ಮೇಲಾಧಿಕಾರಿಗಳ ಆದೇಶ ಉಲ್ಲಂಘನೆ ಮತ್ತು ಕರ್ತವ್ಯದಲ್ಲಿ ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿತನ ತೋರಿದ ಆರೋಪದಡಿ ಹುಮನಾಬಾದ್ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಠಲ್ ಸೇಡಂಕರ್ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತ್ ಸಿಇಒ ಡಾ.ಗಿರೀಶ ಬದೋಲೆ ಅವರು ಆದೇಶ ಹೊರಡಿಸಿದ್ದಾರೆ.
ʼಹುಮನಾಬಾದ್ ಬಿಸಿಎಂ ಇಲಾಖೆ ಅಧಿಕಾರಿ ವಿಠಲ್ ಸೇಡಂಕರ್ ಅವರ ಕರ್ತವ್ಯ ಲೋಪ, ನಿರ್ಲಕ್ಷ್ಯ ಹಾಗೂ ಹಣಕಾಸಿನ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕುʼ ಎಂದು ದ್ರಾವಿಡ ಕ್ರಾಂತಿ ಯುವ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಗೌತಮ್ ಪ್ರಸಾದ್ ಅವರು ದೂರು ಸಲ್ಲಿಸಿದ್ದರು.
ದೂರಿನ ಮೆರೆಗೆ ಹುಮನಾಬಾದ್ ತಾ.ಪಂ.ಇಒ ಮತ್ತು ಬಿಸಿಎಂ ಜಿಲ್ಲಾ ಅಧಿಕಾರಿಗಳು ಜಂಟಿಯಾಗಿ ಪರಿಶೀಲಿಸಿದ ವೇಳೆ ಸದರಿ ಅಧಿಕಾರಿಯ ಕರ್ತವ್ಯ ನಿರ್ಲಕ್ಷ್ಯ ಆಗಿರುವುದು ಹಾಗೂ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಪರಿಶೀಲನಾ ವರದಿ ಸಲ್ಲಿಸಿದ್ದರು.
ಇದನ್ನೂ ಓದಿ : ಬೀದರ್ | ಗ್ರಾ.ಪಂ. ಅಧ್ಯಕ್ಷರ ಅಧಿಕಾರ ಚಲಾವಣೆ ಆರೋಪ : ಪಿಡಿಒ ಅಮಾನತು
ಪರಿಶೀಲನಾ ವರದಿ ಆಧರಿಸಿ ಹುಮನಾಬಾದ್ ತಾಲೂಕು ಬಿಸಿಎಂ ಇಲಾಖೆ ಅಧಿಕಾರಿ ವಿಠಲ್ ಸೇಡಂಕರ್ ಅವರನ್ನು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಜಿ.ಪಂ. ಸಿಇಒ ಅವರು ಅಮಾನತುಗೊಳಿಸಿ ಆದೇಶಿಸಿದ್ದಾರೆ.





