ಸಿನಿಮಾ ಹಾಗೂ ಮೊಬೈಲ್ ಹಾವಳಿಯಿಂದ ಪಾರಂಪರಿಕ ಕಲೆಗಳು ನಶಿಸುತ್ತಿವೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ. ಕೆ.ಆರ್.ದುರ್ಗಾದಾಸ ಅವರು ಕಳವಳ ವ್ಯಕ್ತಪಡಿಸಿದರು.
ಬೀದರ್ ನಗರದ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ, ಬಾಗಲಕೋಟೆ ಹಾಗೂ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಕಲ್ಯಾಣ ಕರ್ನಾಟಕ ಬಯಲಾಟಗಳು’ ಕುರಿತಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘1980ರಲ್ಲಿ ಬೀದರ್ ಜಿಲ್ಲೆಯ ವಿವಿಧೆಡೆ ದೊಡ್ಡಾಟ ತಂಡಗಳಿದ್ದವು. ಈಗ ಜಿಲ್ಲೆಯಲ್ಲಿ ಒಂದು ತಂಡಗಳು ಸಹ ಇಲ್ಲದಿರುವುದು ಬೇಸರದ ಸಂಗತಿ. ಬಯಲಾಟ ಬರೀ ರಂಜನೆಗಷ್ಟೇ ಸೀಮಿತ ಅಲ್ಲ, ಅದರಲ್ಲಿ ಲೌಕಿಕ ಬದುಕಿಗೆ ಅಗತ್ಯವಾದ ಮೌಲಿಕ ನೀತಿ ತತ್ವಗಳು ಅಡಗಿವೆ. ಇಂತಹ ಅಪರೂಪದ ಪಾರಂಪರಿಕ ಕಲೆ ಇಂದಿನ ಯುವ ಪೀಳಿಗೆಗೆ ಉಳಿಸುವ ಕೆಲಸ ಮಾಡುವುದು ತುಂಬಾ ಅಗತ್ಯವಾಗಿದೆ’ ಎಂದರು.

ಜಾನಪದ ವಿದ್ವಾಂಸ ಡಾ.ವೀರಣ್ಣ ದಂಡೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಅಳಿವಿನಂಚಿನಲ್ಲಿರುವ ಜಾನಪದ ಕಲೆ, ಸಂಸ್ಕೃತಿಯನ್ನು ಯುವ ಜನಾಂಗಕ್ಕೆ ತಲುಪಿಸುವ ಕೆಲಸ ಆಗಬೇಕಾಗಿದೆ. ಬಯಲಾಟದಲ್ಲಿ ಬೀದಿ ಬಯಲಾಟ ಎಂಬ ಪ್ರಕಾರವು ಬೀದರ್ ಜಿಲ್ಲೆಯ ಕೊಡುಗೆಯಾಗಿದೆ’ ಎಂದು ಸ್ಮರಿಸಿದರು.
‘ಆಧುನಿಕತೆಯ ಭರಾಟೆಯಲ್ಲಿ ನಮ್ಮತನ ಮರೆಯುತ್ತಿದ್ದೇವೆ. ಇಂದಿನ ಸಾಮಾಜಿಕ ಮಾಧ್ಯಮಗಳಿಂದ ಮುಂದೊಂದು ದಿನ ಬೇಸತ್ತು ಪುನಃ ಹಳೆಯ ಕಲೆ, ಸಂಸ್ಕೃತಿಗೆ ಮರಳುವ ಕಾಲ ದೂರವಿಲ್ಲʼ ಎಂದು ನುಡಿದರು.
ಸಂಸ್ಕೃತಿ ಚಿಂತಕರಾದ ಡಾ.ಮೀನಾಕ್ಷಿ ಬಾಳಿ ಅವರು ಮಾತನಾಡಿ, ‘ರಾಜ್ಯದ 15 ಜಿಲ್ಲೆಗಳಲ್ಲಿ ಬಯಲಾಟ ಕಲೆ ಜೀವಂತವಿದೆ. ಆದರೆ, ಉಳಿದ ಕಲೆಗೆ ದೊರೆತ ಆಧುನಿಕ ಸ್ಪರ್ಶ ಬಯಲಾಟ ಕಲೆಗೆ ದಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು
‘ನಮ್ಮ ಭಾಗದ ಕಲೆ, ಸಾಹಿತ್ಯ ಹೆಚ್ಚು ಪ್ರಚಾರಕ್ಕೆ ಬರಬೇಕಾದರೆ ಯುವ ಸಮೂಹ ಹೆಚ್ಚು ಅಭಿರುಚಿ ಬೆಳೆಸಿಕೊಳ್ಳಬೇಕು. ನಾಡಿನ ಜಾನಪದ ಕಲೆಗಳಿಗೆ ಅದರದೇ ಆದ ಇತಿಹಾಸ, ಸಂಸ್ಕೃತಿ ಇದೆ. ಪ್ರಾದೇಶಿಕ ಕಲಾ ಶ್ರೀಮಂತಿಕೆ ಅತ್ಯಂತ ಮೌಲ್ಯಯುತವಾಗಿದ್ದ, ಅವುಗಳಲ್ಲಿ ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದರು
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಗಂಗಾಬಿಕ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ʼಜಾತಿ,ಮಾತು ಭೇದಗಳಿಲ್ಲದೆ ಸಮಾಜದಲ್ಲಿ ಸಮಾನತೆ ಬೀಜ ಬಿತ್ತುವ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸುವುದು ಅಗತ್ಯವಾಗಿದೆ. ಕಲೆ ಸಾಹಿತ್ಯದಿಂದ ಮನುಷ್ಯನ ಒತ್ತಡದ ಬದುಕು ನಿವಾರಣೆ ಆಗಬಲ್ಲದುʼ ಎಂದರು.

ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ರಂಜನಾ ಪಾಟೀಲ್ ಮಾತನಾಡಿ, ʼವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನ ಜೊತೆಗೆ ಪಾರಂಪರಿಕ ಕಲೆಗಳ ಆಸಕ್ತಿ ಬೆಳೆಸಿಕೊಳ್ಳುವುದು ಅಗತ್ಯವಿದೆ. ನಮ್ಮ ಕಾಲೇಜಿನಲ್ಲಿ ಬಯಲಾಟ ಪ್ರದರ್ಶನ ಆಯೋಜಿಸಿರುವುದು ಹರ್ಷ ತಂದಿದೆ. ಮುಂದಿನ ದಿನಗಳಲ್ಲಿ ನಮ್ಮ ಕಾಲೇಜಿನ ಮಕ್ಕಳಿಗೂ ಬಯಲಾಟ ಕಲಿಕೆಯಲ್ಲಿ ತೊಡಿಸಿಕೊಳ್ಳಲು ತಿಳಿಸಲಾಗುವುದುʼ ಎಂದು ಹೇಳಿದರು.
ಮಧ್ಯಾಹ್ನ ನಡೆದ ಗೋಷ್ಠಿಯಲ್ಲಿ ʼದೊಡ್ಡಾಟಗಳಲ್ಲಿ ಗ್ರಾಮೀಣ ಸಂಸ್ಕೃತಿʼ ಕುರಿತು ಪ್ರೊ.ಡಾ.ಸಾರಿಕಾದೇವಿ ಕಾಳಗಿ ಹಾಗೂ ʼಬೀದರ್ ಜಿಲ್ಲೆಯ ಸಾಂಸ್ಕೃತಿಕ ಪರಿಸರʼ ವಿಷಯ ಕುರಿತು ಪ್ರಾಧ್ಯಾಪಕರಾದ ಡಾ.ಜಯದೇವಿ ಗಾಯಕವಾಡ ಅವರು ಮಾತನಾಡಿದರು.
ಬಳಿಕ ವಿಜಯಪುರ ಜಿಲ್ಲೆಯ ಆಲಮಟ್ಟಿ ತಾಲೂಕಿನ ದೇವಣಗಾಂವ ಗ್ರಾಮದ ಶ್ರೀ ಮದ್ಗುರು ಲಿಂಗೇಶ್ವರ ಪ್ರಸಾಧಿಕ ಬೈಲಾಟ ಮಂಡಳಿಯಿಂದ ‘ಭೀಮವಿಲಾಸ ಅರ್ಥಾತ್ ಕೀಚಕನ ವಧ’ ಎಂಬ ದೊಡ್ಡಾಟ ಪ್ರದರ್ಶನ ಸಭಿಕರ ಮನಸೂರೆಗೊಳಿಸಿತು.
ಇದನ್ನೂ ಓದಿ : ಬೀದರ್ | ಸಕಲರ ಲೇಸು ಬಯಸಿದ ಬಸವಾದಿ ಶರಣರು : ಬಸವಲಿಂಗ ಪಟ್ಟದ್ದೇವರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಸೇರಿದಂತೆ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ಮಹಾದೇವಿ ನಿರೂಪಿಸಿದರು. ಉಪನ್ಯಾಸಕಿ ಅಂಬಿಕಾ ವಂದಿಸಿದರು.





