ಹಲವು ಜಾತಿ, ಧರ್ಮ, ಭಾಷೆ, ಸಂಸ್ಕೃತಿ ಹಾಗೂ ಪರಂಪರೆ ಸೇರಿದಂತೆ ಎಲ್ಲ ವಿಚಾರಗಳನ್ನು ಒಳಗೊಂಡು ರಚನೆಯಾದ ಭಾರತೀಯ ಸಂವಿಧಾನವು ದೇಶದ ಮಹಾಗ್ರಂಥವಾಗಿದೆ. ನಾವು ಸಂವಿಧಾನ ಹಾಗೂ ಬಾಬಾ ಸಾಹೇಬರ ಆಶಯಗಳನ್ನು ಉಳಿಸಿಕೊಳ್ಳಬೇಕಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನುಡಿದರು.
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 69ನೇ ಪರಿನಿರ್ವಾಣ ದಿನದ ಅಂಗವಾಗಿ ಬೀದರ್ ನಗರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಸಂಜೆ ಆಯೋಜಿಸಿದ ಬುದ್ಧ ಭಾರತ ನಿರ್ಮಾಣ ಸಂಕಲ್ಪ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ ಅವರು, ʼಸಂವಿಧಾನವಿದ್ದರೆ ಮಾತ್ರ ಭಾರತ, ಇಲ್ಲದಿದ್ದರೆ ನೆರೆಯ ಪಾಕಿಸ್ತಾನ, ಶ್ರೀಲಂಕಾ ಆಗುವಂತಹ ಅಪಾಯಕಾರಿ ಸನ್ನಿವೇಶ ಇದೆʼ ಎಂದರು.
ʼಸಮಾಜದಲ್ಲಿ ಅಸಮಾನತೆ, ಲಿಂಗ ತಾರತಮ್ಯ, ಜಾತಿಯತೆ ಹೋಗಲಾಡಿಸಿ ಸಮ ಸಮಾಜ ನಿರ್ಮಾಣ ಮಾಡುವ ಗುರಿಯೊಂದಿಗೆ ರಚನೆಯಾದ ಸಂವಿಧಾನ ಎಂದೆಂದಿಗೂ ಪ್ರಸ್ತುತವಾಗಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ವೈಜ್ಞಾನಿಕ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ಭಾರತ ಉನ್ನತ ಸಾಧನೆಗೈದಿದೆ. ಇದು ಬಾಬಾ ಸಾಹೇಬರ ದೂರದೃಷ್ಟಿಯ ಫಲವಾಗಿದೆ. ವೈಜ್ಞಾನಿಕ, ವೈಚಾರಿಕ ಚಿಂತನೆ ಸೇರಿದಂತೆ ಶಿಕ್ಷಣ, ಆರೋಗ್ಯ ಎಲ್ಲ ರಂಗದಲ್ಲಿ ಅಭಿವೃದ್ಧಿ ಹೊಂದುವ ಮೂಲಕ ಸಮಾಜದಲ್ಲಿ ಸಮಾನತೆ ನೆಲೆಯೂರಿದರೆ ಬುದ್ಧ ಭಾರತ ನಿರ್ಮಾಣವಾಗುತ್ತದೆʼ ಎಂದು ತಿಳಿಸಿದರು.
ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಮಾತನಾಡಿ, ‘ಮೆಲ್ವರ್ಗದವರಿಂದ ಅನೇಕ ನೋವು, ಅಪಮಾನಗಳು ಎದುರಾದರೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಯಾರನ್ನು ತಾರತಮ್ಯ ಮಾಡದೆ ಸಂವಿಧಾನದ ಮೂಲಕ ದೇಶದ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳನ್ನು ನೀಡಿದ್ದಾರೆʼ ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ ಮಹಿಳಾ ಹೋರಾಟಗಾರ್ತಿ ಕೆ.ನೀಲಾ ಅವರು ಮಾತನಾಡಿ, ʼಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದ ಅಧಿಕಾರ ಹಿಡಿದವರು ಸಂವಿಧಾನವೇ ಬದಲಾಯಿಸುವ ಬಗ್ಗೆ ಮಾತನಾಡುವುದು ಹಾಗೂ ಸಂವಿಧಾನ ತತ್ವದ ವಿರೋಧವಾಗಿ ಹಿಂದೂ ರಾಷ್ಟ್ರ ನಿರ್ಮಾಣ ಮಾಡುತ್ತೇವೆ ಎಂಬ ಹೇಳಿಕೆ ನೀಡುತ್ತಿರುವುದು ಖಂಡನೀಯ. ಆರ್‌ಎಸ್‌ಎಸ್‌ಗೆ ನೈತಿಕತೆಯಿದ್ದರೆ ನೋಂದಣಿ ಮಾಡಿಕೊಂಡು ಲೆಕ್ಕಪತ್ರ ಬಹಿರಂಗಪಡಿಸಲಿ. ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ವಿಶ್ವದ ಏಕೈಕ ರಾಷ್ಟ್ರ. ಎಲ್ಲರಿಗೂ ಸಮಾನತೆ ತತ್ವ ನೀಡಿದ ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲರ ಮೇಲಿದೆʼ ಎಂದರು.

ಮಾಜಿ ಸಚಿವ ಬಂಡೇಪ್ಪಾ ಖಾಶೆಂಪೂರ ಮಾತನಾಡಿ, ʼಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರ್ಕಾರ ಎಸ್.ಸಿ. ಹಾಗೂ ಎಸ್.ಟಿಗಳಿಗೆ ಸಂವಿಧಾನ ಬದ್ದವಾಗಿರುವ ಅನುದಾನ ಸರಿಯಾಗಿ ಅನುಷ್ಠಾನಗೊಳಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ಕಷ್ಟ, ನೋವು, ಅಪಮಾನಗಳ ಮಧ್ಯೆಯೂ ಬಾಬಾ ಸಾಹೇಬರು ಅಧ್ಯಯನ ನಡೆಸಿ ವಿಶ್ವಜ್ಞಾನಿಯಾಗಿದ್ದರು. ಅಂತಹ ಮಹಾನ್ ಜ್ಞಾನಿಯನ್ನು ಬಹುಶಃ ಜಗತ್ತಿನಲ್ಲಿ ಯಾರೂ ಸಿಗುವುದಿಲ್ಲʼ ಎಂದು ಹೇಳಿದರು.
ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್ ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನ ಆಯೋಜನೆ ಸಮಿತಿ ಅಧ್ಯಕ್ಷ ರಮೇಶ ಡಾಕುಳಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪೂಜ್ಯ ಭಂತೆ ವರಜ್ಯೋತಿ ಸಾನಿಧ್ಯ ವಹಿಸಿದರು. ಸಮಿತಿಯ ಕಾರ್ಯಾಧ್ಯಕ್ಷ ಮಹೇಶ ಗೋರನಾಳಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಲಹಾ ಸಮಿತಿ ಸದಸ್ಯ ಅನೀಲಕುಮಾರ ಬೆಲ್ದಾರ ಆಶಯ ನುಡಿ ಹೇಳಿದರು.
ಕಾರ್ಯಕ್ರಮದಲ್ಲಿ ಬೀದರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೋಡ, ಕಾರ್ಯನಿರತ ಪತ್ರಕರ್ತರ ಸಂಘದ ಅಡಾಕ್ ಅಧ್ಯಕ್ಷ ಆನಂದ ದೇವಪ್ಪಾ, ವಿಸ್ಡಂ ಸಂಸ್ಥೆ ಅಧ್ಯಕ್ಷ ಎಂ.ಡಿ.ಆಸಿಫೋದ್ದಿನ್, ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಬಸವರಾಜ ಮಾಳಗೆ, ಬಹುಜನ ವಿಚಾರವಾದಿ ಸುಮಂತ ಕಟ್ಟಿಮನಿ, ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ದೊಡ್ಡಿ, ಸದಸ್ಯೆ ಉಲಾಸಿನಿ ಮುದಾಳೆ ಉಪಸ್ಥಿತರಿದ್ದರು.
ಇದನ್ನೂ ಓದಿ : ಊರಾಗ ಏನ ಧಂದೆ ಇಲ್ಲಾ, ಶಾರದಾಗ ದುಡಿಯಾಕ ಹೋಗ್ಯಾನ!
ಸಮಿತಿಯ ಗೌರವಾಧ್ಯಕ್ಷ ಪ್ರಕಾಶ ಮಾಳಗೆ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ನೀಲಿಕಟ್ಟಿ, ಸಾಯಿ ಶಿಂಧೆ, ಸಲಹಾ ಸಮಿತಿ ಸದಸ್ಯರಾದ ಬಾಬುರಾವ ಪಾಸ್ವಾನ್, ಶ್ರೀಪತರಾವ ದೀನೆ, ಡಾ.ಕಾಶಿನಾಥ ಚೆಲ್ವಾ, ದಶರಥ ಗುರು, ಬಕ್ಕಪ್ಪಾ ದಂಡಿನ್, ಅಂಬಾದಾಸ ಗಾಯಕವಾಡ, ಅಶೋಕ ಮಾಳಗೆ, ಉಪಾಧ್ಯಕ್ಷರಾದ ಲುಂಬಿಣಿ ಗೌತಮ, ವಿಜಯದಶಮಿ ಗೂನ್ನಳ್ಳಿಕರ್, ಇಂದುಮತಿ ಸಾಗರ, ರಂಜಿತಾ ಜೈನೋರ್, ರಾಜಕುಮಾರ ಬನ್ನೆರ್, ಪ್ರದೀಪ ನಾಟೆಕರ್, ಸಂದೀಪ್ ಕಾಂಟೆ, ಮಾರುತಿ ಕಂಟಿ, ರಮೇಶ ಸಾಗರ, ಬಾಬುರಾವ ಮಿಠಾರೆ, ಸತೀಶ್ ಲಕ್ಕಿ, ಸುನೀಲ್ ಸಂಗಮ್, ರಾಜಕುಮಾರ ಶೇರಿಕಾರ, ಪ್ರಕಾಶ ರಾವಣ ಪುಟ್ಟರಾಜ ದೀನೆ ಸೇರಿದಂತೆ ಸಾಮಾಜಿಕ ಚಿಂತಕರು, ಹೋರಾಟಗಾರರು, ಬಾಬಾ ಸಾಹೇಬರ ಅನುಯಾಯಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.





