ರಾಜ್ಯದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ, ಧಾರವಾಡ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಮಹಾರಾಷ್ಟ್ರದಿಂದ ಕಬ್ಬು ಕಟಾವಿಗೆ ಆಗಮಿಸುವ ವಲಸೆ ಕಾರ್ಮಿಕರಿಗೆ ಹಾಗೂ ಕಾರ್ಮಿಕರ ಮಕ್ಕಳಿಗೆ ಮೂಲ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಲಾಯಿತು.
ಈ ಸಂಬಂಧ ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ ಹಾಗೂ ಮಹಾರಾಷ್ಟ್ರದ ಮರಾಠವಾಡ ಗ್ರಾಮೀಣ ವಿಕಾಸ ಸಂಸ್ಥೆಯ ಪದಾಧಿಕಾರಿಗಳು ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಪ್ರತಿ ವರ್ಷ ಮಹಾರಾಷ್ಟ್ರ ರಾಜ್ಯದ ಭೀಡ್ ಜಿಲ್ಲೆಯ ವಿವಿಧ ಗ್ರಾಮಗಳಿಂದ ಸುಮಾರು 7 ಸಾವಿರಕ್ಕೂ ಅಧಿಕ ಕುಟುಂಬಗಳು ಬೀದರ್, ಕಲಬುರಗಿ ಸೇರಿದಂತೆ ರಾಜ್ಯದ 8 ಜಿಲ್ಲೆಗಳಿಗೆ ಕಬ್ಬು ಕಟಾವು ಕೆಲಸಕ್ಕೆ ಆಗಮಿಸುತ್ತಾರೆ. ಅವರಲ್ಲಿ 6 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, ಮಕ್ಕಳು, ಬಾಣಂತಿಯರು ಇದ್ದಾರೆ. ಆದರೆ, ಅವರಿಗೆ ಆರೋಗ್ಯ, ಶಿಕ್ಷಣ, ಪೌಷ್ಟಿಕ ಆಹಾರ ಸೇರಿದಂತೆ ಮೌಲ ಸೌಕರ್ಯ ಸಿಗುತ್ತಿಲ್ಲ ಎಂದು ಹೇಳಿದರು.
ವಲಸಿಗ ಮಕ್ಕಳು, ಕೂಲಿಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಒದಗಿಸುವುದು, ಕಾರ್ಮಿಕರ ಶೋಷಣೆ ತಡೆಯಲು ವೇತನ ಖಚಿತಪಡಿಸುವುದು ಹಾಗೂ ಗುತ್ತಿಗೆದಾರರ ನೋಂದಣಿ ಕಡ್ಡಾಯ, ವಲಸೆ ಕಾರ್ಮಿಕರ ನೋಂದಣಿ, ವಲಸೆ ಕುಟುಂಬಗಳ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ, ಶಾಲಾ ದಾಖಲಾತಿ, ಆರೋಗ್ಯ ಮತ್ತು ಯೋಗಕ್ಷೇಮ ಸೇವೆ ಸೇರಿದಂತೆ ಇತರೆ ಸೌಲಭ್ಯ ಒದಗಿಸಬೇಕೆಂದು ಮನವಿ ಸಲ್ಲಿಸಿದರು.
ಇದನ್ನೂ ಓದಿ : ಬೀದರ್ | ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ಅರೆಬೆತ್ತಲೆ ಪ್ರತಿಭಟನೆ; ಚಾಟಿ ಏಟು ತಿಂದ ಶಾಸಕ ಶರಣು ಸಲಗರ
ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಸರಸ್ವತಿ ಹಾಗೂ ಬೀದರ್ ಜಿಲ್ಲೆಯ ಆಂದೋಲನದ ಸದಸ್ಯರಾದ ಅರಳು ಸಂಸ್ಥೆಯ ಮೇರಿಲ್, ಯೋಹಾನ್, ಸಹಯೋಗ ಸಂಸ್ಥೆಯ ಸಂದೀಪ್ ದೇವಕೆ, ಕಾರ್ಮೆಲ್ ಸೇವಾ ಟ್ರಸ್ಟ್ ಸಂಸ್ಥೆಯ ಸೂರ್ಯಕಾಂತ್ ಪಾಂಚಾಳ, ಆರ್.ಎಲ್.ಎಚ್.ಪಿ ಸಂಸ್ಥೆಯ ಸಂಪತ್ ಕಟ್ಟಿ, ಸರುಬಾಯಿ ದೊಡ್ಡಿ ಮತ್ತಿತರರು ಉಪಸ್ಥಿತರಿದ್ದರು.





