ಬೀದರ್ ಜಿಲ್ಲೆಯಲ್ಲಿ ಅಮಾನವೀಯ ಘಟನೆವೊಂದು ಇಡೀ ನಾಗರೀಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ವಿವಾಹೇತರ ಸಂಬಂಧ ಹೊಂದಿದ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ನೆಲದ ಮೇಲೆ ಮಲಗಿಸಿ ಕೋಲಿನಿಂದ ತೀವ್ರವಾಗಿ ಥಳಿಸುತ್ತಿರುವ ಭಯಾನಕ ದೃಶ್ಯ ವಿಡಿಯೊ ವೈರಲ್ ಆಗಿದೆ.
ಔರಾದ್ ತಾಲೂಕಿನ ಗಡಿ ಗ್ರಾಮ ನಾಗನಪಲ್ಲಿ ಎಂಬ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. ಅದೇ ಗ್ರಾಮದ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಶಂಕೆ ಹಿನ್ನೆಲೆ ಈ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.
ಏನಿದು ಘಟನೆ :
ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ದೆಗಲೂರ ತಾಲೂಕಿನ ಗೌಣಗಾಂವ್ ಗ್ರಾಮದ ವಿಷ್ಣು ಪಾಂಚಾಳ (29) ಎಂಬ ಯುವಕ ತನ್ನ ತಾಯಿ, ಅಣ್ಣನೊಂದಿಗೆ ತೆಲಂಗಾಣದ ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದನು. ಅದೇ ಬಡವಾಣೆಯಲ್ಲಿ ವಿವಾಹಿತ ಮಹಿಳೆಯೊಬ್ಬರು ವಿಷ್ಣುಗೆ ಪರಿಚಯಳಾಗಿ ಸಂಬಂಧ ಬೆಳೆದಿತು, ಬಳಿಕ ಇಬ್ಬರು ಒಂದು ವರ್ಷ ಬೇರೆಡೆ ಒಟ್ಟಿಗೆ ಸಂಸಾರ ನಡೆಸಿದರು. ಈ ವಿಷಯವನ್ನು ಮಹಿಳೆಯ ತಂದೆ ಹಾಗೂ ಸಹೋದರನಿಗೆ ತಿಳಿದಿತ್ತು.
ಕಳೆದ ಮೂರು ತಿಂಗಳ ಹಿಂದೆ ಮಹಿಳೆಯು ವಿಷ್ಣು ಅವರನ್ನು ಬಿಟ್ಟು ತನ್ನ ತವರೂರು ಆದ ನಾಗನಪಲ್ಲಿ ಗ್ರಾಮಕ್ಕೆ ಬಂದು ನೆಲೆಸಿದ್ದಳು. ದೀಪಾವಳಿ ಹಬ್ಬದಂದು (ಅ.21) ಸ್ನೇಹಿತರ ಜೊತೆ ವಿಷ್ಣು ನಾಗನಪಲ್ಲಿ ಗ್ರಾಮಕ್ಕೆ ಹೋಗಿದ್ದ. ಈ ವೇಳೆ ಮಹಿಳೆಯ ತಂದೆ ಹಾಗೂ ಸಹೋದರ ಇಬ್ಬರೂ ನೋಡಿ, ವಿಷ್ಣನನ್ನು ಹಿಡಿದು ಮನಬಂದಂತೆ ಕೋಲಿನಿಂದ ಥಳಿಸಿದ್ದಾರೆ.
ʼಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಚಿಂತಾಕಿ ಠಾಣೆಯ ಪೊಲೀಸರು ಧಾವಿಸಿ ಗಾಯಗೊಂಡ ವ್ಯಕ್ತಿಯನ್ನು ಚಿಂತಾಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಔರಾದ್ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ, ನಂತರ ಹೈದರಾಬಾದ್‌ನ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು. ಆದರೆ ಅ.22ರಂದು ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದಾನೆʼ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ ಜಿಲ್ಲೆಗೆ 14 ಕೆಪಿಎಸ್ ಶಾಲೆ ಮಂಜೂರು
ʼನನ್ನ ಮಗನನ್ನು ಕೊಲೆ ಮಾಡುವ ಉದ್ದೇಶದಿಂದ ಮಹಿಳೆಯ ತಂದೆ ಅಶೋಕ್ ಹಾಗೂ ಸಹೋದರ ಗಜಾನನ ಸೇರಿ ಹಲ್ಲೆ ನಡೆಸಿದ್ದಾರೆʼ ಎಂದು ಆರೋಪಿಸಿ ನೀಡಿದ ದೂರಿನ ಮೇರೆಗೆ ಚಿಂತಾಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದಾರೆ.





