ಶಾಲಾ ಮಕ್ಕಳಿಗೆ ಸರಿಯಾಗಿ ಬೋಧನೆ ಮಾಡದೇ ಇರುವುದು ಹಾಗೂ ಸರ್ಕಾರಿ ನೌಕರರಲ್ಲದ ರೀತಿಯಲ್ಲಿ ವರ್ತಿಸಿರುವುದು ಸಾಬೀತಾದ ಹಿನ್ನೆಲೆ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕಿಯೊಬ್ಬರನ್ನು ಅಮಾನತು ಮಾಡಲಾಗಿದೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೌರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಸಮಾಜ ಶಿಕ್ಷಕಿ ಶ್ರೀದೇವಿ ಚಿರಡೆ ಎಂಬುವರನ್ನು ಅಮಾನತು ಮಾಡಿ ಶಾಲಾ ಶಿಕ್ಷಣ ಇಲಾಖೆ (ಆಡಳಿತ) ಉಪನಿರ್ದೇಶಕ ಸುರೇಶ ಹೆಚ್.ಜಿ. ಅವರು ಆದೇಶಿಸಿದ್ದಾರೆ.
ಶಿಕ್ಷಕಿ ಶ್ರೀದೇವಿ ಅವರು ಕಳೆದ 12 ವರ್ಷಗಳಿಂದ ಸದರಿ ಶಾಲೆಯಲ್ಲಿ ಸಮಾಜ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆಗೆಸೇರಿದ ಬಳಿಕ ಅವರು ಬೋಧಿಸುವ ಪಾಠ ಯಾವ ಮಕ್ಕಳಿಗೂ ಅರ್ಥವಾಗುತ್ತಿಲ್ಲ. ಇವರ ಬೋಧನೆ ಬಗ್ಗೆ ಗ್ರಾಮಸ್ಥರು ಅನೇಕ ಸಲ ಶಾಲಾ ಮುಖ್ಯಗುರು, ಮೇಲಾಧಿಕಾರಿಗಳ ಗಮನಕ್ಕೆ ತಂದು ದೂರು ನೀಡಿದರೂ ಯಾವುದೇ ರೀತಿಯ ಬದಲಾವಣೆ ಆಗುತ್ತಿಲ್ಲ ಎಂದು ಆರೋಪಿಸಿ ಅದೇ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶಾಂತವೀರಯ್ಯ ಕೋಮಾರೆ ಅವರು ಡಿಡಿಪಿಐ ಅವರಿಗೆ ದೂರು ಸಲ್ಲಿಸಿದ್ದರು.
‘ಗ್ರಾಮಸ್ಥರಿಗೆ ಮತ್ತು ಇಲಾಖೆಯ ಅಧಿಕಾರಿಗಳಿಗೆ ಯಾವುದೇ ಕಿಮತ್ತು ಕೊಡದೆ ಮನಬಂದಂತೆ ಹಿಯಾಳಿಸಿ, ಬೈದು ಅವಮಾನಿಸುತ್ತಾರೆ. ಸದರಿ ಶಿಕ್ಷಕಿಯನ್ನು ಅಮಾನತುಗೊಳಿಸಿ ಶಾಲೆಯ ಮಕ್ಕಳ ಭವಿಷ್ಯ ಕಾಪಾಡಬೇಕೆಂದು ಅವರು ದೂರು ನೀಡಿದರು. ದೂರಿನ ಅನ್ವಯ ಬಸವಕಲ್ಯಾಣ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೇಮಿಸಿ ಸತ್ಯಾಸತ್ಯತೆ ಕುರಿತು ಪರಿಶೀಲಿಸಿ ವರದಿ ನೀಡುವಂತೆ ತಿಳಿಸಲಾಗಿತ್ತು.
ಇದನ್ನೂ ಓದಿ : ಬೀದರ್ | ಲಿಂಗತ್ವ ಅಲ್ಪಸಂಖ್ಯಾತ ಯುವತಿ ಮೇಲೆ ಹಲ್ಲೆ : ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಬಿಇಒ ಅವರು ವಿಚಾರಣೆ ನಡೆಸಿ, ಸದರಿ ಶಿಕ್ಷಕಿ ಅವರು ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಗಳು ಉಲ್ಲಂಘಿಸಿ ಸರ್ಕಾರಿ ನೌಕರರಲ್ಲದ ರೀತಿಯಲ್ಲಿ ವರ್ತಿಸಿರುವುದು ಸಾಬೀತಾದ ಹಿನ್ನೆಲೆ ವಿಚಾರಣೆ ಕಾಯ್ದಿರಿಸಿ ಗೌರ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕಿ ಶ್ರೀದೇವಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಡಿಡಿಪಿಐ ಸುರೇಶ್ ಹೆಚ್.ಜಿ. ಅವರು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.





