ಶಿಕ್ಷಕರಾದವರೂ ವಿನೂತನ ಪ್ರಯೋಗಳನ್ನು ಅನುಸರಿಸಿ ಮಕ್ಕಳಲ್ಲಿ ಕಲಿಕಾಸಕ್ತಿ ಹುಟ್ಟಿಸುವ ಪ್ರಯತ್ನ ಮಾಡಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಶಶಿಕಾಂತ ಉಡಿಕೇರಿ ಹೇಳಿದರು.
ಭಾಲ್ಕಿ ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಅನುಭವ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಕಲಿಕಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ʼಮಕ್ಕಳ ಮನಸ್ಸು ಹಸಿ ಮಣ್ಣು ಇದ್ದಂತೆ ಬೇಕಾದ ಮೂರ್ತಿ ತೆಗೆಯಬಹುದು. ಅಂತಹ ಮುಗ್ಧ ಮನಸ್ಸು ಹೊಂದಿರುವ ಮಕ್ಕಳಿಗೆ ಬಾಲ್ಯದಿಂದಲೇ ಮೌಲ್ಯಾಧಾರಿತ ಶಿಕ್ಷಣ ಕಲ್ಪಿಸಿದರೇ ಮುಂದೆ ಅವರು ದೇಶದ ಉತ್ತಮ ಪ್ರಜೆಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆʼ ಎಂದರು.
ʼಇಂದಿನ ಒತ್ತಡದ ವಿವಿಧ ಚಟುವಟಿಕೆಗಳ ಮಧ್ಯೆ ಶಿಕ್ಷಣದ ಮೌಲ್ಯ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಪ್ರಾಥಮಿಕ ಹಂತದ ಶಿಕ್ಷಣ ಮಕ್ಕಳ ಭವಿಷ್ಯ ನಿರ್ಧರಿಸುತ್ತದೆ. ಹಾಗಾಗಿ ಶಿಕ್ಷಕರು ಹೊಸತನ್ನು ತಿಳಿದುಕೊಂಡು ಮಕ್ಕಳ ಬುದ್ಧಿಮಟ್ಟಕ್ಕೆ ತಕ್ಕಂತೆ ಬೋಧಿಸುವ ಕೆಲಸವಾದರೇ ಮಾತ್ರ ಮಕ್ಕಳಲ್ಲಿ ಕಲಿಯುವ ಆಸಕ್ತಿ ಹೆಚ್ಚುತ್ತದೆ. ರಾಷ್ಟ್ರೀಯ ಹಬ್ಬಗಳ ಮಹತ್ವ, ಮಹಾತ್ಮರ ಜೀವನ ಚರಿತ್ರೆ ಹೇಳಿಕೊಡುವುದರ ಜತೆಗೆ ಕ್ರೀಡೆಗೆ ಹೆಚ್ಚಿನ ಆಸಕ್ತಿ ನೀಡಿದರೇ ಮಕ್ಕಳು ಶಿಕ್ಷಣ ಕಲಿಕೆಗೆ ಹೆಚ್ಚು ಉತ್ಸಾಹ ತೋರುತ್ತಾರೆʼ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ʼಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ದೃಷ್ಟಿದೋಷ ಹೆಚ್ಚುತ್ತಿದೆ. ಹಾಗಾಗಿ ಮಕ್ಕಳನ್ನು ಮೊಬೈಲ್‌ನಿಂದ ಆದಷ್ಟು ದೂರ ಇಡುವ ಕೆಲಸ ನಮ್ಮೆಲ್ಲರ. ಇಂದಿನ ಮಕ್ಕಳು ಸಾಕಷ್ಟು ಬುದ್ಧಿವಂತರಿದ್ದಾರೆ. ಆದರೆ ಹೃದಯ ವೈಶ್ಯಾಲತೆ ಕಡಿಮೆ ಆಗುತ್ತಿದೆ. ಶಿಕ್ಷಕರು ಕಾಲಕ್ಕೆ ತಕ್ಕಂತೆ ಬೋಧನಾ ಪದ್ಧತಿ ಅನುಸರಿಸಿ ಮಕ್ಕಳಿಗೆ ಜೀವನದ ಪಾಠ ಹೇಳಿಕೊಡುವ ಕೆಲಸ ಮಾಡಬೇಕುʼ ಎಂದು ನುಡಿದರು.
ಪ್ರಗತಿಪರ ಚಿಂತಕ ಸಿದ್ದಪ್ಪ ಮೂಲಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕಿರಣ ಗಾಜನೂರು ಅವರು ದಿಕ್ಸೂಚಿ ಮಾತುಗಳನ್ನು ಹೇಳಿದರು.
ಕಲಬುರಗಿ ಡಾ.ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ಅರುಣ ಜೋಳದ ಕೂಡ್ಲಗಿ, ಡಾ.ಜ್ಯೋತಿ, ಡಾ.ದೇವಿಕಾ
ವಿಷಯವಾರು ಸಂವಾದ ನಡೆಸಿ ಕೊಟ್ಟರು. ಜ್ಯೋತ್ನಾ ಅಂಬೇವಾಡ್ಕರ್ ಯೋಗ ಶಿಕ್ಷಣ ಹೇಳಿಕೊಟ್ಟರು.
ಇದನ್ನೂ ಓದಿ : ಬೀದರ್ | ರೈತರ ಹೋರಾಟಕ್ಕೆ ಜಯ : ಟನ್ ಕಬ್ಬಿಗೆ ₹2,950 ಬೆಲೆ ನಿಗದಿ : 8 ದಿನಗಳ ಧರಣಿ ಅಂತ್ಯ
ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೆಟ್ ಸದಸ್ಯ ರಾಘವೇಂದ್ರ ಭೈರಪ್ಪ, ಅನುದಾನಿತ ಪದವಿಪೂರ್ವ ಕಾಲೇಜುಗಳ ನೌಕರರ ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್, ಆಡಳಿತಾಧಿಕಾರಿ ಮೋಹನ ರೆಡ್ಡಿ ಸೇರಿದಂತೆ ಹಲವರು ಇದ್ದರು. ಸವಿತಾ ಭೂರೆ, ಸುಧಾ ನಾಯಕ ವಚನ ಗಾಯನ ನಡೆಸಿ ಕೊಟ್ಟರು. ಪ್ರಾಚಾರ್ಯ ಬಸವರಾಜ ಮೊಳಕೀರೆ ಸ್ವಾಗತಿಸಿದರು. ಮಧುಕರ ಗಾಂವಕರ್ ನಿರೂಪಿಸಿದರು. ಬಾಲಾಜಿ ವಲ್ಲೂರೆ ವಂದಿಸಿದರು.





