ಈ ಬಾರಿಯ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಮುಂಗಾರು ಹಂಗಾಮಿನ ಬೆಳೆ ಸಂಪೂರ್ಣ ಹಾಳಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಸರ್ಕಾರ ಘೋಷಿಸಿದಂತೆ ಬೆಳೆ ಹಾನಿ ಪರಿಹಾರ ಜಮೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಬಸವಕಲ್ಯಾಣ ತಾಲೂಕು ಘಟಕದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಸೀಲ್ದಾರ್ ಡಾ.ರಮೇಶ ಅವರಿಗೆ ಸಲ್ಲಿಸಿದರು.
ʼಅ.30 ರಿಂದ ಜಿಲ್ಲೆಯ ಎಲ್ಲ ರೈತರಿಗೆ ಬೆಳೆ ಹಾನಿ ಪರಿಹಾರ ಜಮೆ ಮಾಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿತು. ಆದರೆ, ಇಲ್ಲಿಯವರೆಗೆ ಹುಮನಾಬಾದ್, ಬಸವಕಲ್ಯಾಣ, ಹುಲಸೂರ ಹಾಗೂ ಬೀದರ್ ತಾಲೂಕಿನ ರೈತರಿಗೆ ಪರಿಹಾರ ಹಣ ಜಮೆಯಾಗಿಲ್ಲ. ಜಿಲ್ಲಾಡಳಿತ ತಕ್ಷಣ ಪರಿಹಾರ ಹಣ ರೈತರ ಖಾತೆಗೆ ಪಾವತಿಸಬೇಕುʼ ಎಂದು ಒತ್ತಾಯಿಸಿದ್ದಾರೆ.
ಬೆಳೆ ಹಾನಿಯಾದ ಪ್ರತಿ ಹೆಕ್ಟೇರ್‌ಗೆ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ನಿಯಮಾವಳಿಯಂತೆ ಪರಿಹಾರ ಘೋಷಿಸಲಾಗಿದೆ. ಆದರೆ, ಜಿಲ್ಲೆಯ ಕೆಲ ತಾಲೂಕಿನ ರೈತರಿಗೆ ಮಾತ್ರ ಹಣ ಜಮೆಯಾಗಿದೆ. ಯಾವುದೇ ತಾರತಮ್ಯ ಮಾಡದೆ ಎಲ್ಲ ರೈತರಿಗೂ ಹಣ ನೀಡಬೇಕು. ಜಿಲ್ಲೆಯಲ್ಲಿ ಕಬ್ಬಿಗೆ 2950 ಬೆಲೆ ನಿಗದಿ ಮಾಡಲಾಗಿದೆ. ಇದು ನ್ಯಾಯಯುತ ಬೆಲೆ ಅಲ್ಲ. ಹೀಗಾಗಿ ಕನಿಷ್ಠ ಪ್ರತಿ ಟನ್‌ಗೆ 3,000 ದರ ನೀಡಬೇಕು. ರೈತರ ಜಮೀನಿಗೆ ರಾತ್ರಿ ವೇಳೆ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : ಬೀದರ್ | ಧರ್ಮದಾರಿತ ದೇಶ ವಿಭಜನೆ ಸಲ್ಲದು: ಮಾವಳ್ಳಿ ಶಂಕರ
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷಕುಮಾರ ಗುದಗೆ, ತಾಲೂಕಾಧ್ಯಕ್ಷ ರುದ್ರಯ್ಯಾ ಸ್ವಾಮಿ, ಉಪಾಧ್ಯಕ್ಷ ಬಾಬು ಗೌರ, ತಾಲೂಕು ಪ್ರಧಾನ ಕಾರ್ಯದರ್ಶಿ ಅಣವೀರ ಬಿರಾದರ್ ಸೇರಿದಂತೆ ವೀರಾರೆಡ್ಡಿ ಕಿಟ್ಟಾ, ಕಾಶಿನಾಥ ಬಿರಾದರ್, ರಾಜಕುಮಾರ ಹೊಳ್ಳೆ, ಕಲ್ಲಪ್ಪಾ ಗೌದೆ, ಬಾಬುರಾವ್, ಸೂರ್ಯಕಾಂತ ಮದಕಟ್ಟೆ ಸೇರಿದಂತೆ ಮತ್ತಿತರರಿದ್ದರು.






