ಕಬ್ಬಿಗೆ ₹3,100 ಬೆಲೆ ನಿಗದಿಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರ ತಾಳ್ಮೆ ಪರೀಕ್ಷಿಸಬೇಡಿ. ಕೂಡಲೇ ಬೆಲೆ ನಿಗದಿಪಡಿಸಿ ಕಬ್ಬು ಬೆಳೆಗಾರರ ಹಿತ ಕಾಪಾಡಬೇಕೆಂದು ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ ಅವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಈ ಹಿಂದೆ ರೈತರನ್ನು ಬೆಂಬಲಿಸಿ ತಮಗೆ ಪತ್ರ ಬರೆದು ಪ್ರತಿ ಟನ್ ಕಬ್ಬಿಗೆ ₹3,000 ನೀಡುವಂತೆ ಮನವಿ ಸಲ್ಲಿಸಿದ್ದೇನೆ. ಆದರೆ ತಮ್ಮ ಮಾತಿಗೆ ಸಕ್ಕರೆ ಕಾರ್ಖಾನೆ ಮಾಲಿಕರು ಬಗ್ಗುತ್ತಿಲ್ಲದಂತೆ ಕಾಣುತ್ತದೆ ಅಥವಾ ಯಾವುದಾದರು ಒತ್ತಡಕ್ಕೆ ಮಣಿಯುತ್ತಿರುವ ಅನುಮಾನ ಮೂಡುತ್ತಿದೆʼ ಎಂದು ಮಂಗಳವಾರ ಜಿಲ್ಲಾಧಿಕಾರಿಗಳ ಹೆಸರಿಗೆ ಬರೆದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರ ನೇತ್ರತ್ವ ರಾಜ್ಯ ಸರ್ಕಾರ ರೈತರ ಬೇಡಿಕೆಯಂತೆ 11.25 ರಿಕವರಿಗೆ ₹3,300 ಹಾಗೂ 10.25ರಷ್ಟು ಇರುವ ರಿಕವರಿಗೆ ₹3,200 ದರ ನಿಗದಿಪಡಿಸಿ ಆದೇಶ ಹೊರಡಿಸಿದೆ. ಯಾವುದೇ ಸಕ್ಕರೆ ಕಾರ್ಖಾನೆಯು 10 ರಿಕವರಿ ಇರುವ ಕಬ್ಬು ನುರಿಸುತ್ತದೆ. ಅದರಂತೆ ನಮ್ಮ ಜಿಲ್ಲೆಯ ರೈತರು ಪ್ರತಿ ಟನ್ ಕಬ್ಬಿಗೆ ₹3,100 ರೂಪಾಯಿ ಕೇಳುತ್ತಿರುವುದರಲ್ಲಿ ತಪ್ಪೆನಿದೆ. ಅದಕ್ಕೆ ನಾನು ₹3,100 ಬೇಡ ಕನಿಷ್ಠ ₹3,000 ಆದರೂ ಘೋಷಿಸಿ ಎಂದು ಮನವಿ ಮಾಡಿದೆ. ಆದರೆ ಜಿಲ್ಲಾಡಳಿತ ಸಕ್ಕರೆ ಕಾರ್ಖಾನೆಯವರ ಮನವೋಲಿಸಿ ರೈತರಿಗೆ ವೈಜ್ಞಾನಿಕ ದರ ಕೊಡಿಸುವಲ್ಲಿ ವಿಫಲರಾಗಿದೆʼ ಎಂದು ಹೇಳಿದರು.
ʼರೈತರು ಅನ್ನದಾತರು ಅವರಿಗೆ ಅನ್ಯಾಯ ಮಾಡುವುದು ಸರಿಯಲ್ಲ. ನಮ್ಮ ಜಿಲ್ಲೆ ರೈತರು ಮಗ್ಧರು, ಹೀಗಾಗಿ ಜಿಲ್ಲಾಡಳಿತಕ್ಕೆ ಸಹಕಾರ ಮಾಡುತ್ತಾರೆ. ಆದರೆ, ರೈತರನ್ನು ಬೀದಿಗೆ ತಳ್ಳುವುದು ಸರಿಯಾದ ಬೆಳವಣಿಗೆ ಅಲ್ಲ. ರೈತರ ಬೇಡಿಕೆಗೆ ಕಾರ್ಖಾನೆ ಮಾಲೀಕರು ಒಪ್ಪದಿದ್ದಲ್ಲಿ ಕಾರ್ಖಾನೆಗಳು ರೈತರಿಗೆ ಹಸ್ತಾಂತರಿಸಲಿ. ರೈತರನ್ನು ಮತ್ತೆ ರಸ್ತೆಗೆ ಇಳಿಯುವಂತೆ ಅವಕಾಶ ಮಾಡಿಕೊಡಬೇಡಿʼ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಬಿಹಾರ ಫಲಿತಾಂಶ ಕರ್ನಾಟಕದ ಕಾಂಗ್ರೆಸ್ಸಿಗರಿಗೆ ಪಾಠವಾಗಲಿದೆಯೇ?
ʼಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತ ಪರವಾಗಿದ್ದಾರೆ. ಅದನ್ನು ಮರೆಯದೆ ಮೂರನಾಲ್ಕು ಜನರ ಮಾತು ಕೇಳಿ ಲಕ್ಷಾಂತರ ರೈತರನ್ನು ದಮನ ಮಾಡಲು ಹೋಗಬೇಡಿ. ರೈತರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಕಾರ್ಖಾನೆಯವರಿಗೆ ಒಪ್ಪಿಸಿ ಕಬ್ಬಗೆ ₹3,100 ಬೆಲೆ ನಿಗದಿಪಡಿಸದಿದ್ದರೆ ನಾನು ಜಿಲ್ಲಾಡಳಿತ ಮತ್ತು ಕಾರ್ಖಾನೆಗಳ ವಿರುದ್ಧ ರೈತರೊಂದಿಗೆ ಧರಣಿ ನಡೆಸುವೆʼ ಎಂದು ಎಚ್ಚರಿಸಿದ್ದಾರೆ.





