ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಸಂಘದ ನೇತೃತ್ವದಲ್ಲಿ ಬೀದರ್ ನಗರದಲ್ಲಿ ಧರಣಿ ನಡೆಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂರಕ್ಷಣಾ ಸಮಿತಿ ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ ಸಿಎಂ ಸಿದ್ದರಾಮಯ್ಯ ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.
ಮುಖಂಡರು ಮಾತನಾಡಿ, ‘ರಾಜ್ಯ ಸರ್ಕಾರದ ಕಠಿಣ ನಿಯಮಗಳಿಂದ ಕಳೆದ ಒಂದು ದಶಕದಲ್ಲಿ ಸಾವಿರಾರು ಕನ್ನಡ ಶಾಲೆಗಳ ಬಾಗಿಲು ಮುಚ್ಚಿವೆ. ಇವುಗಳಿಂದ ಕನ್ನಡ ಶಾಲೆಗಳು ಸೋತು ಸೊರಗುತ್ತಿವೆ. ನಮ್ಮ ಮಾತೃಭಾಷೆ ಉಳಿಯಬೇಕು. ಕನ್ನಡ ಉಳಿಯಬೇಕಾದರೆ ಕನ್ನಡ ಶಾಲೆಗಳ ಸಮಗ್ರ ವಿಕಾಸವಾಗಬೇಕು. ಇದು ಸರಕಾರದ ಮುಖ್ಯ ಧ್ಯೇಯವಾಗಬೇಕು, ಆದರೆ, ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಪ್ರತಿ ವರ್ಷ ಸಾವಿರಾರು ಕನ್ನಡ ಶಾಲೆಗಳು ಮುಚ್ಚುತ್ತಿರುವುದು ಕರ್ನಾಟಕದ ಮಟ್ಟಿಗೆ ಬಹಳ ಚಿಂತಾಜನಕ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಹಲವು ಖಾಸಗಿ ಕನ್ನಡ ಮಾಧ್ಯಮ ಶಾಲೆಗಳು ಸರ್ಕಾರದ ನೂರಾರು ನಿಯಮಗಳಿಂದ ಸೋತು ಸುಣ್ಣವಾಗಿವೆ. ಶಾಲೆಗಳನ್ನು ನಡೆಸಲಾಗದ ಪರಿಸ್ಥಿತಿಯಲ್ಲಿವೆ. ಈ ಪರಿಸ್ಥಿತಿಯಲ್ಲಿ ಕನ್ನಡ ಶಾಲೆಗಳ ಮಾರಣ ಹೋಮ ಆಗುತ್ತಿದೆ. ಸರ್ಕಾರ ಖಾಸಗಿ ಶಾಲಾ ಆಡಳಿತ ಮಂಡಳಿಯ ಬೇಡಿಕೆ ಈಡೇರಿಕೆಗೆ ಸ್ಪಂದಿಸಬೇಕು. ಕನ್ನಡ ಭಾಷೆ, ಸಂಸ್ಕೃತಿ ಉಳಿಸಲು ಸರ್ಕಾರ ಕನ್ನಡ ಶಾಲೆಗಳ ಸಬಲೀಕರಣ ಕಾಯ್ದೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಬೇಡಿಕೆಗಳೇನು :
1995ರ ನಂತರ ಪ್ರಾರಂಭಿಸಿರುವ ಅನುದಾನ ರಹಿತ ಖಾಸಗಿ ಶಾಲಾ-ಕಾಲೇಜುಗಳಿಗೆ ಅನುದಾನ ನೀಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನವೀಕರಣ ಪ್ರಕ್ರಿಯೆ ಸರಳಗೊಳಿಸಬೇಕು. ಬಡ ಮಕ್ಕಳ ದಾರಿ ದೀಪವಾದ ಆರ್‌ಟಿಇ ಖಾಸಗಿ ಶಾಲೆಗಳಲ್ಲಿ ಪುನಃ ಆರಂಭಿಸಬೇಕು. ಅನುದಾನಿತ ಶಾಲಾ–ಕಾಲೇಜುಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ರಾಜ್ಯದಾದ್ಯಂತ ಕೋಚಿಂಗ್ ಸೆಂಟರ್‌ಗಳನ್ನು ಬಂದ್ ಮಾಡಬೇಕು.
371(ಜೆ) ಅಡಿ ಸಿಗಬೇಕಾದ ಎಲ್ಲ ಸೌಕರ್ಯಗಳನ್ನು ಕಲ್ಪಿಸಬೇಕು. ಕನ್ನಡ ಶಾಲೆಗಳನ್ನು ರಕ್ಷಿಸಿ, ಕನ್ನಡವನ್ನು ಉಳಿಸಬೇಕು. ಕರ್ನಾಟಕ ಪಬ್ಲಿಕ್ ಶಾಲೆ ಹೆಸರಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಆಂಗ್ಲ ಮಾಧ್ಯಮಕ್ಕೆ ಬದಲಿಸುತ್ತಿರುವ ಪ್ರಕ್ರಿಯೆ ಕೈಬಿಡಬೇಕೆಂಬ ಪ್ರಮುಖ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.
ಕಲ್ಯಾಣ ಕರ್ನಾಟಕ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.





ಕನ್ನಡ ಸಂರಕ್ಷಣಾ ಸಮಿತಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ, ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ಮಣಗಿರೇ, ಜಿಲ್ಲಾ ಕಾರ್ಯದರ್ಶಿ ಗುರುನಾಥ ರೆಡ್ಡಿ, ಉಪಾಧ್ಯಕ್ಷ ಮಾಣಿಕಪ್ಪ ಗೋರನಾಳೆ, ಕಸಾಪ ಜಿಲ್ಲಾಧ್ಯಕ್ಷ ಸುರೇಶ್ ಚನ್ನಶೆಟ್ಟಿ ಸೇರಿದಂತೆ ಪ್ರಮುಖರಾದ ಸಂದೀಪ್ ಶೆಟಕಾರ, ಸೈಯದ್ ಮುದ್ದೆ, ಮುಹಮ್ಮದ್ ಫರ್ಹಾನ್, ಗಣಪತಿ ಸೋಲಪುರೆ , ಬಸವರಾಜ ಬಶೆಟ್ಟಿ, ಸಲೀಂ ಪಾಷಾ, ರವಿ ಸ್ವಾಮಿ ನಿರ್ಣಾ, ಸುಬ್ಬಣ್ಣ ಕರಕನಳ್ಳಿ, ಪೀಟರ್ ಚಿಟಗುಪ್ಪ, ವೀರಶೆಟ್ಟಿ ಗೌಸಾಪುರೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.





