ಔರಾದ್ ಮತಕ್ಷೇತ್ರ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ರಸ್ತೆ, ಸೇತುವೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಯ ದುರಸ್ತಿಗೆ ಮುಂದಾಗಿ ಸರ್ಕಾರ ಕೂಡಲೇ ಹೆಚ್ಚಿನ ಅನುದಾನ ಒದಗಿಸಬೇಕೆಂದು ಶಾಸಕ ಪ್ರಭು ಬಿ.ಚವ್ಹಾಣ ಆಗ್ರಹಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಶಾಸಕ ಚವ್ಹಾಣ ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು ʼಔರಾದ(ಬಿ) ಮತಕ್ಷೇತ್ರದಲ್ಲಿ ಭಾರಿ ಮಳೆಯಿಂದ ಕೆಲವು ರಸ್ತೆಗಳು ಹಾಳಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. 2025-26ನೇ ಸಾಲಿನ ಮುಖ್ಯಮಂತ್ರಿಗಳ ಅನುದಾನದಡಿ 39.13 ಲಕ್ಷ ಮಂಜೂರು ಮಾಡಿದ್ದು, 29.34 ಲಕ್ಷ ಬಿಡುಗಡೆ ಮಾಡಲಾಗಿದೆʼ ಎಂದು ಮಾಹಿತಿ ನೀಡಿದರು.
ಸಚಿವರು ನೀಡಿದ ಮಾಹಿತಿಗೆ ಶಾಸಕ ಪ್ರಭು ಬಿ.ಚವ್ಹಾಣ ಅವರು ಬೇಸರ ವ್ಯಕ್ತಪಡಿಸಿ, ʼಪ್ರಸಕ್ತ ಸಾಲಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಹಾನಿ ಸಂಭವಿಸಿದ್ದು, ಗ್ರಾಮೀಣ ಭಾಗದ ಎಲ್ಲ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ರಸ್ತೆಗಳನ್ನು ದುರಸ್ತಿ ಮಾಡಿಕೊಡುವಂತೆ ಅನೇಕ ಸಲ ಮುಖ್ಯಮಂತ್ರಿಗಳು, ಸಚಿವರನ್ನು ಭೇಟಿಯಾಗಿ ವಿಶೇಷ ಪ್ಯಾಕೇಜ್ ನೀಡುವಂತೆ ಒತ್ತಾಯಿದ್ದೆ. ಸರ್ಕಾರ ಕಣ್ಣು, ಕಿವಿ ಇಲ್ಲದಂತೆ ವರ್ತಿಸುತ್ತಿದ್ದು, ನೊಂದವರ ಧ್ವನಿ ಕೇಳಿಸಿಕೊಳ್ಳುತ್ತಿಲ್ಲʼ ಎಂದು ಅಸಮಧಾನ ವ್ಯಕ್ತಪಡಿಸಿದರು.
ಈ ವರ್ಷ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದ್ದು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅತಿ ಹೆಚ್ಚಿನ ಹಾನಿ ಔರಾದ(ಬಿ) ಕ್ಷೇತ್ರದಲ್ಲಿ ಉಂಟಾಗಿದೆ. ಎಲ್ಲ ಭಾಗಗಳಲ್ಲಿ ರಸ್ತೆ, ಸೇತುವೆ, ಕೆರೆ-ಕಟ್ಟೆಗಳು ಒಡೆದಿವೆ. ಜನ-ಜಾನುವಾರು ಕೊಚ್ಚಿಕೊಂಡು ಹೋಗಿವೆ. ಶಾಲೆ, ಅಂಗನವಾಡಿ ಸೇರಿದಂತೆ ಅನೇಕ ಸಾರ್ವಜನಿಕ ಆಸ್ತಿಪಾಸ್ತಿಗಳು ಹಾನಿಗೀಡಾಗಿದ್ದು, ನೂರಾರು ಕೋಟಿ ನಷ್ಟವಾಗಿದೆ. ಆದರೆ ಸಂಕಷ್ಟದಲ್ಲಿರುವ ಜನತೆಗೆ ನೆರವಾಗಬೇಕಾದ ಸರ್ಕಾರ ಅತ್ಯಲ್ಪ ಪ್ರಮಾಣದ ಅನುದಾನ ನೀಡುವ ಮೂಲಕ ಜನ ವಿರೋಧಿಯಂತೆ ನಡೆದುಕೊಂಡಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ : ಬೀದರ್ | ವಿದ್ಯಾರ್ಥಿಗಳಿಗೆ ʼಗಣಿತ ಉದ್ಯಾನʼ ಪ್ರೇರಣೆಯಾಗಲಿ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಸಚಿವ ಪ್ರಿಯಾಂಕ್ ಖರ್ಗೆ ಅವರು, ʼಪ್ರಗತಿ ಪಥ ಯೋಜನೆಯಡಿ ಔರಾದ(ಬಾ) ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 22 ಕಿ.ಮೀ ಉದ್ದದ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲು 16.04 ಕೋಟಿಗಳನ್ನು ಹಂಚಿಕೆ ಮಾಡಲಾಗಿದೆ. ಆರ್ಥಿಕ ಇಲಾಖೆಯು ಕಾಲ ಕಾಲಕ್ಕೆ ಒದಗಿಸುತ್ತಿರುವ ಅನುದಾನದ ಮಿತಿಯೊಳಗೆ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕಿದೆʼ ಎಂದು ಉತ್ತರಿಸಿದರು.





