ʼಬ್ಯಾರೇ ತಾಲೂಕಿನ ರೈತರಿಗಿ ಬೆಳಿ ಹೋಗಿಂದ್ ರೊಕ್ಕಾ ಜಮಾ ಆಗ್ಯಾವ್ ಖರೇ ನಮ್ಗ್ ಯಾಕ್ ಆಗಿಲ್ಲ. ಅಲ್ಲಿನೂ ಎಲ್ಲರಿಗಿ ಬಂದಿಲ್ಲ, ಒಂದೇ ಮನ್ಯಾಗ್ ಅಣ್ಣುಗ್ ಬಂದುರ್ ತಮ್ಮುಗ್ ಬಂದಿಲ್ಲ. ಮತ್ ಎಡ್ಡ ಎಕ್ಕರ್ ಬೆಳೆ ಹಾಳಾದ್ರು ಒಬ್ರಿಗಿ ಪಾಚ್ ಹಜಾರ್ ಬಂದುರ್ ಒಬ್ರಿಗಿ ತೀನ್ ಹಜಾರ್ ಬಂದಾವ್. ಬೆಳಿ ಹಾನಿ ರೊಕ್ಕಾ ಹ್ಯಾಂಗ್ ಜಮಾ ಆಗಲ್ತಾವ್ ಅಂಬದ್ ಹಿಸಾಬ್-ಕಿತಾಬ್ ಏನ್ಬಿ ಇಲ್ಲಾ ನೋಡ್ರೀ, ಸದ್ಯಕ್ಕ್ ಬಂದಷ್ಟೇ ಖರೇ ಅನ್ಬೇಕ್…..
ಹೀಗೆ ಜಿಲ್ಲೆಯ ರೈತಾಪಿ ವರ್ಗ ದಿನನಿತ್ಯ ಮಾತಾಡುವುದು ಸಾಮಾನ್ಯ ಎನ್ನುವಂತಾಗಿದೆ.
ಈಗಾಗಲೇ ಪರಿಹಾರ ಹಣ ಜಮೆಯಾಗಿದೆ. ಹೀಗಾಗಿ ಬೇರೆ ತಾಲೂಕಿನ ರೈತರಿಗೆ ಜಮೆಯಾಗಿದೆ, ನಮಗ್ಯಾಕೆ ಪರಿಹಾರ ಬಂದಿಲ್ಲ, ಇದು ಯಾವ ರೀತಿ ಬೆಳೆ ಸಮೀಕ್ಷೆ? ಅಳತೆಯ ಮಾನದಂಡವೇನು? ಹೆಚ್ಚು-ಕಡಿಮೆ ಪರಿಹಾರ ಜಮೆ ಏಕೆ? ಎಂದು ರೈತರು ಗೊಂದಲದಲ್ಲಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಮುಂಗಾರು ಹಂಗಾಮಿನ 1.68 ಲಕ್ಷ ಹೆಕ್ಟೇರ್ ಬೆಳೆ ಹಾಳಾಗಿತ್ತು. ಹಾನಿಯಾದ ಬೆಳೆಗೆ ಸರ್ಕಾರ ಘೋಷಿಸಿದ ಬೆಳೆ ಹಾನಿ ಪರಿಹಾರ ಬಹುತೇಕ ರೈತರಿಗೆ ಇನ್ನೂ ತಲುಪಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತಲೂ ಅಧಿಕ ಮಳೆ ಹಾಗೂ ಪ್ರವಾಹದಿಂದ ಜಿಲ್ಲಾದ್ಯಂತ ಅಪಾರ ಪ್ರಮಾಣದಲ್ಲಿ ಬೆಳೆ ಹಾಳಾಗಿತ್ತು. ಜಿಲ್ಲಾಡಳಿತದಿಂದ ಜಂಟಿ ಸಮೀಕ್ಷೆ ನಡೆಸಿ ರಾಜ್ಯ ಸರಕಾರಕ್ಕೆ ವರದಿ ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅವರು ಅ.30ರೊಳಗೆ ಪರಿಹಾರದ ಮೊತ್ತ ರೈತರ ಖಾತೆಗೆ ಜಮೆ ಆಗಲಿದೆ ಎಂದು ಆಶ್ವಾಸನೆ ನೀಡಿದ್ದರು.
ಬಳಿಕ ಸಚಿವ ಈಶ್ವರ ಖಂಡ್ರೆ ಅವರು ಅ.31ರಂದು ಪತ್ರಿಕಾಗೋಷ್ಠಿ ನಡೆಸಿ ʼರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಮುಂದಿನ 15 ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಬೆಳೆ ಹಾನಿ ಪರಿಹಾರ ಜಮಾ ಆಗಲಿದೆʼ ಎಂದು ಭರವಸೆ ಕೊಟ್ಟಿದರು. ಆದರೆ, ಕೆಲ ತಾಲೂಕಿನ ರೈತರಿಗೆ ಪರಿಹಾರ ಜಮೆಯಾದರೂ ಸರ್ಕಾರ ಘೋಷಿಸಿದಂತೆ ಹಣ ಜಮೆಯಾಗಿಲ್ಲ ಎಂದು ಹೇಳುತ್ತಿದ್ದಾರೆ.
ಉಸ್ತುವಾರಿ ಸಚಿವರು ಏನು ಹೇಳಿದ್ರು!
ಮೊದಲ ಹಂತದಲ್ಲಿ ಎಸ್‌ಡಿಆರ್‌ಎಫ್ ಮಾನದಂಡ ಪ್ರಕಾರ ₹143.34 ಕೋಟಿ ಮಂಜೂರಾತಿಯಾಗಿದೆ. ಈಗಾಗಲೇ ₹17.25 ಕೋಟಿ ಬಿಡುಗಡೆಯಾಗಿದ್ದು, ಅ.31ರ ಸಂಜೆಯವರೆಗೆ ರೈತರ ಖಾತೆಗೆ ಹಣ ಜಮೆಯಾಗುತ್ತದೆ. ಬೆಳೆ ಹಾನಿಯಾದ ಪ್ರತಿ ಹೆಕ್ಟೇರ್ ₹8,500 ಹೆಚ್ಚುವರಿ ಪರಿಹಾರ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಘೋಷಿಸಿರುವ ಹಣವನ್ನು ಮುಂದಿನ 15 ದಿನಗಳ ಒಳಗಾಗಿ ರೈತರ ಖಾತೆಗೆ ಜಮೆ ಆಗಲಿದೆ. ಇದು ಒಟ್ಟು ₹130 ಕೋಟಿ ಹಣ ಆಗಲಿದೆ. ಎಲ್ಲಾ ಸೇರಿ ಒಟ್ಟು ₹300 ಕೋಟಿ ಹಣ ಜಿಲ್ಲೆಯ ರೈತರ ಖಾತೆಗೆ ಇಂದಿನಿಂದ ಮುಂದಿನ 15 ದಿನಗಳ ಒಳಗಾಗಿ ಸಿಗಲಿದೆʼ ಎಂದು ಅ.31ರಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೃಷಿಯ ವೆಚ್ಚ ಅಧಿಕವಾಗಿರುವುದರಿಂದ ಕೃಷಿ ಚಟುವಟಕೆ ಕೈಗೊಳ್ಳುವುದೇ ಸಾಹಸ ಎಂಬಂತಾಗಿರುವ ಈ ಕಾಲದಲ್ಲಿ ರೈತರಿಗೆ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸೇರಿ ಒಂದಿಲ್ಲೊಂದು ಸಮಸ್ಯೆಯಿಂದ ಕೃಷಿಕರ ಬದುಕೇ ಕಷ್ಟದಾಯಕವಾಗಿದೆ. ಸರ್ಕಾರದಿಂದ ಸಿಗುವ ಅಲ್ಪ ಪರಿಹಾರ ಧನ ಹಿಂಗಾರು ಬಿತ್ತನೆ, ಬದುಕಿಗೆ ಆಸರೆಯಾಗಬಹುದೆಂಬ ನಿರೀಕ್ಷೆಯಲ್ಲಿರುವ ಅನ್ನದಾತರು ʼಬ್ಯಾಂಕ್‌ಗಳಿಗೆ ನಿತ್ಯ ಅಲೆಯುವುದು ತಪ್ಪುತ್ತಿಲ್ಲ, ಬ್ಯಾಂಕ್ ಅಧಿಕಾರಿಗಳು ನಿಮ್ಮ ಹಣ ಇನ್ನೂ ಜಮೆಯಾಗಿಲ್ಲʼ ಎಂದು ಹೇಳುತ್ತಿದ್ದಾರೆ. ಹೀಗಾಗಿ ರೈತರು ನಿರಾಸೆಯಿಂದ ಮನೆಯತ್ತ ಮರಳುವಂತಾಗಿದೆ.
ಔರಾದ್-ಕಮಲನಗರ ತಾಲೂಕಿನಲ್ಲಿ ಹೆಚ್ಚು ಹಾನಿ :
ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ನಡೆಸಿದ ಜಂಟಿ ಸಮೀಕ್ಷೆಯ ವರದಿ ಪ್ರಕಾರ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 4.32 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆಯಾಗಿತ್ತು, ಅದರಲ್ಲಿ 1.69 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ ಎಂದು ಪರಿಹಾರ ತಂತ್ರಾಂಶದಲ್ಲಿ ನಮೂದಿಸಲಾಗಿದೆ.

ಬೆಳೆ ಪರಿಹಾರ ಘೋಷಣೆಗೆ ಮಾತ್ರ ಸೀಮಿತ!:
ʼಮಳೆ ಹಾಗೂ ಪ್ರವಾಹದಿಂದಾಗಿ ಬೆಳೆ ಹಾನಿ ಆಗಿರುವ ಕುರಿತು ವೈಮಾನಿಕ ಸಮೀಕ್ಷೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಅವರು, ಎನ್‌ಡಿಆರ್‌ಆಫ್ ಪರಿಹಾರದ ಜತೆಗೆ ರಾಜ್ಯ ಸರಕಾರದಿಂದಲೂ ಹೆಚ್ಚುವರಿಯಾಗಿ ₹8,500 ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಆದರೆ, ಪರಿಹಾರ ಘೋಷಿಸಿ ತಿಂಗಳು ಕಳೆದರೂ ಇನ್ನೂ ಖಾತೆಗೆ ಜಮೆಯಾಗಿಲ್ಲ.
ʼದೀಪಾವಳಿ ಹಬ್ಬದ ಮುನ್ನವೇ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ನಮಗೆ ಉಸ್ತುವಾರಿ ಸಚಿವರ ಭರವಸೆ ಹುಸಿಯಾಗಿದೆ. ʼನುಡಿದಂತೆ ನಡೆಯುತ್ತೇವೆʼ ಎಂದು ಹೇಳುವ ರಾಜ್ಯ ಸರ್ಕಾರ ಶೀಘ್ರದಲ್ಲಿ ಎಲ್ಲ ರೈತರ ಖಾತೆಗೆ ಪರಿಹಾರ ಪೂರ್ಣ ಪ್ರಮಾಣದಲ್ಲಿ ಪಾವತಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯʼ ಎಂದು ರೈತ ಮುಖಂಡ ಶ್ರೀಮಂತ ಬಿರಾದರ್ ಆಗ್ರಹಿಸಿದ್ದಾರೆ.
ʼಒಟ್ಟು 5 ಎಕರೆ ಪ್ರದೇಶದಲ್ಲಿ ಸೋಯಾ, ಉದ್ದು, ಹೆಸರು ಬೆಳೆಯಲಾಗಿತ್ತು. ಭಾರಿ ಮಳೆ ಹಾಗೂ ಪ್ರವಾಹದಿಂದ ಸಂಪೂರ್ಣ ಹಾಳಾಗಿದೆ. ಅಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ. ಆದರೆ ಇಂದಿನವರೆಗೆ ಬೆಳೆ ಪರಿಹಾರ ಜಮೆಯಾಗಿಲ್ಲ. ಭಾಲ್ಕಿ, ಔರಾದ್ ಇತರ ತಾಲೂಕಿನ ಕೆಲ ರೈತರಿಗೆ ಪರಿಹಾರ ಜಮೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಹುಮನಾಬಾದ್, ಬಸವಕಲ್ಯಾಣ ತಾಲೂಕಿನ ರೈತರಿಗೆ ಪರಿಹಾರ ಜಮೆಯಾಗಿಲ್ಲʼ ಎಂದು ಹುಮನಾಬಾದ್ ತಾಲೂಕಿನ ಯುವ ರೈತ ಸುಶೀಲ್ ಭೋಸ್ಲೆ ಪ್ರಶ್ನಿಸುತ್ತಾರೆ.
ʼಮೊದಲು ದೀಪಾವಳಿ ಮುನ್ನ ಅಂತ ಹೇಳಿದ್ರು, ಆನಂತರ ಅ.31 ರಿಂದ ಮುಂದಿನ 15 ದಿನಗಳಲ್ಲಿ ಪರಿಹಾರ ಹಣ ಜಮೆ ಮಾಡ್ತೀವಿ ಅಂದಿದ್ರು. ಆದರೆ, ಅವರು ಹೇಳಿದ ಅವಧಿ ಮುಗಿದರೂ ಇನ್ನೂ ಜಮೆಯಾಗಿಲ್ಲ ಯಾಕೆ. ಮುಂಗಾರು ಬೆಳೆ ಕಳೆದುಕೊಂಡು, ಹಿಂಗಾರು ಬಿತ್ತನೆಯೂ ಸರಿಯಾಗದೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನಮಗೆ ಈ ರೀತಿ ತಾರತಮ್ಯ ಮಾಡುತ್ತಿರುವುದು ಸರಿಯೇ? ಎಂದು ಅವಲತ್ತುಕೊಂಡರು.
ಹೆಚ್ಚ- ಕಡಿಮೆ ಪರಿಹಾರ ಜಮೆ ಏಕೆ?
ʼಜಿಲ್ಲಾದ್ಯಂತ ಸಮೀಕ್ಷೆ ಕಾರ್ಯ ಸಂಪೂರ್ಣ ಮುಗಿದಿದೆ. ಕೆಲ ತಾಲೂಕಿನಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಹಣ ಜಮೆಯಾಗಿಲ್ಲ. ಈ ವಾರದಲ್ಲಿ ಹಂತ-ಹಂತವಾಗಿ ಎಲ್ಲ ರೈತರ ಖಾತೆಗೆ ಎನ್‌ಡಿಆರ್‌ಎಫ್ ಪರಿಹಾರ ಹಣ ಜಮೆ ಆಗುತ್ತದೆ. ಆನಂತರ ರಾಜ್ಯ ಸರ್ಕಾರ ಘೋಷಿಸಿದ ಹೆಚ್ಚುವರಿ ಪರಿಹಾರ ಜಮೆಯಾಗುತ್ತದೆʼ ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ.
ʼಬಹುತೇಕ ರೈತರ ತಾವು ಬೆಳೆದಿದ್ದ ಬೆಳೆ ಸಂಪೂರ್ಣ ಹಾನಿಯಾಗಿದೆ. ಅದರಂತೆ ಹೆಕ್ಟೇರ್ ಲೆಕ್ಕದಲ್ಲಿ ಹಣ ಜಮೆಯಾಗಬೇಕು ಎಂದುಕೊಳ್ಳುತ್ತಾರೆ. ಕೆಲವರಿಗೆ ಹೆಚ್ಚು ಕಡಿಮೆ ಬಂದ ಹಿನ್ನೆಲೆ ಯಾಕೆ ಹೀಗೆ ಪ್ರಶ್ನಿಸುತ್ತಿದ್ದಾರೆ. ಆದರೆ, ಸರ್ಕಾರದ ಮಾರ್ಗಸೂಚಿ ಅನ್ವಯ ಅತಿ ಸಣ್ಣ ರೈತರಿಗೆ ಶೇ.33ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಬೇಕು ಎಂಬ ನಿಯಮವಿದೆ. ಇನ್ನು ಕೆಲವೆಡೆ ನೂರಕ್ಕೆ ನೂರರಷ್ಟು ಬೆಳೆ ಹಾನಿಯಾದರೆ, ಕೆಲ ಕಡೆ ಪೂರ್ಣ ಪ್ರಮಾಣದಲ್ಲಿ ಬೆಳೆ ಹಾನಿ ಆಗಿರುವುದಿಲ್ಲ. ಹೀಗಾಗಿ ಪರಿಹಾರ ತಂತ್ರಾಂಶದಲ್ಲಿ ನಮೂದಿಸಿದಂತೆ ಪರಿಹಾರ ಜಮೆಯಾಗುತ್ತದೆ. ಹೊರತು ಸರ್ಕಾರದ ಮಾರ್ಗಸೂಚಿಯಂತೆ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಪ್ರತಿ ಹೆಕ್ಟೇರ್‌ಗೆ ₹8,500 ಪರಿಹಾರ ಬರುವುದಿಲ್ಲʼ ಎಂಬುದು ಅಧಿಕಾರಿಗಳು ಹೇಳುತ್ತಿದ್ದಾರೆ.

ʼಕೂಲಿ ಕಾರ್ಮಿಕರ ಸಮಸ್ಯೆ, ದುಬಾರಿ ಕೂಲಿ ಹಾಗೂ ಬೀಜ, ಗೊಬ್ಬರದ ಬೆಲೆಗಳ ಏರಿಕೆ ಸೇರಿ ಹಲವು ಸಂಕಷ್ಟಗಳ ನಡುವೆಯೂ ಬೆಳೆದಿದ್ದ ಬೆಳೆಗಳಲ್ಲಿ ಸಾವಿರಾರು ಹೆಕ್ಟೇರ್ ಬೆಳೆ ಅತಿವೃಷ್ಟಿಯಿಂದ ಹಾನಿಯಾಗಿವೆ. ಸಾಲ ಸೂಲ ಮಾಡಿ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರಿಗೆ ಹಿಂಗಾರು ಬಿತ್ತನೆಯ ಖರ್ಚು ಭರಿಸಬೇಕಿರುವುದರಿಂದ ರೈತರಿಗೆ ಪರಿಹಾರ ಹಣ ದೊರೆತಿದ್ದರೆ ಅನುಕೂಲವಾಗುತ್ತಿತ್ತು. ಗ್ಯಾರಂಟಿ ಯೋಜನೆಗಳ ಬಗ್ಗೆಯೇ ಮಾತನಾಡುವ ಸರಕಾರ ರೈತರಿಗೆ ಭರವಸೆಯಲ್ಲಿಯೇ ಕಾಲಕಳೆಯುವಂತಾಗಿದೆʼ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯ 96,510 ರೈತರ ಖಾತೆಗೆ ₹69 ಕೋಟಿ ಬೆಳೆ ಪರಿಹಾರದ ಹಣ ಜಮೆ ಮಾಡಲಾಗಿದೆ. ಉಳಿದ ಪರಿಹಾರ ಮೊತ್ತ ನಾಲ್ಕೈದು ದಿನಗಳಲ್ಲಿ ರೈತರ ಖಾತೆಗೆ ಜಮಾ ಆಗಲಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ನ.13ರಂದು ಮಾಹಿತಿ ನೀಡಿದ್ದರು. ಕೆಲ ತಾಲೂಕಿನ ರೈತರಿಗೆ ಈಗಾಗಲೇ ಪರಿಹಾರ ಹಣ ಜಮೆಯಾಗಿದೆ. ಹೀಗಾಗಿ ಬೇರೆ ತಾಲೂಕಿನ ರೈತರಿಗೆ ಜಮೆಯಾಗಿದೆ, ನಮಗ್ಯಾಕೆ ಪರಿಹಾರ ಬಂದಿಲ್ಲ, ಇದು ಯಾವ ರೀತಿ ಬೆಳೆ ಸಮೀಕ್ಷೆ? ಅಳತೆಯ ಮಾನದಂಡವೇನು? ಹೆಚ್ಚು-ಕಡಿಮೆ ಪರಿಹಾರ ಜಮೆ ಏಕೆ? ಎಂದು ರೈತರು ಗೊಂದಲಕ್ಕೀಡಾಗಿದ್ದಾರೆ.
ರೈತರು ಏನಂತಾರೆ?
ʼನಾನು 4 ಎಕರೆ ಪ್ರದೇಶದಲ್ಲಿ ಉದ್ದು, ಹೆಸರು ಹಾಗೂ ತೊಗರಿ ಬೆಳೆದಿದ್ದೆ, ಮಳೆಯಿಂದಾಗಿ ಮೂರು ಎಕರೆ ಬೆಳೆ ಸಂಪೂರ್ಣ ಹಾಳಾಗಿತ್ತು. ಈಗ ₹9 ಸಾವಿರ ಬೆಳೆ ಹಾನಿ ಪರಿಹಾರ ಜಮೆಯಾಗಿದೆ. ಸರ್ಕಾರ ನಿಗದಿಪಡಿಸಿದಂತೆ ಹಣ ಜಮೆಯಾಗಿಲ್ಲ. ಇದು ಯಾವ ಮಾನದಂಡ ಪ್ರಕಾರ? ಒಬ್ಬರಿಗೆ ಹೆಚ್ಚು, ಮತ್ತೊಬ್ಬರಿಗೆ ಕಡಿಮೆ ಪರಿಹಾರ ಯಾಕೆ ಅಂತ ಅರ್ಥ ಆಗ್ತಿಲ್ಲ. ಸರ್ಕಾರ ಘೋಷಿಸಿದಂತೆ ಯಾವುದೇ ರೈತರಿಗೆ ಪರಿಹಾರ ಸಿಗುತ್ತಿಲ್ಲʼ ಎಂದು ಔರಾದ್ ತಾಲೂಕಿನ ರೈತ ಗೋವಿಂದ ಇಂಗಳೆ ಬೇಸರ ವ್ಯಕ್ತಪಡಿಸಿದರು.
ʼಮಾಂಜ್ರಾ ನದಿ ತೀರದಲ್ಲಿ 1.28 ಎಕರೆ ಪ್ರದೇಶದಲ್ಲಿ ಸೋಯಾ ಬೆಳೆಯಲಾಗಿತ್ತು. ಪ್ರವಾಹದಿಂದ ಸಂಪೂರ್ಣ ಜಲಾವೃತಗೊಂಡು ಹಾಳಾಗಿದೆ. ನ.12ರಂದು ₹4,675 ಜಮೆಯಾಗಿದೆ. ಇನ್ನುಳಿದ ಇಬ್ಬರು ಸಹೋದರರಿಗೆ ಅಷ್ಟೇ ಜಮೀನು ಇದ್ದರೂ ಹೆಚ್ಚು ಕಡಿಮೆ ಜಮೆಯಾಗಿದೆ. ಒಬ್ಬರಿಗೆ ಇನ್ನೂ ಜಮೆಯಾಗಿಲ್ಲ. ಬೆಳೆ ಹಾನಿಯ ಮಾನದಂಡಗಳೇನು ಎಂಬುದನ್ನು ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿಕೊಡಬೇಕು. ಉಳಿದ ಹೆಚ್ಚುವರಿ ಪರಿಹಾರವೂ ಶೀಘ್ರದಲ್ಲಿ ಜಮೆ ಮಾಡಬೇಕುʼ ಎಂದು ರೈತ ಜಗದೀಶ್ವರ ಬಿರಾದರ್ ಹೇಳುತ್ತಾರೆ.
ಇದನ್ನೂ ಓದಿ : ಸರ್ಕಾರಿ ಶಾಲೆಗಳ ವಿಲೀನ ನೆಪದಲ್ಲಿ ಸರ್ಕಾರ ಲಾಭ ಮಾಡಿಕೊಡುತ್ತಿರುವುದು ಯಾರಿಗೆ?
ರೈತರ ಸಮಸ್ಯೆಯನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲಿ ಎಲ್ಲ ರೈತರಿಗೆ ಪರಿಹಾರ ವಿತರಣೆಗೆ ಮುಂದಾಗಬೇಕು. ಈಗಾಗಲೇ ಮಾತು ಕೊಟ್ಟಂತೆ ರೈತರ ಖಾತೆಗೆ ಪರಿಹಾರ ಜಮೆಯಾಗಿಲ್ಲ. ಹೀಗಾಗಿ ರೈತರು ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ. ಇನ್ನು ಸರ್ಕಾರದ ಮಾನದಂಡದಂತೆ ಹಣ ಜಮೆ ಆಗುತ್ತದೆಯೇ ಎಂಬುದು ರೈತರಿಗೆ ಉಂಟಾಗಿರುವ ದೊಡ್ಡ ಗೊಂದಲ!

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




