ಔರಾದ್ ಪಟ್ಟಣದ ಬಹುಜನ ಸಂಪರ್ಕ ಕಚೇರಿಯಲ್ಲಿ ಮಂಗಳವಾರ ಕಟ್ಟಡ ಕಾರ್ಮಿಕರ ಸೌಲಭ್ಯ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.
ಸಾಮಾಜಿಕ ಕಾರ್ಯಕರ್ತ ರಾಹುಲ್ ಖಂದಾರೆ ಅವರು ಕಟ್ಟಡ ಕಾರ್ಮಿಕರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅವರು, ʼಮಕ್ಕಳ ಶಿಕ್ಷಣ, ಆರೋಗ್ಯ, ವಸತಿ, ಪಿಂಚಣಿ, ವಿಮೆ ಹಾಗೂ ಹೆರಿಗೆಯಂತಹ ಸೌಲಭ್ಯಗಳು ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮೂಲಕ ಪಡೆಯಬಹುದುʼ ಎಂದು ಹೇಳಿದರು.
ಅಪಘಾತದಿಂದ ಮರಣ ಹೊಂದಿದ ಕಾರ್ಮಿಕರಿಗೆ ₹4 ಲಕ್ಷದ ವರೆಗೆ ವಿಮಾ ಪರಿಹಾರ ಹಾಗೂ ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯ ಹೊಂದಿದವರು ₹2 ಲಕ್ಷದ ನೆರವು ಪಡೆಯಬಹುದಾಗಿದೆ. 60 ವರ್ಷ ಪೂರೈಸಿದ ಕಾರ್ಮಿಕರಿಗೆ ₹3,000 ಪಿಂಚಣಿ, ವಸತಿ ಉದ್ದೇಶಕ್ಕಾಗಿ ಮನೆ ನಿರ್ಮಿಸಲು ₹2 ಲಕ್ಷ ಮುಂಗಡ, ಕಾರ್ಮಿಕ ಮಹಿಳೆಯರಿಗೆ ₹50 ಸಾವಿರ ಹೆರಿಗೆ ಸಹಾಯಧನ ಸೇರಿದಂತೆ ಅನೇಕ ಸೌಲಭ್ಯಗಳಿವೆ. ಈ ಸೌಲಭ್ಯ ಪಡೆಯಲು ತಾವು ಬಹುಜನ ಸಂಪರ್ಕ ಕಚೇರಿಯಲ್ಲಿ ಉಚಿತ ಸಹಾಯ ಪಡೆಯಬಹುದು ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಶಾಲಾ ವಾಹನ ಡಿಕ್ಕಿ : 3ನೇ ತರಗತಿ ವಿದ್ಯಾರ್ಥಿನಿ ಸಾವು
ತರಬೇತಿ ಸಂಯೋಜಕ ಸುರೇಶ ಸಿದ್ದಲಿಂಗಪ್ಪ, ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಸಿಂಧೆ, ಅನೀಲ ಬುಜಂಗೆ ಉಪಸ್ಥಿತರಿದ್ದರು.





