ದೇಶದಲ್ಲಿ ಶಾಂತಿ, ಸುವ್ಯವಸ್ಥೆ ಜೊತೆಗೆ ಆಂತರಿಕ ಭದ್ರತೆಗಾಗಿ ಪೊಲೀಸರು ಹಗಲಿರುಳು ಶ್ರಮಿಸುವ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕರ್ನಲ್ ಶರಣಪ್ಪ ಸಿಕೆನಪುರೆ ತಿಳಿಸಿದರು.
ಮಂಗಳವಾರ ಬೀದರ್ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂದಂಡೆ ಸಮರ್ಪಿಸಿ ಗೌರವ ಸಲ್ಲಿಸಿ ಅವರು ಮಾತನಾಡಿದರು.
ʼಪೊಲೀಸರು ನಿಷ್ಠೆಯಿಂದ ಕೆಲಸ ಮಾಡುತ್ತಿರುವದರಿಂದ ದೇಶದ ಜನ ನೆಮ್ಮದಿಯಿಂದ ಇದ್ದೇವೆ. ಪ್ರತಿ ವರ್ಷ ಸಾವಿರಾರು ಪೊಲೀಸರು ಕರ್ತವ್ಯದ ಸಮಯದಲ್ಲಿ ಹುತಾತ್ಮರಾಗುತ್ತಾರೆ. ಅವರ ಸ್ಮರಣೆಯನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಬೇಡಿ. ಪೊಲೀಸ್ ಕರ್ತವ್ಯ ನಿಷ್ಠೆಗೆ ಅವರ ಕುಟುಂಬ ಸದಸ್ಯರ ಸಹಕಾರ ಸಾಕಷ್ಟಿದೆ. ಪೊಲೀಸ್ ಹುತಾತ್ಮರ ಮಕ್ಕಳಿಗೆ ತಮ್ಮ ಶಾಲೆಯಲ್ಲಿ ಕಡಿಮೆ ಶುಲ್ಕದಲ್ಲಿ ಶಿಕ್ಷಣ ನೀಡಲಾಗುವುದುʼ ಎಂದರು.
ಜಿಲ್ಲಾ ಪೊಲೀಸ್ ವರೀಷ್ಟಾಧಿಕಾರಿ ಪ್ರದೀಪ್ ಗುಂಟಿ ಮಾತನಾಡಿ, ʼ1959 ರ ಅ.21 ರಂದು ಲಡಾಕ್ ಪ್ರದೇಶದಲ್ಲಿ ಎಸ್.ಐ ಕರಂ ಸಿಂಗ್ ನೇತೃತ್ವದ 21 ಜನ ಕೇಂದ್ರ ಪೊಲೀಸ್ ಮೀಸಲು ಪಡೆಯ ಸಿಬ್ಬಂದಿಗಳ ತಂಡ ಗಸ್ತು ತಿರುಗುವ ಸಂದರ್ಭದಲ್ಲಿ ಚೀನಾ ಸೈನ್ಯ ಏಕಾಏಕಿ ದಾಳಿ ನಡೆಸಿತು ಈ ಸಮಯದಲ್ಲಿ ವೀರಾವೇಶದಿಂದ ಹೋರಾಡಿ ನಮ್ಮ 10 ಜನ ಪೊಲೀಸ್ ಸಿಬ್ಬಂದಿಗಳು ಮಡಿದರು ಹಾಗೂ 11 ಜನ ಒತ್ತೆಯಾಳಾದರು. ಅವರ ತ್ಯಾಗ ಬಲಿದಾನದ ಸಂಕೇತವಾಗಿ ಪೊಲೀಸ್ ಹುತಾತ್ಮರ ಆಚರಣೆ ಮಾಡಲಾಗುತ್ತಿದೆ ಎಂದರು.

ಇದೇ ಸಮಯದಲ್ಲಿ ಅವರ ಕೆಳೆದ ಒಂದು ವರ್ಷದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಹುತಾತ್ಮರಾದ ಪೊಲೀಸರ ಹೆಸರುಗಳನ್ನೂ ವಾಚಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಅಧೀಕ್ಷಕರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಂದ ಹಾಗೂ ಇತರೆ ಪೊಲೀಸ್ ಅಧಿಕಾರಿ ಸಿಬ್ಬಂದಿ, ಗಣ್ಯರಿಂದ ಹುತಾತ್ಮ ಸ್ಮಾರಕಕ್ಕೆ ಹೂದಂಡೆ ಸಮರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ನಿವೃತ್ತ ಜಿಲ್ಲಾ ಶಸ್ತ್ರ ಚಿಕಿತ್ಸಕ ಚಂದ್ರಕಾಂತ ಗುದಗೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಚಂದ್ರಕಾಂತ ಪೂಜಾರಿ, ಡಿವೈಎಸ್ಪಿ ಶಿವನಗೌಡ ಪಾಟೀಲ್, ಭಾಲ್ಕಿ ಡಿಎಸ್ಪಿ ಶಿವಾನಂದ ಪವಾಡಶೆಟ್ಟಿ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ನಗರದ ಗಣ್ಯರು ಮತ್ತಿತರರು ಉಪಸ್ಥಿತರಿದ್ದರು.





