ʼಈ ಪ್ರೌಢ ಶಾಲಾ ಕಟ್ಟಡ ಎರಡುವರೆ ದಶಕಗಳಷ್ಟು ಹಳೆಯದ್ದು. ಮಳೆ ಬಂದರೆ ಛಾವಣಿಯಿಂದ ನೀರು ಕೆಳಗಿಳಿಯುತ್ತದೆ. ಕಿಟಕಿ, ಬಾಗಿಲು ಕಿತ್ತು ಹೋಗಿವೆ. ಗೋಡೆ ಬಿರುಕು ಬಿಟ್ಟು, ಅಲ್ಲಲ್ಲಿ ಛತ್ ಬೀಳುತ್ತಿದೆ. ಮೇಲ್ಛಾವಣಿ ಪದರು ಉದುರಿ, ಕಬ್ಬಿಣದ ಸರಳುಗಳ ತೇಲಿವೆ, ಮಳೆ ನೀರು ತರಗತಿಯೊಳಕ್ಕೆ ನೀರು ಸಿಡಿಯುತ್ತದೆ. ಜೋರು ಮಳೆ ಬಂದ್ರೆ ಶಾಲೆಗೆ ರಜೆʼ!
ಆರು ದಶಕದ ಹಿಂದೆ ಸ್ಥಾಪನೆಯಾದ ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ(ಕೆ) ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ದುಸ್ಥಿತಿ ಕುರಿತು ಸ್ಥಳೀಯರಿಂದ ಕೇಳಿ ಬಂದ ಹತಾಶೆಯ ನುಡಿಗಳಿವು.
ಕಳೆದ 25 ವರ್ಷಗಳ ಹಿಂದೆ ನಿರ್ಮಿಸಿದ ಶಾಲೆಯ ಆರು ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿವೆ. ದುರಸ್ತಿಗಾಗಿ ಶಾಲೆಯ ಮುಖ್ಯಶಿಕ್ಷಕರು ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಮನವಿ ಸಲ್ಲಿಸಿದರೂ, ಸರ್ಕಾರದಿಂದ ಅನುದಾನ ಬಿಡುಗಡೆಯ ಸಮಸ್ಯೆ ಸವಾಲಾಗಿ ಪರಿಣಿಸಿದ್ದು, ಇದರಿಂದ ವಿದ್ಯಾರ್ಥಿಗಳು ನಿತ್ಯ ಜೀವ ಭಯದಲ್ಲೇ ಪಾಠ ಕೇಳುವಂತಾಗಿದೆ.
ಈ ಶಾಲೆಗೆ ಹಾಲಹಳ್ಳಿ(ಕೆ), ನೀಲಮನಳ್ಳಿ ತಾಂಡಾ, ರುದನೂರ ತಾಂಡಾ, ಬ್ಯಾಲಹಳ್ಳಿ(ಕೆ) ಸೇರಿದಂತೆ ವಿವಿಧ ಗ್ರಾಮಗಳ ಮಕ್ಕಳು ವ್ಯಾಸಂಗಕ್ಕೆ ಬರುತ್ತಾರೆ. 8 ರಿಂದ 10ನೇ ತರಗತಿವರೆಗೆ ಇದ್ದು, ಸದ್ಯ 119 ವಿದ್ಯಾರ್ಥಿಗಳ ಓದುತ್ತಿದ್ದಾರೆ. 9 ಜನ ಕಾಯಂ, ಓರ್ವ ಅತಿಥಿ ಸೇರಿ ಒಟ್ಟು 10 ಜನ ಶಿಕ್ಷಕರಿದ್ದಾರೆ. ಆದರೆ, ಸೋರುವ ಕೊಠಡಿಗಳಲ್ಲೇ ಸುರಕ್ಷಿತವಾಗಿ ಮಕ್ಕಳನ್ನು ಕೂರಿಸಿ ಪಾಠ ಮಾಡುವುದು ಇಲ್ಲಿನ ಶಿಕ್ಷಕರಿಗೆ ದೊಡ್ಡ ಸವಾಲಾಗಿದೆ.

ಇಲ್ಲಿ ಒಟ್ಟು 7 ಶಾಲಾ ಕೊಠಡಿಗಳಿವೆ. ಈ ಪೈಕಿ 2000ನೇ ಇಸವಿಯಲ್ಲಿ ನಿರ್ಮಿಸಿದ ಆರು ಕೋಣೆಗಳು ಪೂರ್ಣ ಹಳೆಯದಾಗಿದ್ದು, ಮಳೆ ನೀರಿಗೆ ತೋಯ್ದ ಗೋಡೆಗಳು ಬಣ್ಣ ಕಳೆದುಕೊಂಡು ಬಿರುಕು ಬಿಟ್ಟಿವೆ. ಒಂದು ಕೋಣೆ ಮಾತ್ರ ಬಳಕೆಗೆ ಯೋಗ್ಯವಾಗಿದ್ದರೂ ಅದರ ಕಿಟಕಿಗಳು ಮುರಿದು ಹೋಗಿವೆ. ಇನ್ನು ಕಂಪ್ಯೂಟರ್ ಲ್ಯಾಬ್, ಸ್ಮಾರ್ಟ್ ಕ್ಲಾಸ್, ಕಾರ್ಯಾಲಯ ಕೊಠಡಿಗಳು ಮೇಲ್ಛಾವಣಿ ಸೋರುತ್ತಿದೆ. ಇದರಿಂದ ಶಾಲೆಯ ಅಮೂಲ್ಯ ದಾಖಲೆಗಳು, ಕಂಪ್ಯೂಟರ್ ಸೇರಿದಂತೆ ಇತರೆ ಸಾಮಾಗ್ರಿಗಳು ಹಾಳಾಗುವ ಆತಂಕ ಕಾಡುತ್ತಿದ್ದು, ಕೋಣೆಯಲ್ಲಿನ ಕಂಪ್ಯೂಟರ್, ಶಾಲಾ ದಾಖಲೆಗಳ ಮೇಲೆ ಪ್ಲಾಸ್ಟಿಕ್ ಕವರ್ ಮುಚ್ಚಬೇಕಾದ ದುಸ್ಥಿತಿ ಎದುರಾಗಿದೆ.
ಶಾಲಾ ಕಟ್ಟಡ ದುರಸ್ತಿಗೆ ಪತ್ರ :
ಶಾಲಾ ಕಟ್ಟಡ ನಿರ್ಮಿಸಿ ಎರಡುವರೆ ದಶಕ ಕಳೆದಿದೆ. ಶಾಲೆಯ ಎಲ್ಲ ಕೊಠಡಿಗಳು ಶಿಥಿಲವಾಗಿ ಸೋರುತ್ತಿವೆ. ಬೀಳುವ ಕೋಣೆಗಳಲ್ಲಿ ಪಾಠ ಪ್ರವಚನಕ್ಕೆ ತುಂಬಾ ತೊಂದರೆಯಾಗುತ್ತಿದೆ. ಶಿಕ್ಷಕರು, ಮಕ್ಕಳು ಜೀವ ಭಯದಲ್ಲೇ ದಿನದೂಡುತ್ತಿದ್ದಾರೆ. ಕೂಡಲೇ ಶಾಲಾ ಕಟ್ಟಡ ದುರಸ್ತಿಗೊಳಿಸಿ, ಹೆಚ್ಚುವರಿ ಕೋಣೆ ನಿರ್ಮಿಸಬೇಕೆಂದು ಶಾಲಾ ಶಿಕ್ಷಕರು, ಮಕ್ಕಳು ಕಳೆದ ವರ್ಷ ಜುಲೈ 22 ರಂದು ಇಲಾಖೆ ಮೇಲಾಧಿಕಾರಿಗಳಿಗೆ ಮನವಿ ಪತ್ರ ಬರೆದು, ಅದರ ಪ್ರತಿಗಳನ್ನು ಕ್ಷೇತ್ರದ ಶಾಸಕರೂ ಆದ, ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಸಲ್ಲಿಸಿದ್ದಾರೆ. ಆದರೂ ಇಲ್ಲಿಯವರೆಗೆ ಯಾವುದೇ ಸ್ಪಂದನೆ ಸಿಗಲಿಲ್ಲ.

ʼಶಾಲೆಯ ಆರು ಕೋಣೆಗಳು ಸಂಪೂರ್ಣ ಶಿಥಿಲವಾಗಿದ್ದು ದುರಸ್ತಿ ಮಾಡುವಂತೆ ಮೇಲಾಧಿಕಾರಿಗಳಿಗೆ ಕಳೆದ ವರ್ಷ ಜುಲೈ ತಿಂಗಳಲ್ಲಿ ಮನವಿ ಸಲ್ಲಿಸಿದ್ದೇವೆ. ಇಲ್ಲಿಯವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಸೋರುವ ಕೋಣೆಗಳಲ್ಲಿಯೇ ಮಕ್ಕಳನ್ನು ಕೂಡಿಸಿ ಬೋಧಿಸುತ್ತಿದ್ದೇವೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕೆಲವೊಮ್ಮೆ ಶಾಲಾ ಆವರಣದಲ್ಲಿ ಕೂರಿಸಿ ಪಾಠ ಮಾಡುತ್ತೇವೆʼ ಎಂದು ಮುಖ್ಯ ಶಿಕ್ಷಕಿ (ಪ್ರಭಾರ) ವಿಜಯಲಕ್ಷ್ಮೀ ʼಈದಿನ.ಕಾಮ್ʼಗೆ ಹೇಳಿದರು.
ಈ ಬಗ್ಗೆ ಎಸ್‌ಡಿಎಂಸಿ ಅಧ್ಯಕ್ಷ ನಿರಂಜನ ʼಈದಿನʼ ಜೊತೆ ಮಾತನಾಡಿ, ʼಶಾಲಾ ಕೊಠಡಿ ಶಿಥಿಲಗೊಂಡಿರುವ ಬಗ್ಗೆ ಹಲವು ಬಾರಿ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಗೆ ಭೇಟಿಯಾಗಿ ತಿಳಿಸಲಾಗಿದೆ. ಹೊಸ ಕೋಣೆ ಮಂಜೂರು ಮಾಡಿರುವ ಬಗ್ಗೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಇಲ್ಲಿ ಮಕ್ಕಳು ಜೀವ ಕೈಯಲ್ಲಿ ಹಿಡಿದು ಪಾಠ ಕೇಳುತ್ತಿದ್ದಾರೆ. ಮಳೆಯಾದ ವೇಳೆ ಮಕ್ಕಳ ಸುರಕ್ಷತೆಗಾಗಿ ಶಿಕ್ಷಕರು ಪರದಾಡಬೇಕಿದೆ. ಮಕ್ಕಳ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಶೀಘ್ರ ಹೊಸ ಕೋಣೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕುʼ ಎಂದು ಒತ್ತಾಯಿಸಿದರು.
ಮಳೆಯಾದರೆ ಶಾಲೆಗೆ ರಜೆ :
ಈ ಶಾಲೆಯ ಎಲ್ಲ ಕೋಣೆಗಳು ಸಂಪೂರ್ಣ ಶಿಥಿಲಗೊಂಡು ಸೋರುತ್ತವೆ. ಜೋರು ಮಳೆಯಾದರೆ ಛತ್ ಬೀಳುವ ಆತಂಕವಿದೆ. ಹೀಗಾಗಿ ಮಕ್ಕಳ ಹಿತದೃಷ್ಟಿಯಿಂದ 2024ರ ಜುಲೈ 25ರಂದು ಧಾರಾಕಾರ ಮಳೆಯಾದಾಗ ಮೇಲಾಧಿಕಾರಿಗಳ ಅನುಮತಿ ಪಡೆದು ಶಾಲೆಗೆ ರಜೆ ನೀಡಲಾಗಿತ್ತು. ಜೋರು ಮಳೆಯಾದರೆ ಸಾಕು ಶಾಲೆಗೆ ರಜೆ ಕೊಡಬೇಕಾದ ಪ್ರಸಂಗ ಬರುತ್ತದೆ. ಮಕ್ಕಳನ್ನು ಸುರಕ್ಷತೆವಾಗಿ ಪಾಠ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳು ಮಕ್ಕಳ ಕಲಿಕೆಗೆ ಅನುಕೂಲ ಮಾಡಿಕೊಡಬೇಕುʼ ಎಂದು ಶಿಕ್ಷಕರು ಮನವಿ ಮಾಡಿದ್ದಾರೆ.

ಇದೇ ಶಾಲಾ ಆವರಣದಲ್ಲಿ ಉರ್ದು ಮಾಧ್ಯಮ ಶಾಲೆ, ಸರ್ಕಾರಿ ಪಿಯು ಕಾಲೇಜು ಇದೆ. ಈ ಪ್ರೌಢ ಶಾಲಾ ಕಟ್ಟಡ ತಗ್ಗು ಪ್ರದೇಶದಲ್ಲಿರುವ ಕಾರಣ ಮಳೆ ನೀರು ಶಾಲಾ ಆವರಣಕ್ಕೆ ನುಗ್ಗುತ್ತದೆ. ಇದರಿಂದ ಸ್ವಲ್ಪ ಮಳೆಯಾದರೂ ಆವರಣ ಕೆಸರು ಗದ್ದೆಯಾಗಿ ನೀರು ಸಂಗ್ರಹವಾಗುತ್ತದೆ. ಇದರಿಂದ ಮಕ್ಕಳ ಕಲಿಕೆಗೆ ತೊಡಕಾಗುತ್ತಿದೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯ.
ಭಾಲ್ಕಿ ತಾಲ್ಲೂಕಿನಲ್ಲಿ ಒಟ್ಟು ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ 387 ಕೋಣೆಗಳು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿವೆ. ಇನ್ನು 561 ಕೋಣೆಗಳು ಸಣ್ಣಪುಟ್ಟ ದುರಸ್ತಿಗಾಗಿ ಕಾದಿವೆ ಎಂದು ಶಿಕ್ಷಣ ಇಲಾಖೆ ನೀಡಿದ ಮಾಹಿತಿ ಹೇಳುತ್ತಿದೆ.
ಇದನ್ನೂ ಓದಿ : ಅನುಭವ ಮಂಟಪ ಶೇ 63ರಷ್ಟು ಪೂರ್ಣ : 2026ರ ಮೇ ತಿಂಗಳಲ್ಲಿ ಉದ್ಘಾಟನೆ : ಸಚಿವ ಈಶ್ವರ ಖಂಡ್ರೆ
ʼಹಾಲಹಳ್ಳಿ(ಕೆ) ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಕೊಠಡಿಗಳು ಶಿಥಿಲಗೊಂಡಿರುವ ಬಗ್ಗೆ ಗಮನಕ್ಕಿದೆ. ಈಗಾಗಲೇ ಹೊಸ ಕಟ್ಟಡ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ಬಳಿಕ ನೂತನ ಕೋಣೆ ನಿರ್ಮಿಸಲಾಗುವುದು. ನಾನು ಶಾಲೆಗೆ ಭೇಟಿ ನೀಡಿ ಪರಿಶೀಲಿಸುತ್ತೇನೆʼ ಎಂದು ಭಾಲ್ಕಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜೆ.ಹಳ್ಳದ ʼಈದಿನʼ ಜೊತೆ ಮಾತನಾಡಿ ಪ್ರತಿಕ್ರಿಯಿಸಿದ್ದಾರೆ.
{ನಿಮ್ಮ ಊರು, ನಗರ ಸಮುದಾಯ ಸಂಬಂಧಿತ ಕುಂದು-ಕೊರತೆಗಳ ಸುದ್ದಿಗಳನ್ನು ʼಈದಿನ ಬೀದರ್ ಸಹಾಯವಾಣಿʼ (9035053805) ವಾಟ್ಸಪ್ ನಂಬರ್‌ಗೆ ಕಳುಹಿಸಿ}

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




