್ಟಿತ್ತು, ಪ್ರಸಾದವು
ಬಸವಣ್ಣನನುಕರಿಸಲಾಯಿತ್ತು. ಇಂತೀ ತ್ರಿವಿಧಕ್ಕೆ ಬಸವಣ್ಣನೆ ಕಾರಣನೆಂದರಿದೆನಯ್ಯಾ ಕೂಡಲಚೆನ್ನಸಂಗಮದೇವಾ” ಇಂತಹ ನೂರಾರು ವಚನಗಳ ಆಧಾರ ನೀಡಬಹುದು ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ʼಕನಕ ಯುವ ಪುರಸ್ಕಾರʼಕ್ಕೆ ರವೀಂದ್ರ ಲಂಜವಾಡಕರ್ ಆಯ್ಕೆ
ʼ12ನೇ ಶತಮಾನದಿಂದ ಇತ್ತೀಚಿನವರೆಗೆ ವಚನ ಸಾಹಿತ್ಯದ ಅಧ್ಯಯನ ನಡೆಸಿದ ಸಂಶೋಧಕರು ಬಸವಣ್ಣನವರಿಂದಲೇ ಇಷ್ಟಲಿಂಗ ಆವಿಷ್ಕಾರ ಆಯಿತ್ತು ಎಂದು ಒಮ್ಮತದಿಂದ ಒಪ್ಪಿಕೊಳ್ಳುತ್ತಾರೆ. ಈ ಸತ್ಯವನ್ನು ಅರಿಯದ ರಾಜಶೇಖರ ಶಿವಾಚಾರ್ಯರು ಹೇಳಿರುವ ನುಡಿಗಳು ಬಸವತತ್ವಕ್ಕೆ ಅಪಚಾರ ಬಗೆಯುತ್ತವೆ. ಅದಕ್ಕಾಗಿ ಅವರು ಇನ್ನು ಮುಂದೆಯಾದರೂ ಈ ರೀತಿಯ ಹೇಳಿಕೆ ನೀಡಿ ಬಸವಭಕ್ತರ ಭಾವನೆಗೆ ಧಕ್ಕೆ ತರಬಾರದುʼ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





