ಬಸವಣ್ಣನವರು ಸಮಾನತೆ, ಸಹೋದರತ್ವ ಹಾಗೂ ಮಾನವೀಯ ಮೌಲ್ಯಗಳ ಮೇಲೆ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಶಿವಶರಣರಾದ ಹರಳಯ್ಯ ಮತ್ತು ಕಲ್ಯಾಣಮ್ಮರ ತ್ಯಾಗವು ಕಲ್ಯಾಣ ಕ್ರಾಂತಿಯ ಪ್ರಮುಖ ಪ್ರೇರಕ ಘಟನೆಯಾಗಿದ್ದು, ಬಸವಾದಿ ಶರಣರ ವಚನಗಳು ಸಂವಿಧಾನದ ತಾತ್ವಿಕ ಆಧಾರವಾಗಿವೆ ಎಂದು ಚಿಂತಕ ಸುಮಂತ ಕಟ್ಟಿಮನಿ ಹೇಳಿದರು.
ಬೀದರ್ ನಗರದ ಅತಿವಾಳೆ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ವಚನ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ʼಶಿವಶರಣ ಹರಳಯ್ಯ ಹಾಗೂ ಕಲ್ಯಾಣಮ್” ಅವರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಬಸವರಾಜ ಬಲ್ಲೂರ ಉಪನ್ಯಾಸ ನೀಡಿ, ʼ12ನೇ ಶತಮಾನದಲ್ಲಿ ಬಸವಾದಿ ಶರಣರ ವೈಚಾರಿಕ ಕ್ರಾಂತಿಯು ಪ್ರಜಾಪ್ರಭುತ್ವದ ಬೀಜ ಬಿತ್ತಿದ ಕ್ರಾಂತಿಯಾಗಿತ್ತು. ಹರಳಯ್ಯ ಮತ್ತು ಕಲ್ಯಾಣಮ್ಮರ ಚಮ್ಮಾವುಗೆ ಘಟನೆಯು ಮಾನವೀಯತೆ ಮತ್ತು ಸಮಾನತೆಯ ಶಾಶ್ವತ ಸಂಕೇತವಾಗಿದೆʼ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷೆ ಸುನಿತಾ ದಾಡಗೆ ಮಾತನಾಡಿ, ʼವಚನ ಚಿಂತನೆ ಮನೆ-ಮನೆಗೂ ತಲುಪಬೇಕು. ಮಕ್ಕಳಲ್ಲಿ ಶರಣ ಸಂಸ್ಕೃತಿ, ಪ್ರೀತಿ, ಗೌರವ ಮತ್ತು ಮಾನವೀಯ ಮೌಲ್ಯ ಬೆಳೆಸುವ ಪ್ರಯತ್ನ ನಾವು ಮಾಡಬೇಕುʼ ಎಂದು ಹೇಳಿದರು.
ಶೈಲಜಾ ಕಲ್ಯಾಣರಾವ ಚಳ್ಕಾಪುರೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ʼಬಸವತತ್ವ ನಿಷ್ಠುರರ ಮನೆಯಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯ ಇರಬೇಕು. ಗುರುಬಸವ ಪ್ರಾರ್ಥನೆ ಮಾಡುವಂತಿರಬೇಕು, ತಂದೆ-ತಾಯಿ ಮತ್ತು ಸಾಮೂಹಿಕ ಪ್ರಸಾದ ಸೇವನೆ, ಮನೆಯ ಕಾರ್ಯಕ್ರಮಗಳಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು. ಮಕ್ಕಳಲ್ಲಿ ಬಸವ ಸಂಸ್ಕೃತಿ ಮತ್ತು ಉತ್ತಮ ಸಂಸ್ಕಾರ ನೀಡಬೇಕಿದೆ. ವಚನ ಸಾಹಿತ್ಯ ಪರಿಷತ್ತು ಮನೆ-ಮನೆಗೆ ಚಿಂತನಾಗೋಷ್ಠಿ ಆಯೋಜಿಸುವ ಉದ್ದೇಶ ಹೊಂದಿದೆʼ ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಭಾಗವಹಿಸಿದ್ದ ಹಾಸ್ಟೆಲ್ ಸಿಬ್ಬಂದಿ ಕರ್ತವ್ಯದಿಂದ ಬಿಡುಗಡೆ
ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಮಹಿಳಾ ಸಾಂಸ್ಕೃತಿಕ ಸಂಘದ ಸದಸ್ಯೆರಾದ ಕಸ್ತೂರಿಬಾಯಿ ಬಿರಾದಾರ, ಶಕುಂತಲಾ ಮಲ್ಕಪ್ಪನೋರ್, ಮೀನಾಕ್ಷಿ ಪಾಟೀಲ್, ಸವಿತಾ ಗಂಧಿಗುಡೆ, ರುಕ್ಮಿಣಿ ಕೋಟೆ ಹಾಗೂ ಲಕ್ಷ್ಮೀ ಸಿರ್ಸಿ ವಚನಗಾನ ನಡೆಸಿದರು. ಬಸವಾನುಯಾಯಿಗಳಾದ ಉಮಾಕಾಂತ ಮೀಸೆ ನಿರೂಪಿಸಿದರು, ಬಸವರಾಜ ಮೂಲಗೆ ಸ್ವಾಗತಿಸಿರು.





