ಬೀದರ್ ನಗರದ ನೌಬಾದ್ ಚೌಳಿ ಕಮಾನ್ ಸಮೀಪದ ಖಾಲಿ ಜಾಗದಲ್ಲಿ ವಾಸಿಸುವ ಅಲೆಮಾರಿ ಜನಾಂಗದವರಿಗೆ ನಿವೇಶನ ನೀಡಿ ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಅಲೆಮಾರಿಗಳು ಪ್ರತಿಭಟನೆ ನಡೆಸಿದರು.
ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನ ಅಂಗವಾಗಿ ಬುಧವಾರ ವಿಶ್ವಕ್ರಾಂತಿ ದಿವ್ಯಪೀಠ ಸಂಘಟನೆ ನೇತ್ರತದಲ್ಲಿ ಅಲೆಮಾರಿ ಸಮುದಾಯದ ಮಹಿಳೆಯರು, ಮಕ್ಕಳು ನಗರದ ಮಡಿವಾಳ ಮಾಚಿದೇವರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಪ್ರತಿಭಟನೆ ನೇತ್ರತ್ವ ವಹಿಸಿದ ವಿಶ್ವಕ್ರಾಂತಿ ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಮಾತನಾಡಿ, ʼನೌಬಾದ್ ಸಮೀಪದ ಚೌಳಿ ಕಮಾನ್ ಹತ್ತಿರದ ಬೀದಿ ಬದಿಯಲ್ಲಿ ಸುಮಾರು 25 ವರ್ಷಗಳಿಂದ ತಾತ್ಕಾಲಿಕ ಗುಡಿಸಲು ನಿರ್ಮಿಸಿಕೊಂಡು ಸುಮಾರು 84 ಅಲೆಮಾರಿ ಕುಟುಂಬಗಳು ವಾಸಿಸುತ್ತಿವೆ. ಜಿಲ್ಲಾಡಳಿತ ಇಲ್ಲಿಯವರೆಗೆ ಜಾಗ ಕೊಡುವ ಭರವಸೆ ನೀಡುತ್ತಲ್ಲೇ ಇದೆ. ಹೊರತು ಶಾಶ್ವತವಾಗಿ ನಿವೇಶನ ಒದಗಿಸಲು ಕ್ರಮಕೈಗೊಂಡಿಲ್ಲʼ ಎಂದು ಬೇಸರ ವ್ಯಕ್ತಪಡಿಸಿದರು.
ʼಅಲೆಮಾರಿಗಳಿಗೆ ಶಾಶ್ವತ ನಿವೇಶನ ಮಂಜೂರು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿ ಕಳೆದ ಎರಡ್ಮೂರು ವರ್ಷಗಳಿಂದ ಪ್ರತಿಭಟನೆ, ಉಪವಾಸ ಸತ್ಯಾಗ್ರಹ ನಡೆಸಿ ಬೇಡಿಕೆ ಸಲ್ಲಿಸಿದರೂ ಜಿಲ್ಲಾಡಳಿತ ಸಕರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಅಲೆಮಾರಿಗಳು ಕನಿಷ್ಠ ಮೂಲ ಸೌಲಭ್ಯ ಇಲ್ಲದೆ ಬದುಕು ದೂಡಬೇಕಾದ ಪರಿಸ್ಥಿತಿ ಇದೆʼ ಎಂದರು.
ಬೀದರ್ ಹೊರವಲಯದ ಬಾಗೆ ಕಾರಂಜಾ ಗ್ರಾಮದ ಸರ್ವೆ ನಂ. 45/1ರಲ್ಲಿ ಜಾಗ ಗುರುತಿಸಿ ಅಲೆಮಾರಿ ಜನಾಂಗದವರಿಗೆ ನಿವೇಶನ ಮಂಜೂರಾತಿ ನೀಡಿ ಅಲ್ಲಿ ಗುಡಿಸಲು ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಸದರಿ ನಿವೇಶನವನ್ನು ಸಮೀಕ್ಷೆ ನಡೆಸಿ ಅಲೆಮಾರಿಗಳಿಗೆ ಹಸ್ತಾಂತರಿಸುವಂತೆ ತಹಸೀಲ್ದಾರ್ ಅವರಿಗೆ ಜಿಲ್ಲಾಡಳಿತ ಸೂಚಿಸಬೇಕುʼ ಎಂದು ಮನವಿ ಮಾಡಿದರು.
ಇದನ್ನೂ ಓದಿ : ಬಾಲಗಂಗಾಧರ ತಿಲಕರ ‘ಭಗವದ್ಗೀತಾವಾದ’ ಬಗ್ಗುಬಡಿದ ಬಾಬಾಸಾಹೇಬರು
2026ರ ಜನವರಿ 1ರ ಒಳಗಾಗಿ ಚೌಳಿ ಕಮಾನ್ ಸಮೀಪ ಜೋಪಡಿಗಳಲ್ಲಿ ವಾಸಿಸುವ ಅಲೆಮಾರಿ ಸಮುದಾಯಕ್ಕೆ ಬಾಗ ಕಾರಂಜಾ ಸಮೀಪದಲ್ಲಿ ನಿವೇಶನ ಒದಗಿಸಿ ಎಲ್ಲಾ ಕುಟುಂಬಗಳನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ತತ್‌ಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜನವರಿ 2ರಂದು ಜಿಲ್ಲಾಧಿಕಾರಗಳ ಕಚೇರಿ ಎದುರೆ ಆಮರಣ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ರೊಟ್ಟೆ ಎಚ್ಚರಿಸಿದರು.





