ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ಮುಖಂಡರೂ ಆದ ಸಾಮಾಜಿಕ ಹೋರಾಟಗಾರ ಶ್ರೀಕಾಂತ ಸ್ವಾಮಿ ಅವರ ವಿರುದ್ಧ ಬ್ರಾಹ್ಮಣ ಸಮುದಾಯದ ಮುಖಂಡರು ಮಾಡಿರುವ ಸುಳ್ಳು ಮಾನಹಾನಿ ಆರೋಪಗಳು ಖಂಡನಾರ್ಹ ಎಂದು ವಿವಿಧ ಸಂಘಟನೆಗಳ ಮುಖಂಡರು, ಸಾಮಾಜಿಕ ಹೋರಾಟಗಾರರು ತಿಳಿಸಿದ್ದಾರೆ.
ಈ ಸಂಬಂಧ ಗುರುವಾರ ಜಂಟಿ ಪ್ರಕಟಣೆ ಹೊರಡಿಸಿ ತಿಳಿಸಿದ ಸಾಮಾಜಿಕ ಹೋರಾಟಗಾರರಾದ ಬಾಬುರಾವ್ ಹೊನ್ನಾ, ಮಚ್ಚೇಂದ್ರ ವಾಘಮಾರೆ, ವಿಶ್ವಗುರು ಬಸವಧರ್ಮ ಕೇಂದ್ರದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ, ನಿವೃತ್ತ ಪ್ರಾಚಾರ್ಯರಾದ ವಿಠ್ಠಲದಾಸ್ ಪ್ಯಾಗೆ, ನಿಜಾಮುದ್ದೀನ್ ಸ್ವಾಮಿ ವಿರುದ್ಧದ ಆರೋಪಕ್ಕೆ ಖಂಡಿಸಿದ್ದಾರೆ.
ʼಕಳೆದ ಅಕ್ಟೋಬರ್ 17ರಂದು ಬೀದರ್‌ನ ಅಂಬೇಡ್ಕರ್ ವೃತ್ತದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯ ವೇಳೆ ಶ್ರೀಕಾಂತ ಸ್ವಾಮಿ ಅವರು ಆರ್‌ಎಸ್‌ಎಸ್ ವಿರುದ್ಧ ತಮ್ಮ ಅನುಭವದ ಆಧಾರದ ಮೇಲೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಕೆಲವು ಬ್ರಾಹ್ಮಣ ಮುಖಂಡರು ಅದನ್ನು ವಿಕೃತಗೊಳಿಸಿ ಅವರ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದ್ದಾರೆʼ ಎಂದು ಆರೋಪಿಸಿದ್ದಾರೆ.
ʼಶ್ರೀಕಾಂತ ಸ್ವಾಮಿ ಅವರು ಲಿಂಗಾಯತ ಸಮುದಾಯದ ಗೌರವಯುತ ನಾಯಕರಾಗಿದ್ದಾರೆ. ಧರ್ಮ, ಜಾತಿ ಭೇದವಿಲ್ಲದೆ ಅಭಿವೃದ್ಧಿ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದಾರೆ. ಕೋವಿಡ್ ಸಮಯದಲ್ಲಿ ಜೀವದ ಹಂಗಿಲ್ಲದೆ ಜನಸೇವೆ ಮಾಡಿದ್ದಾರೆ. ಬ್ರಾಹ್ಮಣ ಸಮುದಾಯದ ಕಾರ್ಯಕ್ರಮಗಳಲ್ಲಿಯೂ ಅವರು ಭಾಗವಹಿಸಿ ಬೆಂಬಲ ನೀಡಿರುವುದು ಎಲ್ಲರಿಗೂ ತಿಳಿದ ಸಂಗತಿʼ ಎಂದು ತಿಳಿಸಿದ್ದಾರೆ.
ಈ ಆರೋಪಗಳು ರಾಜಕೀಯ ಷಡ್ಯಂತ್ರದಿಂದ ಕೂಡಿವೆ. ಬ್ರಾಹ್ಮಣ–ಲಿಂಗಾಯತ ಸಮಾಜಗಳ ನಡುವೆ ಅಸಮಾಧಾನ ಸೃಷ್ಟಿಸಲು ಪ್ರಯತ್ನಿಸುತ್ತಿರುವುದು ಖಂಡನಾರ್ಹ. ಶ್ರೀಕಾಂತ ಸ್ವಾಮಿ ಅವರ ವಿರುದ್ಧದ ಮಾನಹಾನಿ ಆರೋಪ ತಕ್ಷಣ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಕಾರು ಡಿಕ್ಕಿ : ವೃದ್ಧ ಸಾವು





