ಅತಿವೃಷ್ಟಿ ಬಾಧಿತ ಬಸವಕಲ್ಯಾಣ ಕ್ಷೇತ್ರದ ರೈತರ ಪ್ರತಿ ಎಕರೆಗೆ ₹25,000 ಪರಿಹಾರ, ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಸವಕಲ್ಯಾಣದಲ್ಲಿ ಶುಕ್ರವಾರ ಶಾಸಕ ಶರಣು ಸಲಗರ ನೇತ್ರತ್ವದಲ್ಲಿ ಬಿಜೆಪಿಯಿಂದ ಬೃಹತ್ ಅರೆಬೆತ್ತಲೆ ಪ್ರತಿಭಟನೆ ನಡೆಯಿತು.
ಮಹಾತ್ಮ ಗಾಂಧಿ ವೃತ್ತದಿಂದ ಆರಂಭವಾದ ಮೆರವಣಿಗೆ ಡಾ.ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು. ಮೆರವಣಿಗೆಯಲ್ಲಿ ತಾಲ್ಲೂಕಿನ ಅಪಾರ ಸಂಖ್ಯೆಯಲ್ಲಿ ಜನರು ಸೇರಿದರು. ಮೆರವಣಿಗೆಯುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪರಿಹಾರಕ್ಕೆ ಆಗ್ರಹಿಸಿದರು. ಬಳಿಕ ಸಿಎಂ ಸಿದ್ದರಾಮಯ್ಯ ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಶೀಲ್ದಾರ್ ದತ್ತಾತ್ರೇಯ ಗಾದಾ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ಶಾಸಕ ಶರಣು ಸಲಗರ ಮಾತನಾಡಿ, ʼಮುಂಗಾರು ಹಂಗಾಮಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಸೋಯಾಬಿನ್, ತೊಗರಿ, ಹೆಸರು, ಉದ್ದು ಮತ್ತಿತರರ ಬೆಳೆಗಳು ಸಂಪೂರ್ಣ ಹಾಳಾಗಿವೆ. ರೈತರ ಜಮೀನಿನ ಫಲವತ್ತಾದ ಮಣ್ಣು ಕೊಚ್ಚಿ ಹೋಗಿದೆ. ಆದರೆ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲದ್ದರಿಂದ ಅವರು ಸ್ಪಂದಿಸುತ್ತಿಲ್ಲ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ದಿಕ್ಕುತೋಚದಂತಾಗಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಶರಣು ಸಲಗರ ಅವರು ಕೇವಲ ಚಡ್ಡಿ ಹಾಕಿಕೊಂಡು ತಲೆಗೆ ಹಸಿರು ಟವೆಲ್ ಕಟ್ಟಿಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅವರು, ತಾವೇ ಬಾರುಕೋಲಿನಿಂದ ಮೈಗೆ ಹೊಡೆದುಕೊಂಡರು. ಬಳಿಕ ರೈತರಿಂದ ಚಾಟಿ ಏಟು ತಿಂದರು. ಇದರಿಂದ ಬರೆ ಎಳೆದಂತೆ ಗಾಯಗಳಾಗಿ ಅವರ ಬೆನ್ನು, ಹೊಟ್ಟೆ ಕೆಂಪುಕೆಂಪಾಗಿತ್ತು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಜ್ಞಾನೇಶ್ವರ ಮುಳೆ, ನಗರ ಘಟಕದ ಅಧ್ಯಕ್ಷ ಸಿದ್ದು ಬಿರಾದಾರ ಹಾಗೂ ಇತರೆ ಪದಾಧಿಕಾರಿಗಳು, ಕಾರ್ಯಕರ್ತರು, ರೈತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.






