14ನೇ ಶತಮಾನದ ಶಿವಶರಣರಲ್ಲಿ ಪ್ರಜ್ವಲಿಸಿದ ಹೇಮರೆಡ್ಡಿ ಮಲ್ಲಮ್ಮ ದೈವಭಕ್ತಿ, ಕಾಯಕ ನಿಷ್ಠೆ, ದಾನ ಧರ್ಮದಿಂದ, ಆದರ್ಶ ಗೃಹಿಣಿಯಾಗುವ ಮೂಲಕ ಲೋಕ ಪ್ರಸಿದ್ಧಿ ಪಡೆದಿದ್ದರು. ಶ್ರೀಶೈಲ ಮಲ್ಲಿಕಾರ್ಜುನನ್ನು ಸಾಕ್ಷಾತ್ಕರಿಸಿಕೊಂಡ ಹೇಮರೆಡ್ಡಿ ಮಲ್ಲಮ್ಮ ಬದುಕು ಮನುಕುಲಕ್ಕೆ ಆದರ್ಶ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಹೇಳಿದರು.
ನಗರದ ಹೇಮರೆಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ʼಮಹಾತ್ಮರು ಕೇವಲ ಒಂದು ಜಾತಿಗೆ ಸೀಮಿತರಾಗಬಾರದು. ಹೇಮರೆಡ್ಡಿ ಮಲ್ಲಮ್ಮ ಅವರ ಆದರ್ಶಗಳನ್ನು ತಾವೆಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಈ ಮೂಲಕ ಸನ್ಮಾರ್ಗದಲ್ಲಿ ಸಾಗಬೇಕುʼ ಎಂದರು.
ಶಾಸಕ ಡಾ.ಶೈಲೆಂದ್ರ ಬೆಲ್ದಾಳೆ ಮಾತನಾಡಿ, ʼಹೇಮರೆಡ್ಡಿ ಮಲ್ಲಮ್ಮ ಅವರ ಪರಮ ಶಿವಭಕ್ತೆ. ತಮ್ಮ ಸಮಾಜದವರದ್ದು ಬೇಡುವ ಕೈಯಾಗಬಾರದು ಕೊಡುವ ಕೈಯಾಗಬೇಕು ಎನ್ನುವುದು ಮಲ್ಲಮ್ಮನವರ ಆಸೆಯಾಗಿತ್ತು ಅದರಂತೆ ರೆಡ್ಡಿ ಸಮಾಜ ಈಗ ಬಲಿಷ್ಠ ಸಮಾಜವಾಗಿದೆ. ಸಮಾಜದವರ ಮನವೀಯಂತೆ ಸಮುದಾಯ ಭವನಕ್ಕಾಗಿ 15 ಲಕ್ಷ ಅನುದಾನ ನೀಡಿದ್ದೇನೆʼ ಎಂದರು.
ಹಿರಿಯ ಉಪನ್ಯಾಸಕ ಶಿವಶರಣಪ್ಪಾ ಹುಗ್ಗಿ ಪಾಟೀಲ್ ಹೇಮರೆಡ್ಡಿ ಮಲ್ಲಮ್ಮ ಜೀವನ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ, ಸರ್ಕಾರಿ ಸೇವೆಗೆ ಆಯ್ಕೆಯಾದ, ಮುಂಬಡ್ತಿ, ನಿವೃತ್ತರಾದ ಹಾಗೂ ಎಂಬಿಬಿಎಸ್ ಪದವಿ ಪಡೆದವರಿಗೆ ಸನ್ಮಾನಿಸಲಾಯಿತು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪೌರಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್, ಬೀದರ ನಗರಸಭೆ ಅಧ್ಯಕ್ಷ ಮಹ್ಮದ ಗೌಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಗರಸಭೆ ಸದಸ್ಯ ರಾಜು ಚಿಂತಾಮಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಎನ್.ವಿ.ಗುರೂಜಿ, ರೆಡ್ಡಿ ಸಮಾಜದ ಜಿಲ್ಲಾಧ್ಯಕ್ಷ ಶಂಕರರೆಡ್ಡಿ ಚಿಟ್ಟಾ, ನಿವೃತ್ತ ಎಡಿಸಿ ಬಾಬುರೆಡ್ಡಿ ಸಂಗ್ರಾಮ ರೆಡ್ಡಿ, ಗೋಪಾಲ್ ರೆಡ್ಡಿ, ರವಿ ರೆಡ್ಡಿ, ಚಂದ್ರಶೇಖರ ರೆಡ್ಡಿ, ಶ್ರೀನಿವಾಸ್ ರೆಡ್ಡಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಮಾತ್ರಭಾಷೆ ಕನ್ನಡದಲ್ಲೇ 4,321 ವಿದ್ಯಾರ್ಥಿಗಳು ಫೇಲ್!





