ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಆಕರ್ಷಕವಾಗಿ ಆಚರಿಸಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ʼಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಯಾವುದೇ ಲೋಪಗಳಿಲ್ಲದಂತೆ ಆಚರಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿರುತ್ತದೆʼ ಎಂದರು.
ʼಆಯಾ ಸಮಿತಿಗಳಿಗೆ ವಹಿಸಿದ ಕಾರ್ಯವನ್ನು ವಿಶೇಷ ಆಸಕ್ತಿಯಿಂದ ನಿರ್ವಹಿಸಬೇಕು. ಪ್ರತಿ ವರ್ಷದಂತೆ ಈ ವರ್ಷವು ಸಹ ಕನ್ನಡ ರಾಜ್ಯೋತ್ಸವದ ಹಿಂದಿನ ದಿನ ಸರ್ಕಾರಿ ಕಚೇರಿ ಹಾಗೂ ನಗರದ ವಿವಿಧ ವೃತ್ತಿಗಳಲ್ಲಿ ಸ್ವಚ್ಚತೆ, ವಿದ್ಯುತ್ ದೀಪಾಲಂಕಾರಕ್ಕೆ ಕ್ರಮ ಕೈಗೊಳ್ಳಬೇಕುʼ ಎಂದು ಹೇಳಿದರು.
ನವೆಂಬರ್ 1ರಂದು ಬೆಳಿಗ್ಗೆ 7.45 ಗಂಟೆಗೆ ಸರಕಾರಿ ಅರೆ ಸರ್ಕಾರಿ ಹಾಗೂ ಸಂಘ-ಸಂಸ್ಥೆಗಳ ಕಟ್ಟಡಗಳ ಮೇಲೆ ಕಡ್ಡಾಯವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಎಲ್ಲಾ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಎಲ್ಲಾ ಶಾಲಾ ಕಾಲೇಜು ಮಕ್ಕಳೊಂದಿಗೆ ಬೆಳಿಗ್ಗೆ 7.50ಕ್ಕೆ ಬಸವೇಶ್ವರ ವೃತ್ತದಲ್ಲಿ ಸೇರುವುದು. ನಂತರ ಬೆಳಿಗ್ಗೆ 8ಗಂಟೆಗೆ ತಾಯಿ ಭುವನೇಶ್ವರಿ ಅವರ ಭಾವಚಿತ್ರದೊಂದಿಗೆ ಮೆರವಣಿಗೆ ಪ್ರಾರಂಭಿಸಲಾಗುವುದು. ಈ ಮೆರವಣಿಗೆಯು ನಗರದ ಭಗತಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ, ಜನರಲ್ ಕರಿಯಪ್ಪ ವೃತ್ತದಿಂದ ನೇರವಾಗಿ ನಗರದ ನೆಹರು ಕ್ರೀಡಾಂಗಣ ಸೇರಲಿದೆ. ನಂತರ ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಧ್ವಜಾರೋಹಣ ಮಾಡಲಿದ್ದಾರೆʼ ಎಂದು ಹೇಳಿದರು.

ʼಕ್ರೀಡಾಂಗಣದಲ್ಲಿ ಪೊಲೀಸ್ ಇಲಾಖೆ, ಗೃಹರಕ್ಷಕ ದಳ ಇನ್ನಿತರ ಇಲಾಖೆ ವತಿಯಿಂದ ಪರೇಡ್ ನಡೆಸಲು ಕ್ರಮವಹಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ ಅವರು, ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು. ವಿವಿಧ ರಂಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪರಿಣಿತರಿಗೆ ಸನ್ಮಾನಿಸುವ ಕಾರ್ಯಕ್ರಮ ಜರುಗಲಿದೆ. ಅಂದು ಸಾಯಂಕಾಲ 5.30ರಿಂದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆʼ ಎಂದರು.
ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆ ಪದಾಧಿಕಾರಿಗಳಾದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಜನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ ಸೇರಿದಂತೆ ಪ್ರಮುಖರಾದ ಜಗನ್ನಾಥ ಹೆಬ್ಬಾಳೆ, ವೀರುಪಾಕ್ಷ ಗಾದಗಿ ಮತ್ತಿತರರು ಸಭೆಗೆ ಮಾಹಿತಿ ನೀಡಿದರು.
ಇದನ್ನೂ ಓದಿ : ಪ್ರಿಯಾಂಕ್ ಖರ್ಗೆಗೆ ಬೆದರಿಕೆ | ಆರ್‌ಎಸ್‌ಎಸ್ ಅಂಧ ಭಕ್ತರ ನಿಜ ಬಣ್ಣ ಬಯಲು ಮಾಡಿದೆ : ಸಚಿವ ಈಶ್ವರ ಖಂಡ್ರೆ
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಹೆಚ್ಚುವರಿ ಪೊಲೀಸ್ ಉಪವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಡಿಡಿಪಿಯು ಚಂದ್ರಕಾಂತ ಶಾಬಾದಕರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಘ-ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು.





