ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಬ್ರಿಮ್ಸ್) ನಡೆದಿರುವ ಅಕ್ರಮ, ಅವ್ಯವಸ್ಥೆಯನ್ನು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಿ ಆಸ್ಪತ್ರೆಗೆ ಹೊಸ ಕಾಯಕಲ್ಪ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಈ ಸಂಬಂಧ ʼಬ್ರಿಮ್ಸ್‌ನ ಅಕ್ರಮಗಳ ತನಿಖೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರಿಗೆ ಪತ್ರ ಬರೆದಿರುವ ಅವರು, ʼಬೀದರ್‌ನ ಬ್ರಿಮ್ಸ್ ಆಸ್ಪತ್ರೆ ಇತ್ತೀಚೆಗೆ ಒಂದಿಲ್ಲೊಂದು ವಿವಾದಕ್ಕೆ ಸಿಲುಕುತ್ತಿದ್ದು, ಆಸ್ಪತ್ರೆಯ ಅವ್ಯವಸ್ಥೆ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಇದು ಸರ್ಕಾರವನ್ನು ಮತ್ತು ಜಿಲ್ಲಾ ಉಸ್ತುವಾರಿ ಸಚಿವನಾದ ನನ್ನನ್ನು ಮುಜುಗರಕ್ಕೀಡು ಮಾಡುತ್ತಿದೆʼ ಎಂದು ತಿಳಿಸಿದ್ದಾರೆ.
ʼಮಳೆ ಬಂದಾಗ ಆಸ್ಪತ್ರೆಯ ನೆಲದಿಂದ ನೀರಿನ ಬುಗ್ಗೆ ಉಕ್ಕುತ್ತದೆ. ಈ ಬಗ್ಗೆ ನಾನು ಲಿಖಿತ ಸೂಚನೆ ನೀಡಿದ್ದರೂ ದುರಸ್ತಿ ಆಗಿಲ್ಲ. ಜೊತೆಗೆ ಇಲ್ಲಿ ನಿರ್ಲಕ್ಷ್ಯವೂ ಇದೆ. ಕಳೆದ ಕೆಲವು ತಿಂಗಳ ಹಿಂದೆ ನೇಮಕಾತಿ ಪ್ರಕ್ರಿಯೆಯ ಯಾವುದೇ ನಿಯಮ ಪಾಲಿಸದೆ, ಸರ್ಕಾರದ ಪರವಾನಗಿ ಪಡೆಯದೆ, ಸಂದರ್ಶನವನ್ನೂ ನಡೆಸದೆ ನೇಮಕಾತಿ ಮಾಡಲಾಗಿದ್ದ 40ಕ್ಕೂ ಹೆಚ್ಚು ತಜ್ಞ ವೈದ್ಯರಿಗೆ ವೇತನ ನೀಡದೆ ವಜಾ ಮಾಡಲಾಗಿದೆ. ಇದರಿಂದಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಒಳ ರೋಗಿಗಳಿಗೆ ಮತ್ತು ಹೊರರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲದಂತಾಗಿದೆʼ ಎಂದು ಸಚಿವರು ನಡವಳಿಯಲ್ಲಿ ಉಲ್ಲೇಖಿಸಿದ್ದಾರೆ.
ʼಬ್ರಿಮ್ಸ್ ಆಸ್ಪತ್ರೆಯಲ್ಲಿ ಔಷಧ ಖರೀದಿಯಲೂ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸರ್ಕಾರಿ ಆಸ್ಪತ್ರೆಗಳು ಬಡ ರೋಗಿಗಳ ಪಾಲಿಗೆ ಆಶಾಕಿರಣವಾಗಬೇಕು. ಆದರೆ, ಬ್ರಿಮ್ಸ್ ನಿರ್ದೇಶಕ ಶಿವಕುಮಾರ್ ಶೆಟಕಾರ ಮತ್ತು ಇತರರ ಮೇಲೆ ಗುರುತರ ಆರೋಪಗಳಿದ್ದು, ಇವರ ಕರ್ತವ್ಯಲೋಪ, ನಿರ್ಲಕ್ಷ್ಯದಿಂದಾಗಿ ರೋಗಿಗಳು ನರಳುವಂತಾಗಿದೆʼ ಎಂದಿದ್ದಾರೆ.
ಇದನ್ನೂ ಓದಿ : ಬೀದರ್ | ಇಂದಿನಿಂದ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಜಮಾ : ಸಚಿವ ಈಶ್ವರ ಖಂಡ್ರೆ
ʼಬ್ರಿಮ್ಸ್ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಂಡು, ಆದಷ್ಟು ಶೀಘ್ರದಲ್ಲಿ ಆಸ್ಪತ್ರೆಗೆ ಸಂಪೂರ್ಣ ಕಾಯಕಲ್ಪ ನೀಡಿ, ಸಮಸ್ಯೆಗಳನ್ನು ಪರಿಹರಿಸಿ ಶ್ರೀಸಾಮಾನ್ಯರಿಗೆ ಉತ್ತಮ ಮತ್ತು ಗುಣಮಟ್ಟದ ಆರೋಗ್ಯ ಸೇವೆ ದೊರಕುವಂತೆ ಮಾಡಬೇಕುʼ ಎಂದು ಸಚಿವ ಈಶ್ವರ ಖಂಡ್ರೆ ಅವರು ನಡವಳಿ ಪತ್ರದ ಮೂಲಕ ಕೋರಿದ್ದಾರೆ.





