1995 ರಿಂದ 2005ರವರೆಗಿನ ಅನುದಾನ ರಹಿತ ಖಾಸಗಿ ಶಾಲಾ, ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಲು ಸರ್ಕಾರ ಆದಷ್ಟು ಬೇಗ ಕ್ರಮ ಕೈಗೊಳ್ಳಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಬೆಳಗಾವಿಯ ಸುವರ್ಣ ಸೌಧದ ಮುಂಭಾಗದಲ್ಲಿ ಬುಧವಾರ ಧರಣಿ ನಡೆಸಿದ ಅಖಿಲ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ ಆಶ್ವಾಸನೆ ನೀಡಿದ ಅವರು, ʼಅನುದಾನ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಲಾಗುವುದು. ರಾಜ್ಯ ಬಜೆಟ್‍ನಲ್ಲಿ ಇದಕ್ಕಾಗಿ ಅನುದಾನ ತೆಗೆದಿರಿಸಲಾಗುವುದುʼ ಎಂದು ಭರವಸೆ ನೀಡಿದರು.
ʼಶಾಲಾ, ಕಾಲೇಜುಗಳ ಮಾನ್ಯತೆ ನವೀಕರಣ ಪ್ರಕ್ರಿಯೆ ಸರಳೀಕರಿಸುವ ಸಂಬಂಧ ಈಗಾಗಲೇ ತ್ರಿಸದಸ್ಯ ಸಮಿತಿ ರಚಿಸಲಾಗಿದೆ. ಸಮಿತಿ ಅಧ್ಯಯನ ನಡೆಸಿ, ವರದಿ ಸಲ್ಲಿಸಿದ ನಂತರ ಅದರ ಆಧಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಫಲಿತಾಂಶ ಹೆಚ್ಚಳದಲ್ಲಿ ಸಂಸ್ಥೆಗಳ ಬೋಧಕ ಸಿಬ್ಬಂದಿ ಪಾತ್ರ ಬಹಳ ಮಹತ್ವದ್ದಾಗಿದೆʼ ಎಂದು ತಿಳಿಸಿದರು.

ಇದಕ್ಕೂ ಮುನ್ನ ಸಂಘದ ರಾಜ್ಯ ಅಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಅವರು 1995ರ ನಂತರದ ಅನುದಾನ ರಹಿತ ಶಾಲಾ, ಕಾಲೇಜುಗಳನ್ನು ಕೂಡಲೇ ಅನುದಾನಕ್ಕೆ ಒಳಪಡಿಸಬೇಕು ಹಾಗೂ ಮಾನ್ಯತೆ ನವೀಕರಣ ಸರಳಗೊಳಿಸಬೇಕು ಎಂದು ಬೇಡಿಕೆ ಮಂಡಿಸಿದರು.
ʼಸಚಿವ ಈಶ್ವರ ಖಂಡ್ರೆ ಅವರು ಖಾಸಗಿ ಶಿಕ್ಷಣ ಸಂಸ್ಥೆಗಳ ಬೇಡಿಕೆ ಈಡೇರಿಸುವ ದಿಸೆಯಲ್ಲಿ ವಿಶೇಷ ಮುತುವರ್ಜಿ ವಹಿಸಿರುವುದು ಸಂತಸ ಉಂಟು ಮಾಡಿದೆ. ಸಚಿವದ್ವಯರ ಭರವಸೆಯಿಂದ ಶೀಘ್ರವೇ ಅನುದಾನಕ್ಕೆ ಒಳಪಡಿಸುವ ಹಾಗೂ ಮಾನ್ಯತೆ ಸರಳೀಕರಿಸುವ ಪ್ರಮುಖ ಬೇಡಿಕೆಗಳು ಈಡೇರುವ ಆಶಾಭಾವ ಮೂಡಿದೆʼ ಎಂದು ತಿಳಿಸಿದರು.
ಬೃಹತ್ ಧರಣಿಯಲ್ಲಿ ರಾಜ್ಯದ ಮೂಲೆ, ಮೂಲೆಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ಪಲ್ಸ್ ಪೋಲಿಯೋ ಅಭಿಯಾನ | ಲಸಿಕೆಯಿಂದ ಮಗು ವಂಚಿತವಾಗದಂತೆ ಕ್ರಮವಹಿಸಿ : ಡಿಸಿ ಶಿಲ್ಪಾ ಶರ್ಮಾ
ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಪುಟ್ಟಣ್ಣ, ಸಂಕನೂರ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಿಂಗಲೆ ಲಕ್ಷ್ಮಣರಾವ್ ಪ್ರಮುಖರಾದ ಎಸ್.ಎಸ್.ಮಠ, ಜೆ.ಸಿ.ಶಿವಪ್ಪ, ಸಂಘದ ರಾಜ್ಯ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಲೋನಿ, ಉಪಾಧ್ಯಕ್ಷರಾದ ಎಂ. ಮೌಲಾಲಿ, ಡಿ.ಬಿ. ನದಾಫ್, ಕಾರ್ಯದರ್ಶಿ ಕೆ. ಗುರುನಾಥ ರೆಡ್ಡಿ, ಸಹ ಕಾರ್ಯದರ್ಶಿ ಅನಿಲ್ ಜಾಧವ್ ಮತ್ತಿತರರು ಇದ್ದರು.





