ಔರಾದ್ ತಾಲೂಕಿನ ನಾಗಮಾರಪಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುಕ್ರವಾರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇತರೆ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ ಬುಧವಾರ ಗ್ರಾಮಸ್ಥರ ನೇತ್ರತ್ವದಲ್ಲಿ ವಿದ್ಯಾರ್ಥಿಗಳು ಗ್ರಾಮ ಪಂಚಾಯತ್ ಕಾರ್ಯಾಲಯ ಎದುರು ಪ್ರತಿಭಟನೆ ನಡೆಸಿದರು.
ಈ ಕುರಿತು ʼಈದಿನ.ಕಾಮ್ʼ ಗುರುವಾರ ʼಕುಡಿಯುವ ನೀರಿಗಾಗಿ ಗ್ರಾ.ಪಂ. ಕಚೇರಿ ಎದುರು ವಿದ್ಯಾರ್ಥಿಗಳಿಂದ ಪ್ರತಿಭಟನೆ’ ಎಂಬ ಶೀರ್ಷಿಕೆಯಡಿ ಮೊದಲು ಸುದ್ದಿ ಪ್ರಕಟಿಸಿ ಗಮನ ಸೆಳೆದಿತು.
ವರದಿಗೆ ಸ್ಪಂದಿಸಿದ ತಾಲೂಕು ಪಂಚಾಯತ್ ಇಒ ಕಿರಣ ಪಾಟೀಲ್ ಅವರು ಶುಕ್ರವಾರ ಅಧಿಕಾರಿಗಳೊಂದಿಗೆ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿರುವ ಸಮಸ್ಯೆಗಳನ್ನು ಪರಿಶೀಲಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಕಲಿಕೆ ಕುರಿತು ತಿಳಿಸಿದರು.

ತಾಲೂಕು ಪಂಚಾಯತ್ ಇಒ ಕಿರಣ ಪಾಟೀಲ್ ಅವರು ಈದಿನ.ಕಾಮ್ ಜೊತೆ ಮಾತನಾಡಿ, ʼಇಂದು ನಾಗಮಾರಪಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದೇನೆ. ಶಾಲೆಯಲ್ಲಿ ಜೆಜೆಎಂ ಅಡಿ ಅಳವಡಿಸಲಾದ ನಲ್ಲಿ ನಳ ಸಂಪರ್ಕ ಇದೆ. ಆದರೆ ಗ್ರಾಮಸ್ಥರ ಬೇಡಿಕೆಯಂತೆ ಶಾಲೆಗೆ ವಾರದೊಳಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೊಳವೆ ಬಾವಿ ಕೊರೆಸಲಾಗುವುದು. 15ನೇ ಹಣಕಾಸು ಯೋಜನೆಯಡಿ ಶಾಲೆಗೆ ಶೌಚಾಲಯ ಹಾಗೂ ಮನರೇಗಾ ಅಡಿ ಶಾಲೆಗೆ ಆಟದ ಮೈದಾನಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಅಗತ್ಯ ಇರುವ ಉಳಿದ ಮೂಲಸೌಕರ್ಯ ಒದಗಿಸಲಾಗುವುದುʼ ಎಂದು ಭರವಸೆ ನೀಡಿದರು.
ಇದನ್ನೂ ಓದಿ : ಬೀದರ್ | ಮಕ್ಕಳ ಸಹಾಯವಾಣಿ-1098 ಬರಹ ಕಡ್ಡಾಯ : ಡಿಸಿ ಶಿಲ್ಪಾ ಶರ್ಮಾ

ಈ ಸಂದರ್ಭದಲ್ಲಿ ನಾಗಮಾರಪಳ್ಳಿ ಗ್ರಾಮ ಪಂಚಾಯತ್ ಪಿಡಿಒ ಶರಣಪ್ಪಾ ನಾಗಲಗಿದ್ದೆ, ಗ್ರಾ.ಪಂ.ಅಧ್ಯಕ್ಷ ಸಂಗಾರೆಡ್ಡಿ ಸೇರಿದಂತೆ ಪಂಚಾಯತ್ ಸದಸ್ಯರು, ಶಿಕ್ಷಕರು, ಗ್ರಾಮಸ್ಥರು ಮತ್ತಿತರರಿದ್ದರು.





