ಸಾಲಬಾಧೆ ಹಾಗೂ ಬೆಳೆ ನಷ್ಟದಿಂದ ಕಂಗಾಲಾದ ರೈತರೊಬ್ಬರು ತನ್ನ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಔರಾದ್ ತಾಲೂಕಿನ ಕೌಠಾ(ಬಿ) ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಶಾಪುರ ಗ್ರಾಮದ ಪವನ ಮಾರುತಿ ಆಲೂರೆ (25) ಎಂದು ತಿಳಿದು ಬಂದಿದೆ. ಮೃತರಿಗೆ ತಂದೆ-ತಾಯಿ, ಪತ್ನಿ ಹಾಗೂ ಆರು ತಿಂಗಳ ಪುತ್ರಿ ಇದ್ದಾರೆ.
ಮೃತರು ವ್ಯವಸಾಯ ಕೈಗೊಂಡಿದ್ದರು. ಕೃಷಿ ಚಟುವಟಿಕೆಗಾಗಿ ಕೌಠಾ(ಬಿ) ಗ್ರಾಮದ ಕೆನರಾ ಬ್ಯಾಂಕ್‌ನಲ್ಲಿ ಬಂಗಾರದ ಆಭರಣಗಳು ಅಡವಿಟ್ಟು ಸಾಲ ಪಡೆದಿದ್ದರು. ಅಲ್ಲದೆ ಇತರೆ ಬ್ಯಾಂಕ್‌ನಲ್ಲಿಯೂ ಸಾಲ ತೆಗೆದುಕೊಂಡಿದ್ದರು ಎನ್ನಲಾಗಿದೆ. ಈ ಬಾರಿ ಅತಿವೃಷ್ಟಿಯಿಂದ ನಿರೀಕ್ಷಿತ ಫಸಲು ಬಾರದೆ ನಷ್ಟಕ್ಕೊಳಗಾಗಿದ್ದರು. ಮುಂದೆ ಸಾಲ ತೀರಿಸುವುದು ಹೇಗೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಬೀದರ್ | ರೈತರ ತಾಳ್ಮೆ ಪರೀಕ್ಷಿಸಬೇಡಿ, ಕಬ್ಬಿಗೆ ₹3,100 ಬೆಲೆ ಕೊಡಿ : ಅರವಿಂದಕುಮಾರ್ ಅರಳಿ
ನ.10 ರಂದು ತಮ್ಮ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಗ್ರಾಮಸ್ಥರು ಕೂಡಲೇ ಅವರನ್ನು ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ 6 ದಿನ ಚಿಕಿತ್ಸೆ ನೀಡಲಾಗಿತ್ತು. ವೈದ್ಯರ ಸಲಹೆ ಮೇರೆಗೆ ಪುನಃ ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ನ.18 ರಂದು ಕೊನೆಯುಸಿರೆಳೆದಿದ್ದಾರೆ.
ಈ ಕುರಿತು ಸಂತಪೂರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.





