ಸರ್ಕಾರಿ ಕೆಲಸ ಮಾಡಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟ ಬಸವಕಲ್ಯಾಣ ತಹಸೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಭೂಮಾಪಕ ಅಬ್ದುಲ್ ರಹೀಮ ಬಡೇಸಾಬ್ ವಿರುದ್ಧದ ಆರೋಪ ಸಾಬೀತಾಗಿದೆ. ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿ ಬೀದರ್ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ. ಎಮ್ ಆನಂದಶೆಟ್ಟಿ ಆದೇಶ ಹೊರಡಿಸಿದ್ದಾರೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ದಿಲೀಪ ಕಿಶನರಾವ ಎಂಬುವರು ತಮ್ಮ ಕೃಷಿ ಜಮೀನನ್ನು ಒಟ್ಟುಗೂಡಿಸಲು ಬಸವಕಲ್ಯಾಣ ತಹಸೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಜಮೀನನ್ನು ಸರ್ವೇ ಮಾಡಲು ದ್ವಿತೀಯ ದರ್ಜೆ ಭೂಮಾಪಕ ಅಬ್ದುಲ್ ರಹೀಮ ಬಡೇಸಾಬ್ ಅವರು 1,500 ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಲಾಗಿತ್ತು.
ಲಂಚ ಕೇಳಿರುವ ಬಗ್ಗೆ ಬೀದರ್‌ನ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದಿಲೀಪ ಅವರು ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ಆರೋಪಿ ವಿರುದ್ಧ ಲಂಚ ನಿಷೇಧ ಕಾಯ್ದೆಯ ಕಲಂ 7, 13(1)(ಡಿ), 13(2) ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ಇಪ್ಪತ್ತೈದು ಸಾವಿರ ರೂಪಾಯಿ ದಂಡ ವಿಧಿಸಿದೆ. ಒಂದು ವೇಳೆ, ದಂಡ ಭರಿಸಲು ತಪ್ಪಿದ್ದಲ್ಲಿ ಆರು ತಿಂಗಳು ಜೈಲು ಶಿಕ್ಷೆ ವಿಸ್ತರಿಸುವಂತೆ ಆದೇಶಿಸಿದೆ.




