ಅನ್ಯ ರಾಜ್ಯಗಳಿಂದ ಕಬ್ಬು ಕಡಿಯುವ ಕೆಲಸಕ್ಕೆ ವಲಸೆ ಬರುವ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಬಾಲ್ಯವಿವಾಹ ತಡೆಗಟ್ಟುವ ಸಮನ್ವಯ ಮತ್ತು ಪರಿಶೀಲನೆ ಸಮಿತಿ ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಮತ್ತು ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ʼಕಬ್ಬು ಕಟಾವು ಮಾಡಲು ಅನ್ಯ ರಾಜ್ಯಗಳಿಂದ ಮತ್ತು ಜಿಲ್ಲೆಗಳಿಂದ ಕಾರ್ಮಿಕರು ತಮ್ಮ ಕುಟುಂಬದೊಂದಿಗೆ ಜಿಲ್ಲೆಗೆ ಬರುತ್ತಾರೆ. ಅವರ ಜೊತೆಗೆ ಮಕ್ಕಳು ಕೂಡ ಬರುವುದರಿಂದ ಅವರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ಹಕ್ಕುಗಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ, ಹತ್ತಿರದ ಗ್ರಾಮ ಪಂಚಾಯಿತ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರು ಸಹಯೋಗದೊಂದಿಗೆ ಶಿಕ್ಷಣ ಮತ್ತು ಮೂಲಭೂತ ಸೌಕರ್ಯ ಒದಗಿಸುವ ಕಾರ್ಯ ಮಾಡಬೇಕು ಎಂದರು.
ʼಹೊರ ರಾಜ್ಯಗಳಿಂದ ಕಾರ್ಮಿಕರನ್ನು ಕರೆ ತರುವ ಗುತ್ತಿಗೆದಾರರು ಮತ್ತು ವಲಸೆ ಕಾರ್ಮಿಕರು ಕಡ್ಡಾಯವಾಗಿ ನೋದಣಿ ಆಗಬೇಕು. ಇದರಿಂದಾಗಿ ವಲಸೆ ಬರುವ ಕಾರ್ಮಿಕರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಬಹುದು. ಕಾರ್ಮಿಕರ ಮಕ್ಕಳಿಗೆ ಅಂಗನವಾಡಿ ಕೇಂದ್ರ ಮತ್ತು ಹತ್ತಿರ ಶಾಲೆಗಳಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ ಮಾಡಲಾಗುವುದು. ಮಹಿಳಾ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿರುವ ಕಾರ್ಖಾನೆಗಳಲ್ಲಿ ಮಕ್ಕಳ ಆರೈಕೆ ಕೇಂದ್ರ ಸ್ಥಾಪಿಸಬೇಕುʼ ಎಂದರು.
ʼಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯಾಗಲು ಎಲ್ಲಾ ಇಲಾಖೆಗಳ ಸಹಭಾಗಿತ್ವ ಬಹಳ ಮುಖ್ಯವಾಗಿದೆ. ಇಲಾಖೆಯ ಅಧಿಕಾರಿಗಳು ಕೂಡ ಬಾಲ್ಯವಿವಾಹ ನಡೆಯುತ್ತಿರುವುದು ಕಂಡು ಬಂದಲ್ಲಿ ತಕ್ಷಣ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ, ಬಾಲ್ಯವಿವಾಹ ತಡೆಗಟ್ಟುವ ಕಾರ್ಯಗಳು ಮಾಡಬೇಕುʼ ಎಂದರು.
ಜಿಲ್ಲೆಯ ಎಲ್ಲಾ ಜಿಲ್ಲಾ, ತಾಲ್ಲೂಕು, ಹೋಬಳಿ, ಗ್ರಾಮ ಪಂಚಾಯಿತಿ ಮತ್ತು ಗ್ರಾಮ ಮಟ್ಟದ ಸರ್ಕಾರಿ ಕಛೇರಿ, ಅರೆ ಸರ್ಕಾರಿ, ಶೈಕ್ಷಣಿಕ ಸಂಸ್ಥೆಗಳು, ಖಾಸಗಿ ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ಎಲ್ಲಾ ಕಟ್ಟಡಗಳ ಮೇಲೆ ಮಕ್ಕಳ ಸಹಾಯವಾಣಿ 1098 ನಾಮ ಫಲಕ ಅಳವಡಿಕೆ ಕಡ್ಡಾಯವಾಗಿದ್ದು, ಈ ಬಗ್ಗೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ : ಬೀದರ್ | ಟನ್ ಕಬ್ಬಿಗೆ ₹3,100 ಬೆಲೆ ಕೊಡಲೇಬೇಕು : ಪಟ್ಟು ಹಿಡಿದ ರೈತರು, ಧರಣಿ ಆರಂಭ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಧರ ಎಂ.ಎಸ್., ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‌ಎಲ್‌ಎಚ್‌ಪಿ) ಮೈಸೂರು ಹಾಗೂ ರಾಜ್ಯ ಸಂಚಾಲಕರು ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂಧೋಲನ, ಕರ್ನಾಟಕ ನಿರ್ದೇಶಕರಾದ ಸರಸ್ವತಿ, ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ, ರಾಜ್ಯ ಸಂಯೋಜಕ ಸಂಪತ್ ಕಟ್ಟಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೂಪಾ ಕೋಟೆಗೌಡರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸೀಮಪ್ಪಾ, ಮರಾಠವಾಡ ಗ್ರಾಮೀಣ ವಿಕಾಸ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಅಶ್ವಜಿತ್ ಜಾಧವ್, ಮೌಲ್ಯಮಾಪಕರು ಅನುಪ್ ಮೋರೆ, ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.





