ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಮುಧೋಳ(ಬಿ) ಗ್ರಾಮದ ಗುಂಡಪ್ಪ ಹೋಡಗೆ (85) ಲಕ್ಷ್ಮಿಬಾಯಿ ಹೋಡಗೆ (83) ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.
ಸತಿ-ಪತಿ ಇಬ್ಬರೂ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಅ.23ರಂದು ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಲಕ್ಷ್ಮಿಬಾಯಿ ಹೋಡಗೆ ಅವರು ನಿಧನರಾದರು. ಬಳಿಕ ಅದೇ ರಾತ್ರಿ 10 ಗಂಟೆ ಸುಮಾರಿಗೆ ಅವರ ಪತಿ ಗುಂಡಪ್ಪ ಹೋಡಗೆ ಕೊನೆಯುಸಿರೆಳೆದರು.
ಆರೇಳು ದಶಕಗಳ ಕಾಲ ಇಡೀ ಜೀವನವನ್ನು ಒಟ್ಟಿಗೆ ಕಳೆದಿದ್ದ ದಂಪತಿಯು ಒಂದೇ ದಿನ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಸಂಬಂಧಿಕರಿಗೆ ಮತ್ತು ಊರಿನವರಲ್ಲಿ ಕಣ್ಣೀರು ತರಿಸಿದೆ. ಶುಕ್ರವಾರ ಸಂಜೆ ಅವರಿಬ್ಬರ ದೇಹಗಳನ್ನು ಅಕ್ಕ-ಪಕ್ಕ ಇರಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಇದನ್ನೂ ಓದಿ : ಬೀದರ್ | ವಿವಾಹೇತರ ಸಂಬಂಧ : ಮಹಾರಾಷ್ಟ್ರ ಮೂಲದ ಯುವಕನಿಗೆ ಮನಬಂದಂತೆ ಥಳಿತ; ಸಾವು
ಈ ದಂಪತಿ ನಾಲ್ವರು ಪುತ್ರಿಯರು, ಮೂವರು ಪುತ್ರರು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಒಂದೇ ದಿನ ಇಹಲೋಕ ತ್ಯಜಿಸಿದ ದಂಪತಿಗಳ ಸುದ್ದಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದು, ಸಾವಿಗೆ ಬಂಧು-ಬಳಗ, ಸುತ್ತಲಿನ ಗ್ರಾಮಸ್ಥರು ಮಮ್ಮಲ ಮರುಗಿದ್ದಾರೆ.





